ಶಹಾಬಾದ: ಕೋರೆಗಾಂವ ಯುದ್ಧ ಸಂಘಟನೆಯ ಶಕ್ತಿಯನ್ನು ವಿಶ್ವಕ್ಕೆ ಮತೊಂದು ಬಾರಿ ತೋರಿಸಿದ ದಲಿತ ಸಮುದಾಯದ ಅಸಾಮಾನ್ಯ ಸಾಹಸ ಕಥೆಯಾಗಿದೆ ಎಂದು ಡಾ.ರವೀಂದ್ರ ನರೋಣಿ ಹೇಳಿದರು.
ಅವರು ಸೋಮವಾರ ಮರತೂರ ಗ್ರಾಮದಲ್ಲಿ ದಲಿತ ಯುವ ಸಂಘಟನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಭೀಮಾ ಕೋರೆಗಾಂವ್ ವಿಜಯೋತ್ಸವ ದಿನಾಚರಣೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಮಾತನಾಡಿದರು.
ಅಂಬೇಡ್ಕರ ಜೀವನಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಯುವಕರು ಸಮಾಜ ಕಟ್ಟುವ ಕಾರ್ಯಕ್ಕೆ ಮುಂದಾಗಬೇಕಾಗಿದೆ. ಅಂಬೇಡ್ಕರ ಕೇವಲ ಸಂವಿಧಾನ ಶಿಲ್ಪಿಯಲ್ಲದೆ ಒಬ್ಬ ಇತಿಹಾಸಕಾರ, ಚಿಂತಕರಾಗಿದ್ದರು. ಕೋರೆಗಾಂವ್ ಘಟನೆಯನ್ನು ಇತಿಹಾಸದ ಪುಟಗಳಲ್ಲಿ ದಾಖಲು ಮಾಡಿದ್ದು ಡಾ. ಅಂಬೇಡ್ಕರ ಎಂದರು.ಅಸಾಧ್ಯ ಕಾರ್ಯವನ್ನು ಸಂಘಟನೆಯಿಂದ ಸಾಧ್ಯ ಮಾಡಿ ತೋರಿಸಿದ 1818ರ ಭೀಮಾ ಕೋರೆಗಾಂವ್ ಯುದ್ಧ ವಿಶ್ವಕ್ಕೆ ದಲಿತ ಹಾಗೂ ಭಾರತೀಯರ ಶಕ್ತಿಯನ್ನು ತೋರಿಸಿಕೊಟ್ಟ ಮಹಾಯುದ್ಧವಾಗಿದೆ ಎಂದು ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ಚಿಂತಕ ಕೆ.ಎಸ್.ಬಂಧು ಮಾತನಾಡಿ, ಕೋರೆಗಾವ ಯುದ್ಧ ಡಾ. ಬಾಬಾ ಸಾಹೇಬ್ ಅಂಬೇಡ್ಕರರಿಗೆ ದಲಿತ ಹೋರಾಟಕ್ಕೆ ಮುನ್ನುಡಿ ಬರೆಯಿತು. ಪೇಶ್ವೆಯುವರು ದಲಿತರಿಗೆ ಮಾಡಿದ ಅವಮಾನದಿಂದಾಗಿ ಸಿಡಿದ್ದೆದ್ದ 800 ಸೈನಿಕರು ಪೇಶ್ವೆಯವರ ಬಲಿಷ್ಠ 32,000 ಸೈನಿಕರನ್ನು ಸೋಲಿಸಿ ಇತಿಹಾಸ ನಿರ್ಮಾಣ ಮಾಡಿದರು. ಇತಿಹಾಸದಲ್ಲಿ ಈ ಪ್ರಮಾಣದ ಸೈನ್ಯವನ್ನು ಸೋಲಿಸಿದ ದಾಖಲೆ ವಿಶ್ವದ ಯಾವುದೆ ದೇಶದ ಇತಿಹಾಸದಲ್ಲಿ ಕಂಡುಬರುವುದಿಲ್ಲ ಎಂದರು.
ಸಾನಿಧ್ಯ ವಹಿಸಿದ್ದ ವರಜ್ಯೋತಿ ಭಂತೇಜಿ ಮಾತನಾಡಿ, ವಿಶ್ವಕ್ಕೆ ಕೋರೆಗಾಂವ್ ಯುದ್ಧವನ್ನು ಪರಿಚಯಿಸಿದ ಇತಿಹಾಸಕಾರ ಡಾ. ಅಂಬೇಡ್ಕರ. 1818 ಜನೆವರಿ 1 ಕೋರೆಗಾಂವ್ ಯುದ್ಧ ನಡೆದ ದಿನವಾಗಿದ್ದು ಭಾರತೀಯರು ಜ. 1 ಸ್ವಾಭಿಮಾನಿ ದಿನವನ್ನಾಗಿ ಆಚರಿಸಲು ಕರೆ ನೀಡಿದ್ದಾರೆ. ದೇಶದಲ್ಲಿ ಇಂದಿಗೂ ಕೋರೆಗಾಂವ ಯುದ್ಧವನ್ನು ಸ್ವಾಭಿಮಾನದ ಸಂಕೇತವಾಗಿ ಆಚರಿಸಲಾಗುತ್ತದೆ ಎಂದರು.
ಶೌಕತ್ ಅಲಿ,ಶ್ಯಾಮರಾಯಗೌಡ ಮಾಲಿಪಾಟೀಲ,ನೀಲಕಂಠ ಕೊಂಡಗೋಳ, ಮಾಜಿ ಗ್ರಾಪಂ ಅಧ್ಯಕ್ಷ ಗುರುನಾಥ ಕಂಬಾ, ಸಂಜೀವಕುಮಾರ ಮೌರ್ಯ, ರಾಜಕುಮಾರ ಸರಡಗಿ,ನಾಗರಾಜ ಕಾಂಬ್ಳೆ,ಮಲ್ಲು ಬುಟ್ನಾಳ, ಜಗನ್ನಾಥ ಕವಲಗಾ,ರಸೂಲ್ ಕಡಗಂಚಿ ಸೇರಿದಂತೆ ಜೈಬೀಮ ತರುಣ ಸಂಘದವರು ಇದ್ದರು.
ಮಲ್ಲಿಕಾರ್ಜುನ ದೊಡ್ಡಿ ನಿರೂಪಿಸಿದರು,ಭೀಮಾಶಂಕರ ಕಂಬಾನೂರ ಸ್ವಾಗತಿಸಿದರು,ಮಿಲಿಂದ್ ಮುತ್ತಗಿ ವಂದಿಸಿದರು.