- ಜನಪ್ರತಿನಿಧಿಗಳು ನಮ್ಮ ಹೋರಾಟ ನಿರ್ಲಕ್ಷಿಸಿದರೆ ಮನೆಗಳಿಗೆ ಮುತ್ತಿಗೆ-ಸಿದ್ದರಾಮಾನಂದಪುರಿ ಶ್ರೀ
ಸುರಪುರ:ಗೊಂಡ ಆಗಲಿ ಕುರುಬ ಆಗಲಿ ಯಾವುದೂ ಬೇರೆ ಅಲ್ಲ ಎರಡೂ ಒಂದೆಯಾಗಿದ್ದು,ಸರಕಾರ ಕುರುಬ ಸಮುದಾಯವನ್ನು ಎಸ್.ಟಿ ಗೆ ಸೇರಿಸಬೇಕು,ನಮ್ಮ ಹೋರಾಟವನ್ನು ಜನಪ್ರತಿನಿಧಿಗಳು ನಿರ್ಲಕ್ಷಿಸಿದಲ್ಲಿ ಅವರ ಮನೆಗಳಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಬೇಕಾಗುತ್ತದೆ ಎಂದು ತಿಂಥಣಿ ಕನಕ ಗುರುಪೀಠದ ಸಿದ್ದರಾಮಾನಂದಪುರಿ ಸ್ವಾಮೀಜಿ ಎಚ್ಚರಿಕೆ ನೀಡಿದರು.
ನಗರದಲ್ಲಿ ಕುರುಬ ಸಮುದಾಯವನ್ನು ಎಸ್.ಟಿ ಗೆ ಸೇರಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರದೇಶ ಕರುಬರ ಸಂಘದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ,ಯಾದಗಿರಿ ಕಲಬುರ್ಗಿ ಮತ್ತು ಬೀದರ ಜಿಲ್ಲೆಗಳಲ್ಲಿ ಇರುವ ಕುರುಬರು ಗೊಂಡರೆ ಆಗಿದ್ದಾರೆ,ಕೇಂದ್ರ ಸರಕಾರ ಕುರಬರನ್ನು ಎಸ್.ಟಿ ಗೆ ಸೇರಿಸಬೇಕು ಎಂದು ನಾವು ಅನೇಕ ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ,ನಮ್ಮ ತಾಳ್ಮೆಯನ್ನು ಸರಕಾರ ಮತ್ತು ಜನಪ್ರತಿನಿಧಿಗಳು ಪರೀಕ್ಷಿಸಬಾರದು,ಸ್ಥಳಿಯ ಶಾಸಕರಾಗಲಿ,ರಾಯಚೂರು ಸಂಸದರಾಗಲಿ ಇತರೆ ಎಲ್ಲಾ ಸಚಿವರು ಶಾಸಕರು ಎಲ್ಲರಿಗೂ ನಾವು ಈ ಹೋರಾಟ ಮೂಲಕ ಮನವಿ ಮಾಡುತ್ತೇವೆ ಗೊಂಡ ಬೇರೆಯಲ್ಲ ಕುರುಬ ಬೇರೆಯಲ್ಲ ಎನ್ನುವುದನ್ನು ಅರಿತುಕೊಂಡು ಎಸ್.ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಸ್ವಾಮೀಜಿಗಳು ಹಾಗೂ ಮುಖಂಡರು ಮಾತನಾಡಿ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕೂಡಲೇ ಕುರುಬ ಸಮುದಾಯವನ್ನು ಎಸ್.ಟಿ ಗೆ ಸೇರಿಸುವಂತೆ ಆಗ್ರಹಿಸಿದರು.
ಇದಕ್ಕು ಮುನ್ನ ನಗರದ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದ ಆವರಣ ದಿಂದ ಮಹಾತ್ಮ ಗಾಂಧಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಸರಕಾರ ವಿರುದ್ಧ ಘೋಷಣೆಗಳನ್ನು ಕೂಗಿ ಎಸ್.ಟಿ ಗೆ ಸೇರ್ಪಡೆಗೊಳಿಸುವಂತೆ ಒತ್ತಾಯಿಸಿದರು.
ನಂತರ ಪ್ರಧಾನ ಮಂತ್ರಿಗಳಿಗೆ ಬರೆದ ಮನವಿಯನ್ನು ತಹಸೀಲ್ದಾರ್ ಕೆ.ವಿಜಯಕುಮಾರ ಮೂಲಕ ಸಲ್ಲಿಸಿದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಪ್ರತಿಭಟನೆಯಿಂದ ರಸ್ತೆ ಸಂಚಾರ ಬಂದಾಗಿ ವಾಹನ ಸವಾರರು ಪರದಾಡುವಂತಾಯಿತು.
ಪ್ರತಿಭಟನೆಯಲ್ಲಿ ಅಗತೀರ್ಥ ಹಾಲುಮತ ಸಮುದಾಯದ ಮಠದ ರೇವಣಸಿದ್ದೇಶ್ವರ ಸ್ವಾಮೀಜಿ,ಬಂಡೆಪ್ಪನಹಳ್ಳಿಯ ನಿಂಗಯ್ಯ ಪೂಜಾರಿ,ದೇವತ್ಕಲ್ ಗ್ರಾಮದ ಸಾಯಿಬಣ್ಣ ಪೂಜಾರಿ,ದೇವರಗೋನಾಲ ಹಯ್ಯಾಳಲಿಂಗೇಶ್ವರ ದೇವಸ್ಥಾನದ ಸಕ್ರೆಪ್ಪ ಪೂಜಾರಿ,ಮಾಳಳ್ಳಿಯ ಕೆಂಚಪ್ಪ ಪೂಜಾರಿ ಸೇರಿದಂತೆ ಕರ್ನಾಟಕ ಪ್ರದೇಶ ಕುರುಬರ ಸಂಘದ ಪದಾಧಿಕಾರಿಗಳು ಹಾಗೂ ಅನೇಕ ಮುಖಂಡರು ಮತ್ತು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.