ಕಲಬುರಗಿ: ಮನುಷ್ಯರಲ್ಲಿಯೇ ಮೇಲು-ಕೀಳು, ದೊಡ್ಡವರು-ಸಣ್ಣವರು, ಅಸ್ಪಷ್ಯರು ಎಂಬ ಜಾತಿ ವ್ಯವಸ್ಥೆ ಅಪಾಯಕಾರಿ. ಇದರಿಂದ ಸಮಾಜದಲ್ಲಿ ಕೋಮು ಗಲಭೆ, ಅಶಾಂತಿ ಉಂಟಾಗುತ್ತದೆ. ಅಭಿವೃದ್ಧಿಯ ಬಗ್ಗೆ ಅಂಕಿ-ಅಂಶಗಳಲ್ಲಿಯೇ ಹೇಳಬಹುದೇ ಹೊರತು, ಜಾತಿ ವ್ಯವಸ್ಥೆ, ಅಸ್ಪಷ್ಯತೆ ಸಂಪೂರ್ಣವಾಗಿ ನಾಶವಾಗದೆ ಹೊರತು, ನೈಜ ಅಭಿವೃದ್ಧಿ ಸಾಧ್ಯವಾಗುವುದಿಲ್ಲ ಎಂದು ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ.ಬಾಬುರಾವ ಶೇರಿಕಾರ ಮಾರ್ಮಿಕವಾಗಿ ಹೇಳಿದರು.
ನಗರದ ನೋಬೆಲ್ ಶಾಲೆಯ ಸಮೀಪದ ‘ಸಿದ್ದಾರ್ಥ ಕಂಪ್ಯೂಟರ ತರಬೇತಿ ಕೇಂದ್ರ’ದಲ್ಲಿ ‘ಡಾ.ಬಿ.ಆರ್.ಅಂಬೇಡ್ಕರ್ ಇಂಟಿಗ್ರೇಟೆಡ್ ರೀಸರ್ಚ್ ಇನ್ಸ್ಟಿಟ್ಯೂಟ್’ ಮತ್ತು ‘ಹೈದ್ರಾಬಾದ ಕರ್ನಾಟಕಸ ಸಿದ್ದಾರ್ಥ ಸೇವಾ ಸಂಸ್ಥೆ’ಯು ಜಂಟಿಯಾಗಿ ಸೋಮವಾರ ಸಂಜೆ ಏರ್ಪಡಿಸಿದ್ದ ‘206ನೇ ಭೀಮಾ ಕೋರೆಗಾಂವ ವಿಜಯೋತ್ಸವ ದಿನಾಚರಣೆ’ಯ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ‘ಭೀಮಶಕ್ತಿ’ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಜಿಲ್ಲಾ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ಹಾಗೂ ಸಮಾಜ ಸೇವಕ ಡಾ.ಸುನೀಲಕುಮಾರ ಎಚ್.ವಂಟಿ ಮಾತನಾಡಿ, ಪೇಶ್ವೆ ಸೈನಿಕರು ಮತ್ತು ಮಹಾರ ಸಮುದಾಯದ ದಲಿತ, ಶೋಷಿತರ ಸೈನಿಕರ ನಡುವೆ ಜರಗಿದ ಯುದ್ಧದಲ್ಲಿ ಮಹಾರ ಸೈನಿಕರು ವಿಜಯಶಾಲಿಗಳಾದರು. ಇದು ದಲಿತರ ಸ್ವಾಭಿಮಾನದ ವಿಜಯೋತ್ಸವ. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಸ್ಪೂರ್ತಿಯಾದ ಯುದ್ಧ ಇದಾಗಿದೆ ಎಂದು ಯುದ್ಧದ ಹಿನ್ನಲೆ, ಶೋಷಿತ ಸಮುದಾಯ ನೋವುಗಳನ್ನು ವಿವರಿಸಿದರು.
ವಿವಿಧ ಕ್ಷೇತ್ರದ ಸಾಧಕರಾದ ಎಚ್.ಬಿ.ಪಾಟೀಲ, ಮಹಾಂತೇಶ ದೊಡ್ಡಮನಿ, ಹಮೀದ್ ಅಲಿ, ವತ್ಸಲಾಬಾಯಿ, ರಾಜಕುಮಾರ ಗಾಯಕವಾಡ, ಸುಜಯ್ ಎಸ್.ವಂಟಿ ಅವರಿಗೆ ‘ಭೀಮಶಕ್ತಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಮುಖರಾದ ನಂದಕುಮಾರ ತಳಕೇರಿ, ಅಶೋಕ ಕಾಳೆ, ವಿಜಯಕುಮಾರ ಡಾಂಗೆ, ವೀರೇಶ ತೋಳೆ, ವಿಜಯಕುಮಾರ ಹಳ್ಳಿ, ರಾಹುಲ ಉಪಾರೆ, ಮಂಜುನಾಥ ಕಲ್ಲಹಂಗರಗಾ, ಸಿದ್ದಾರ್ಥ ಎಸ್.ತಳಕೇರಿ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.