ಮಹಿಳಾ ಶಿಕ್ಷಣಕ್ಕೆ ಮುನ್ನೂಡಿ ಬರೆದ ಮತ್ತು ಸಾಮಾಜಿಕ ಸಮಾನತೆ ಸಾರಿದ,ಹೋರಾಟಗಾರ್ತಿ ಅಕ್ಷರದವ್ವ ಸಾವಿತ್ರಿಬಾಯಿ

0
17

ಜನೇವರಿ 3 ರಂದು ಸಾವಿತ್ರಿಬಾಯಿ ಫುಲೆಯವರ 193ನೇ ಜನ್ಮ ದಿನ

ಮಹಿಳಾ ಶಿಕ್ಷಣಕ್ಕೆ ಮುನ್ನೂಡಿ ಬರೆದ ಸಾಮಾಜಿಕ ಸಮಾನತೆ ಸಾರಿದ ಹೋರಾಟಗಾರ್ತಿ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರು ಸಮಾಜದ ನೋವುಗಳಿಗೆ ಸ್ಪಂದಿಸಿ, ಅವುಗಳ ನಿವಾರಣೆಗೆ ತಮ್ಮನ್ನೆ ತಾವು ಅರ್ಪಿಸಿಕೊಂಡ ಅನೇಕ ಮಹಾನ್ ವ್ಯಕ್ತಿಗಳನ್ನು ನಮ್ಮ ದೇಶದ ಇತಿಹಾಸದಲ್ಲಿ ನಾವು ಕಾಣುತ್ತೇವೆ. ಅವರಲ್ಲಿ ಅನೇಕ ಮಹಿಳೆಯರು ಇದ್ದು, ತಮ್ಮ ಕೆಲಸಗಳಿಂದ ಸಮಾಜ ನಿಬ್ಬೆರಗಾಗುವಂತೆ ಮಾಡಿದ್ದಾರೆ. ನಮ್ಮ ದೇಶದಲ್ಲಿ ಇನ್ನೂ ಮೂಢನಂಬಿಕೆಗಳು, ಕಂದಾಚಾರ ವ್ಯಾಪಕವಾಗಿದ್ದು, ಮಹಿಳೆಯರನ್ನು ತೀವ್ರ ಸಂಕಷ್ಟದಲ್ಲಿ ದುಡಿಕಿದ ಸಂದರ್ಭದಲ್ಲಿ ಅವುಗಳ ವಿರುದ್ಧ ಧ್ವನಿಯೆತ್ತಿ, ಮಹಿಳೆಯರ ಶಿಕ್ಷಣಕ್ಕಾಗಿ, ಉನ್ನತ ಸ್ಥಾನಮಾನಗಳಿಗಾಗಿ ದುಡಿದ ಮಹಾನ್ ಚೇತನ ಶ್ರೀಮತಿ ಸಾವಿತ್ರಿಬಾಯಿ ಫುಲೆ ಅವರು.

ಫುಲೆ ಸಾಂಪ್ರದಾಯಿಕ ಕುಟುಂಬದಲ್ಲಿ 1831, ಜನೇವರಿ 3 ರಂದು ಮಹಾರಾಷ್ಟದ ಸತಾರ್ ಜಿಲ್ಲೆಯ ನಯಿಗಾಂವ್ ಗ್ರಾಮದ ದಂಪತಿ ಖಂಡೋಜಿ ನೇವಸೆ ಪಾಟೀಲ್ ಹಾಗು ಲಕ್ಷ್ಮಿಬಾಯಿ ಅವರ ಮಗಳಾಗಿ ಜನಿಸಿದರು. 1840 ರಲ್ಲಿ ತಮ್ಮ ಸಂಬಂಧಿ ಜ್ಯೋತಿ ಬಾ ಫುಲೆ ಅವರೊಂದಿಗೆ 9 ನೇ ವರ್ಷದ ಬಾಲ್ಯದಲ್ಲೇ ಸಾವಿತ್ರಿ ಅವರನ್ನು ವಿವಾಹವಾಗಿದ್ದರು.

Contact Your\'s Advertisement; 9902492681

ಮಹಾರಾಷ್ಟದ ಪುಣೆಯಲ್ಲಿ ಅಸ್ಪೃಶ್ಯರು, ತಳವರ್ಗಗಳು ಹಾಗೂ ಮಹಿಳೆಯರಿಗಾಗಿ ಶಾಲೆಯನ್ನು ಆರಂಭಿಸಿ ಅಕ್ಷರ ಜ್ಞಾನ ನೀಡಲು ಈ ದಂಪತಿಗಳು ಪಟ್ಟಂತಹ ಕಷ್ಟ ಅಷ್ಟೀಷ್ಟಲ್ಲ. ಜಡ್ಡುಗಟ್ಟಿದ ಸಮಾಜದಿಂದ ಕಿರುಕುಳ ಅನುಭವಿಸಿದ ಫುಲೆಯವರು ತಮ್ಮ ಜೀವಿತ ಅವಧಿಯಲ್ಲಿ ತಳ ಸಮುದಾಯ, ಮಹಿಳೆಯರ ಶಿಕ್ಷಣ, ಅಸ್ಪೃಶ್ಯರ ಅಭ್ಯುಧಯಕ್ಕಾಗಿ ತಮ್ಮ ಜೀವನವನ್ನೆ ಅರ್ಪಿಸಿಕೊಂಡರು.

ಸುಮಾರು 18 ಶಾಲೆಗಳನ್ನು ಫುಲೆ ದಂಪತಿ ತೆರೆದು ಅಕ್ಷರ ಕ್ರಾಂತಿ ಮಾಡಿದರು. ತಾವು ಸ್ಥಾಪಿಸಿದ ಸತ್ಯ ಶೋಧಕ ಸಮಾಜದ ಮೂಲಕ,1876-77 ರ ಹೊತ್ತಿಗೆ 50ಕ್ಕೂ ಹೆಚ್ಚು ವಸತಿ ಶಾಲೆಗಳನ್ನು ನಡೆಸಿದರು. ವಿಶೇಷೆಂದರೆ ಫುಲೆ ದಂಪತಿ ಸ್ಥಾಪಿಸಿದ ಶಾಲೆಯಲ್ಲಿ ಓದಿದ ಡಾ.ಬಿ.ಆರ್ ಅಂಬೇಡ್ಕರ್ ಅವರ ತಂದೆ ರಾಮಾಜಿ ಸಕ್ಪಾಲ್ ಅವರು 4ನೇ ತರಗತಿ ಓದಿ ತೇರ್ಗಡೆಯಾಗಿ ಮಿಲಿಟರಿ ಸೇರಿದ್ದರು ಎನ್ನುವುದನ್ನು ಸ್ಮರಿಸಬಹುದಾಗಿದೆ.

1854 ರಲ್ಲಿ ರೈತರು ಹಾಗು ಕಾರ್ಮಿಕರಿಗಾಗಿ ರಾತ್ರಿ ಶಾಲೆಗಳನ್ನು ಆರಂಭಿಸಿದರು. ಸದಾ ಕೆಳ ವರ್ಗದ ಜನರ ಏಳ್ಗೆಗಾಗಿ ದುಡಿಯುತ್ತಿದ್ದ ಫುಲೆ ದಂಪತಿ ಒಮ್ಮೆ ಅಸ್ಪೃಶ್ಯ ಸಮೂದಾಯದ ಗರ್ಭೀಣಿ ಒಬ್ಬರು ಮೇಲ್ಜಾತಿಯವರ ಬಾವಿಯಲ್ಲಿ ನೀರಿಗಾಗಿ ಕಾದು ಕೊನೆಗೆ ನೀರು ಸಿಗದೆ ಬಾಯಾರಿ ಸುಸ್ತಾಗಿ ಬಿದ್ದಿದ್ದನ್ನೂ ನೋಡಿದರು. ಮುಂದೆ ಫುಲೆ ದಂಪತಿ ತಮ್ಮ ಮನೆಯ ಅಂಗಳದಲ್ಲಿ ಬಾವಿ ತೋಡಿಸಿ ಅಸ್ಪೃಶ್ಯರಿಗೆ ನೀರು ನೀಡಿದರು. 1888ರಲ್ಲಿ ಇವರ ಸೇವೆಯನ್ನು ಗುರುತಿಸಿ ಬ್ರೀಟಿಷ್ ಸರಕಾರ 6 ಸಾವಿರ ಜನರ ಸಮ್ಮುಖದಲ್ಲಿ ಮಹಾತ್ಮಾ ಜ್ಯೋತಿಬಾ ಫುಲೆ ಎಂಬ ಬಿರುದು ನೀಡಿ ಗೌರವಿಸಿತು.

ಧೈರ್ಯ ಹಾಗೂ ಸಾಹಸವನ್ನು ಚಿಕ್ಕಂದಿನಿಂದಲೇ ಮೈಗೂಡಿಸಿಕೊಂಡಿದ್ದ ಸಾವಿತ್ರಿಬಾಯಿ ಬಡಮಕ್ಕಳಿಗೆ ಪಾಠ ಕಲಿಸಲು ಹೋಗುತ್ತಿದ್ದರೆ, ಬ್ರಾಹ್ಮಣರು ದಾರಿಯುದ್ದಕ್ಕೂ ಮನೆಯ ಅಂಗಳದಲ್ಲಿ ನಿಂತು ಕುಹುಕವಾಡುತ್ತಿದ್ದರು. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ಅವರು ರಸ್ತೆಯಲ್ಲಿ ನಡೆದು ಹೋಗುತ್ತಿದ್ದರೆ ಮೈಮೇಲೆ ಸವರ್ಣಿಯರು ಸಗಣಿ ಎರಚುತ್ತಿದ್ದರು. ಅದಕ್ಕೆ ಪರ್ಯಾಯವಾಗಿ ಫೂಲೆಯವರು ಒಂದು ಸೀರೆಯನ್ನು ತೆಗೆದುಕೊಂಡು ಹೋಗುತ್ತಿದ್ದರು. ಕಲ್ಲುಗಳಿಂದ ಕೆಲವು ಸಲ ಪೆಟ್ಟು ಸಹ ತಿಂದಿದ್ದಾರೆ.

ನಿತ್ಯ ಇಂತಹ ನರಕಯಾತನೆ ಇದ್ಯಾವುದಕ್ಕೂ ಧೃತಿಗೆಡದೇ ಸಾವಿತ್ರಿಬಾಯಿ ಫುಲೆ ಶಾಲೆಗೆ ತೆರಳುತ್ತಿದ್ದರು. ಶಿಕ್ಷಣ ವಂಚಿತ ಕೆಲ ಸಮುದಾಯಕ್ಕೆ ಅಕ್ಷರ ದೀಕ್ಷೆ ನೀಡುವ ತಮ್ಮ ವೃತವನ್ನು ಮಾತ್ರ ಬಿಡಲಿಲ್ಲ. ಇಷ್ಟೆಲ್ಲಾ ಅವಮಾನ ಮಾಡಿದರೂ ತಮ್ಮ ಕಾರ್ಯದಲ್ಲಿ ತಾವು ತೊಡಗಿದ ಫುಲೆ ದಂಪತಿಯ ಸಂಯಮದ ವರ್ತನೆ ಮೇಲ್ಜಾತಿಯವರನ್ನು ಮತ್ತಷ್ಟು ಕೆರಳಿಸಿತು. ವಸತಿ ಶಾಲೆಯಲ್ಲಿ ಮಲಗಿದ್ದ ವೇಳೆಯಲ್ಲಿ ಫುಲೆ ದಂಪತಿಯ ಕೊಲೆ ಸಂಚನ್ನು ಕೂಡಾ ಯತ್ನಿಸಿದರು. ಸಹನೆಗೂ ಒಂದು ಮೀತಿ ಬೇಡವೇ? ಒಂದು ಬಾರಿ ತಿರುಗಿ ನಿಲ್ಲು ಎಂಬ ಆಪ್ತರ ಸಲಹೆಯಂತೆ ಕೊನೆಗೊಂದು ಬಾರಿ ಸಾವಿತ್ರಿಬಾಯಿ ವ್ಯಕ್ತಿಯೊಬ್ಬನ ಕಪಾಳಕ್ಕೆ ಬಾರಿಸಿಯೇ ಬಿಟ್ಟರು.

ಪತ್ನಿಗೆ ಪತಿಯ ಧೈರ್ಯ ಅಜ್ಞಾನದಿಂದ ಜ್ಞಾನದ ಕಡೆಗೆ ಈ ಜನರನ್ನು ಕರೆದುಕೊಂಡು ಹೊರಟ ನಿನ್ನ ಮಹತ್ವದ ಕಾರ್ಯಕ್ಕೆ ಬೈಗುಳ, ಅಪಮಾನ, ಹಿಯಾಳಿಕೆ ಸಾಮಾನ್ಯ. ಯಾವುದಕ್ಕೂ ಹೆದರಬೇಡ. ಈಗ ನೀನು ಮಾಡಿದ ಕೆಲಸ ಶತಮಾನದವರೆಗೆ ಮುಂದಿನ ಜನಾಂಗ ನಿನ್ನನ್ನು ಸ್ಮರಿಸುವಂತೆ ಮಾಡುತ್ತದೆ ಎಂದು ಸಾವಿತ್ರಿಬಾಯಿ ಫುಲೆಯರಿಗೆ ಜ್ಯೋತಿಬಾ ಫುಲೆ ಧೈರ್ಯ ತುಂಬುತ್ತಿದ್ದರು.

ಸಾಮಾಜಿಕ ಅನಿಷ್ಠ ಪದ್ಧತಿಗಳ ವಿರುದ್ಧ ಧ್ವನಿ ಎತ್ತಿದ ಆದರ್ಶ ದಂಪತಿ. ಶಿಕ್ಷಣದಿಂದ ಮಾತ್ರವೇ ಜೀವನದಲ್ಲಿ ಬಿಡುಗಡೆ ಹೊಂದಲು ನೆರವಾಗುವ ಸಾಧನ ಎನ್ನುವುದು ಸಾವಿತ್ರಿ ಬಾಯಿಯವರಿಗೆ ಮನವರಿಕೆ ಆಗಿತ್ತು. ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ದುಡಿಯುವುರೊಂದಿಗೆ ಅವರು ಹಳೆಯಮೌಢ್ಯ, ಅನಕ್ಷರತೆ, ಜಾತಿ, ಸಾಂಪ್ರದಾಯಗಳು ಮಾತ್ರವಲ್ಲದೇ ಅನೇಕ ಸಾಮಾಜಿಕ ಅನಿಷ್ಠಗಳ ವಿರುದ್ಧವು ಫುಲೆ ದಂಪತಿ ಉಗ್ರ ಹೋರಾಟ ನಡೆಸಿದರು. ವಿಧವೆಯರ ತಲೆ ಬೊಳಿಸುವ ಕ್ರೂರ ಸಂಪ್ರದಾಯದ ವಿರುದ್ದ ಸಾಮಾಜಿಕ ಬಂಡಾಯವನ್ನು ಆರಂಭಿಸಿದರು. ಅದೇ ನಿಟ್ಟಿನಲ್ಲಿ ಕ್ಷೌರಿಕರನ್ನು ಸಂಘಟಿಸಿ ವಿಧವೆಯರ ತಲೆ ಬೋಳಿಸುವುದನ್ನು ನಿರಾಕರಿಸಬೇಕೆಂದು ಕರೆ ನೀಡಿದರು. ಯಾವುದೇ ವಿರೋಧವನ್ನು ಲೆಕ್ಕಿಸದೇ ವಿಧವೆಯರ ಮರು ಮದುವೆ ಮಾಡಿಸಿ ಅವರ ಬಾಳನ್ನು ಬೆಳಗಿದರು.

ವಿಧವೆಯರು ಮತ್ತು ಅತ್ಯಾಚಾರಕ್ಕೆ ಒಳಗಾದ ಮಹಿಳೆಯರಿಗೆ ಹುಟ್ಟುವ ಮಕ್ಕಳಿಗಾಗಿ ಬಾಲಹತ್ಯಾ ಪ್ರತಿಬಂಧಕ ಗೃಹಗಳನ್ನು ತೆರೆದರು. 1863ರಲ್ಲಿ ಅನಾಥ ವಿಧವೆಯರ ಸುರಕ್ಷಿತಾ ಹೆರಿಗೆಗಾಗಿ ಗುಪ್ತ ಪ್ರಸೂತಿ ಗೃಹಗಳನ್ನು ಸ್ಥಾಪಿಸಿದರು. ಬಾಲ್ಯ ವಿವಾಹವನ್ನು ನಿರ್ಮೂಲನೆ ಮಾಡಲು ಜಾಗೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಂಡಿದ್ದರು.

ಹಲವು ಅನಾಥ ಆಶ್ರಮಗಳನ್ನು ಸ್ಥಾಪಿಸಿದ ಫುಲೆ ದಂಪತಿ ಅಪ್ಪ, ಅಮ್ಮಂದಿರನ್ನು ಕಳೆದುಕೊಂಡ ನೂರಾರು ಅನಾಥ ಮಕ್ಕಳಿಗೆ ತಾವೇ ಅಪ್ಪ-ಅಮ್ಮಂದಿರಾದರು. ತಮಗೆ ಮಕ್ಕಳಾದರೆ ಅನಾಥ ಮಕ್ಕಳ ಮೇಲಿನ ಪ್ರೀತಿ, ಕಾಳಜಿ, ಕಡಿಮೆಯಾಗಿ ಬಿಡುತ್ತದೆ ಏನೋ ಎಂದು ಭಾವಿಸಿ ಫುಲೆ ದಂಪತಿ ಸ್ವಂತ ಮಕ್ಕಳು ಬೇಡ ಎಂಬ ಕಠೋರ ನಿರ್ಧಾರಕ್ಕೆ ಬಂದರು. ಬ್ರಾಹ್ಮಣ ವಿಧವೆಗೆ ಹುಟ್ಟಿದ ಮಗುವೊಂದನ್ನು ದತ್ತು ಪಡೆದು, ಮಗುವನ್ನು ವೈದ್ಯನನ್ನಾಗಿ ಮಾಡಿದರು. ಮಗನಿಗೆ ಅಂತರ್ಜಾತಿ ವಿವಾಹವಾಗಲೂ ಕೂಡಾ ಪ್ರೋತ್ಸಾಹಿಸಿದರು. ಅವರು ಕೂಡಾ ಜನರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು.

ಅವರಲ್ಲಿ ಸಹ ಸಮಾಜದ ಬಗ್ಗೆ ಕಳಕಳಿ ಉಳ್ಳವರಾಗಿದ್ದರು ಅವರೇ ಡಾ.ಯಶ್ವಂತರಾವ್. ನನ್ನ ಎಲ್ಲಾ ಸಮಾಜಮುಖಿ ಕಾರ್ಯಗಳಿಗೆ ಪ್ರೇರಣೆ ನೀಡಿ ಯಶಸ್ವಿಯಾಗುವಂತೆ ನೋಡಿಕೊಂಡರು ನನ್ನ ಪತಿ ಎಂದು ಜ್ಯೋತಿ ಬಾ ಫುಲೆಯವರು ಪತ್ನಿ ಸಾವಿತ್ರಿಬಾಯಿ ಫುಲೆ ಬಗ್ಗೆ ಹೊಗಳಿದ್ದಾರೆ ವ್ಯಾಪಕವಾಗಿ ಪುಣೆಯಲ್ಲಿ ಹರಡಿದ ಪ್ಲೇಗ್ ಕಾಯಿಲೆಗೆ ತುತ್ತಾದ ರೋಗಿಗಳ ಸೇವೆಯಲ್ಲಿ ನಿಸ್ವಾರ್ಥವಾಗಿ ತೊಡಗಿದ ಅವರು ನಿರ್ಗತಿಕರಿಗಾಗಿ ಗಂಜಿ ಕೇಂದ್ರಗಳನ್ನು ಸ್ಥಾಪಿಸಿದರು. ಕ್ಷಾಮದ ಸಂದರ್ಭದಲ್ಲಿ ಬಡತನ, ಹಸಿವು, ನಿರುದ್ಯೋಗದಿಂದ ಪರಿಹರಿಸಿ ಘನತೆಯಿಂದ ಬದುಕುವ ದಾರಿ ಹುಡುಕಿ ಕೊಟ್ಟರು. ಕೊನೆಗೆ ತಾವೇ ಪ್ಲೇಗ್ ಮಹಾಮಾರಿ ರೋಗಕ್ಕೆ ತುತ್ತಾಗಿ ಅವರು 66ನೇ ವಯಸ್ಸಿಲ್ಲಿ 1872 ರ ಮಾರ್ಚ 10 ರಂದು ಸಾವನ್ನಪ್ಪಿದರು.

ಭಾರತದ ಪ್ರಥಮ ಮಹಿಳಾ ಶಿಕ್ಷಕಿ ಮಹಿಳಾ ಶಿಕ್ಷಣಕ್ಕೆ ಮುನ್ನೂಡಿ ಬರೆದ ಸಾಮಾಜಿಕ ಸಮಾನತೆ ಸಾರಿದ ಹೋರಾಟಗಾರ್ತಿ, ಅಕ್ಷರಜ್ಯೋತಿ ಶ್ರೀಮತಿ ಸಾವಿತ್ರಿಬಾಯಿ ಫುಲೆ ನೆನೆಯುವುದೆಂದರೆ, ಅವರು ಹಾಕಿ ಕೊಟ್ಟ ಮಾರ್ಗ, ಹೋರಾಟದ ಸ್ಪೂರ್ತಿ ಅವರು ಕಂಡ ಕನಸ್ಸು ನನಸ್ಸಾಗಲು ನಾವೆಲ್ಲರೂ ಪ್ರತಿಜ್ಞೆ ಕೈಗೊಂಡಾಗ ಮಾತ್ರ ಅವರ ಜನ್ಮ ದಿನವು ಅರ್ಥಪೂರ್ಣವಾಗುತ್ತದೆ. ಪುರುಷ ಪ್ರಧಾನ ಸಮಾಜದಲ್ಲಿ ಸಮಾನತೆ, ಶಿಕ್ಷಣ, ಸ್ವಾತಂತ್ಯ, ಅಭಿವ್ಯಕ್ತಿ ಹಕ್ಕಿನಿಂದ ವಂಚಿತಳಾಗಿದ್ದ ಮಹಿಳೆಗೆ ಶಿಕ್ಷಣ ನೀಡಿ ವಿಚಾರವಂತರನ್ನಾಗಿ ಮಾಡಿದ ಕೀರ್ತಿ ಮತ್ತು ಕೊಡುಗೆ ಸಾವಿತ್ರಿಬಾಯಿ ಫುಲೆಯವರಿಗೆ ಸಲ್ಲುತ್ತದೆ ಎಂದು ಹೇಳಬಹುದು.

•ಭೀಮಾಶಂಕರ ಪಾಣೇಗಾಂವ, ಯುವ ಪತ್ರಕರ್ತರು/ ಹವ್ಯಾಸಿ ಬರಹಗಾರರು, ಕಲಬುರಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here