ಶಹಾಪುರ; ಸಿರಿಧಾನ್ಯಗಳೇ ಸೂಪರ್ ಫುಡ್ | ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಸಾವಯವ ಹಬ್ಬ

0
38

ಯಾದಗಿರಿ: ಸಿರಿಧಾನ್ಯಗಳೇ ಸೂಪರ್ ಫುಡ್ ಗಳಾಗಿದ್ದು, ಸರಕಾರದ ಪ್ರೇರಣೆಯಿಂದ ಕೇವಲ ದೇಶ ಮಾತ್ರವಲ್ಲ ವಿಶ್ವದಾದ್ಯಂತ ಬೇಡಿಕೆಯಿದೆ. ದೇಶದ ಜನತೆ ಇವುಗಳನ್ನು ಬೆಳೆಯಲು ಮನಸ್ಸು ಮಾಡಬೇಕಾಗಿದೆ ಎಂದು ಯಾದಗಿರಿ ಶಾಸಕ ಚೆನ್ನಾರೆಡ್ಡಿಪಾಟೀಲ ತುನ್ನೂರ್ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕೃಷಿ ಇಲಾಖೆ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ ಬೆಂಗಳೂರು, ಜಿಲ್ಲಾ ಕೃಷಿಕ ಸಮಾಜ, ಆತ್ಮಾ ಯೋಜನೆ ಸಂಯುಕ್ತಾಶ್ರಯದಲ್ಲಿ ಶಹಾಪೂರಿನ ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದಲ್ಲಿ ನಡೆದ ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಸಾವಯವ ಹಬ್ಬದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Contact Your\'s Advertisement; 9902492681

ನಾವು ಪ್ರತಿದಿನ ಸೇವಿಸುವ ಆಹಾರ ಪದಾರ್ಥಗಳಿಗೆ ಹೋಲಿಸಿದರೆ ಸಿರಿಧಾನ್ಯಗಳಲ್ಲಿ ಸಿಗುವ ಪೌಷ್ಟಿಕಾಂಶಗಳ ಲಾಭವೇ ಹೆಚ್ಚಾಗಿದೆ. ಇತರ ಬೆಳೆಗಳಿಗೆ ಹೋಲಿಸಿದರೆ ಸಿರಿಧಾನ್ಯ ಬೆಳೆಗಳಿಗೆ ಕಡಿಮೆ ನೀರು ಸಾಕು. ಕೀಟ ಬಾಧೆ ಮತ್ತು ಹವಾಮಾನ ವೈಪರೀತ್ಯದ ಸವಾಲನ್ನೂ ಎದುರಿಸುವ ಸಾಮರ್ಥ್ಯವನ್ನು ಸಿರಿಧಾನ್ಯಗಳ ಸಸಿಗಳು ಹೊಂದಿವೆ. ಇವು ಇತರ ಬೆಳೆಗಳಿಗಿಂತ ಹೆಚ್ಚು ಪರಿಸರ ಸ್ನೇಹಿಯಾಗಿವೆ ಎಂದರು.

ಸರ್ಕಾರವು ಸಿರಿಧಾನ್ಯಗಳ ಕೃಷಿಗೆ ಮತ್ತು ಬಳಕೆಗೆ ಒತ್ತು ನೀಡುವ ಹೆಜ್ಜೆಗಳನ್ನು ಇಟ್ಟಿದ್ದು, ಕೃಷಿಕರು ಮತ್ತು ಕೃಷಿಕರಲ್ಲದ ಗ್ರಾಹಕರು ಸರಕಾರದ ಜತೆಗೆ ಕೈ ಜೋಡಿಸಿ ನಮ್ಮ ಮತ್ತು ಮುಂದಿನ ಪೀಳಿಗೆಗಳ ಹಿತಕ್ಕಾಗಿ ಸಿರಿಧಾನ್ಯ ಬೆಳೆಯುವ ಮತ್ತು ಬಳಕೆ ಮಾಡುವ ಮೂಲಕ ನಮ್ಮ ಸಾಮಾಜಿಕ ಕರ್ತವ್ಯವನ್ನು ನಿಭಾಯಿಸಬೇಕಾದ ಸಮಯ ಬಂದಿದೆ ಎಂದು ಶಾಸಕರು ನುಡಿದರು.

ಜಿಲ್ಲಾಧಿಕಾರಿ ಡಾ.ಸುಶೀಲ ಬಿ ಅವರು ಮಾತನಾಡಿ: ನಮ್ಮ ಹಿರಿಯರು ಸಾಂಪ್ರದಾಯಿಕ ಬರಗು, ನವಣೆ, ಸಾವೆ, ಹಾರಕ, ಸಾಮೆ, ರಾಗಿ, ಸಜ್ಜೆ ಮತ್ತು ಜೋಳ ಸೇರಿದಂತೆ ಇನ್ನಿತರ ಸಿರಿಧಾನ್ಯಗಳನ್ನು ಬೆಳೆದು ಸೇವಿಸಿದ ಪರಿಣಾಮ ಅವರ ಆರೋಗ್ಯ ಮತ್ತು ಆಯುಷ್ಯವು ಉನ್ನತ ಮಟ್ಟದಲ್ಲಿತ್ತು. ನಮಗೆ ನಿಜವಾದ ಆಸ್ತಿಯೇ ಉತ್ತಮವಾದ ಆರೋಗ್ಯವಾಗಿದೆ. ನಮಗೆ ಉತ್ತಮವಾದ ಔಷಧಗಳೇ ಅಡುಗೆ ಮನೆಯ ಸಿರಿಧಾನ್ಯಗಳಾಗಿವೆ. ಪ್ರಸ್ತುತ ನಾವು ಅವುಗಳ ಪ್ರಾಮುಖ್ಯತೆ ಮತ್ತು ಮಹತ್ವವನ್ನು ಅರಿತು ಸೇವಿಸುವ ಜೊತೆಗೆ ಪ್ರಚಾರಗೊಳಿಸಿ ಆರೋಗ್ಯಪೂರ್ಣ ಸಮಾಜ ಕಟ್ಟಬೇಕಿದೆ ಎಂದರು.

ಆಧುನಿಕ ಯುಗದಲ್ಲಿ ಮುಂದಿನ ಪೀಳಿಗೆ ಉತ್ತಮ ಆರೋಗ್ಯವೇ ನಮ್ಮ ಆಸ್ತಿ ಎಂಬ ಮನೋಭಾವ ಇಟ್ಟುಕೊಂಡು ಆಹಾರ ಸೇವನೆ ಮಾಡಬೇಕಿದೆ. ಆ ಉದ್ದೇಶದಿಂದ ನಮ್ಮ ನಡೆ ಸಿರಿಧಾನ್ಯಗಳ ಕಡೆ ಎಂಬ ಘೋಷಣೆಯೊಂದಿಗೆ ಸಿರಿಧಾನ್ಯಗಳ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗರಿಮಾ ಪನ್ವಾರ್ ಅವರು ಮಾತನಾಡಿ: ಪ್ರಸ್ತುತ ದಿನಗಳಲ್ಲಿ ಧಾನ್ಯಗಳ ಮಹತ್ವ ಅರಿಯದೆ ಹತ್ತಾರು ಬಗೆಯ ಆಹಾರ ಸೇವಿಸಿ ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ ಸೇರಿದಂತ ಹಲವು ಬಗೆಯ ಸಮಸ್ಯೆಗಳಿಗೆ ಜನರು ಸಿಲುಕುತ್ತಿದ್ದಾರೆ. ಈ ವಿಷಯವನ್ನರಿತು ಕೃಷಿ ಇಲಾಖೆ ಮತ್ತು ಆರೋಗ್ಯ ಇಲಾಖೆ ಸಿರಿಧಾನ್ಯಗಳಿಂದ ತಯಾರಿಸಿದ ಹತ್ತಾರು ಬಗೆಯ ಖಾದ್ಯ, ತಿನಿಸುಗಳನ್ನು ಹಾಗೂ ತಾಂತ್ರಿಕತೆ ಬಳಸಿ ವಿವಿಧ ರೂಪಗಳಲ್ಲಿ ಬದಲಾಯಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿ ಜಾಗೃತಿ ಮೂಡಿಸಬೇಕು ಎಂದು ಅವರು ತಿಳಿಸಿದರು.

ಇದೇ ವೇಳೆ ಸಿರಿಧಾನ್ಯಗಳಿಂದ ಅಭಿವೃದ್ಧಿಪಡಿಸಿರುವ ಉತ್ಪನ್ನಗಳನ್ನು ಮಳಿಗೆಗಳಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಶಾಸಕರು, ಜಿಲ್ಲಾಧಿಕಾರಿ, ಸಿಇಓ ಅವರು ಮಳಿಗೆಗಳಿಗೆ ಚಾಲನೆ ನೀಡಿದರು. ಆಯ್ದ ರೈತ ಫಲಾನುಭವಿಗಳಿಗೆ ಕೃಷಿ ಸಾಮಾಗ್ರಿಗಳನ್ನು ವಿತರಿಸಿದರು.

ಸಿರಿಧಾನ್ಯಗಳನ್ನು ಒಣಕೆಯಿಂದ ಕುಟ್ಟಿ, ಸಿರಿಧಾನ್ಯಗಳನ್ನು ಜಿಲ್ಲಾಧಿಕಾರಿ ಮತ್ತು ಸಿಇಓ ಅವರು ಬೀಸುವ ಮುಖಾಂತರ ವೇದಿಕೆ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಪ್ರೇರಣೆ ನೀಡಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಬಸನಗೌಡ ಮಾಲಿ ಪಾಟೀಲ್ , ರಾಯಚೂರು ಆಡಳಿತ ಮಂಡಳಿ ಸದಸ್ಯ ಮಲ್ಲಿಕಾರ್ಜುನ ಡಿ , ರಾಯಚೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ವಿಸ್ತರಣಾ ನಿರ್ದೇಶಕ ಡಾ.ಎಸ್.ಬಿ ಗೌಡಪ್ಪ, ಕದವಡಿಮಟ್ಟಿ ಕೃಷಿ ವಿಶ್ವ ವಿದ್ಯಾಲಯ ವಿಜ್ಞಾನಿ ಡಾ.ಜಯಪ್ರಕಾಶ್ ನಾರಾಯಣ್, ಭೀಮರಾಯನಗುಡಿ ಕೃಷಿ ವಿದ್ಯಾಲಯದ ಡಿನ್ ಡಾ. ಪ್ರಕಾಶ್ ಕುಚನೂರು, ಭೀಮರಾಯನ ಗುಡಿ ಕೃಷಿ ವಿಸ್ತರಣಾ ಮುಂದಾಳು ಡಾ.ಪಾಲಯ್ಯ, ಭೀಮರಾಯಗುಡಿ ಕೃಷಿ ವಿಶ್ವವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಡಾ. ಶ್ಯಾಮರಾವ ಕುಲಕರ್ಣಿ, ಜಂಟಿ ಕೃಷಿ ನಿರ್ದೇಶಕಿ ಮಂಜುಳಾ ಬಸರೆಡ್ಡಿ, ಶಹಾಪುರ ಕೃಷಿ ಸಹಾಯಕ ನಿರ್ದೇಶಕ ಸುನೀಲಕುಮಾರ ಜಿ ಯರಗೋಳ, ಸುರಪುರ ಸಹಾಯಕ ನಿರ್ದೇಶಕ ಭೀಮರಾಯ ಹವಾಲ್ದಾರ್, ಯಾದಗಿರಿ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ವಾರದ್, ತಹಸೀಲ್ದಾರಾದ ಉಮಾಕಾಂತ ಹಳ್ಳಿ, ಶಹಾಪುರ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಸೋಮಶೇಖರ ಬಿರಾದಾರ್, ವಡಗೇರಾ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಮಲ್ಲಿಕಾರ್ಜುನ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here