ಚಿಂಚೋಳಿ: ಹನ್ನೆರಡನೆಯ ಶತಮಾನದಲ್ಲಿ ರಚಿಸಿದ ಅಕ್ಕ ಮಹಾದೇವಿಯವರ ವಚನಗಳು ಇಂದಿನ ಕಾಲಕ್ಕೂ, ಮುಂದೆಯೂ, ಪ್ರಸ್ತುತವಾಗಿರುತ್ತವೆ. ಅಕ್ಕನ ವಚನಗಳು ಇಂದಿನ ಯುವಕ ಯುವತಿಯರಿಗೆ ಮಾರ್ಗದರ್ಶನ ಮಾಡುತ್ತವೆ. ಈಗಿನ ಮೊಬೈಲ್ ಕಾಲದಲ್ಲಿ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಖಿನ್ನತೆಗೆ ಒಳಗಾಗುತ್ತಿದ್ದಾರೆ. ಅದರಿಂದ ಹೊರ ಬರಬೇಕಾದರೆ ತರುಣರು, ಯುವಕ, ಯುವತಿಯರು ಹೆಚ್ಚು ಹೆಚ್ಚು ಆಸಕ್ತಿ ವಹಿಸಿ ವಚನಗಳನ್ನು ಅಧ್ಯಯನ ಮಾಡಬೇಕೆಂದು ಸಾಹಿತಿ ಕಾವ್ಯಶ್ರೀ ಮಹಾಗಾoವಕರ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.
ಅವರು ಗುರುವಾರ ಇಲ್ಲಿನ ಚಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ, ಚಿಂಚೋಳಿ ತಾಲೂಕ ಶರಣ ಸಾಹಿತ್ಯ ಪರಿಷತ್ತು ಏರ್ಪಡಿಸಿದ, 2024ರ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ, “ಆಧುನಿಕತೆಯ ಮಧ್ಯೆ ಅಕ್ಕನ ನೆನಪು” ಎನ್ನುವ ವಿಷಯದ ಕುರಿತು ಉಪನ್ಯಾಸ ನೀಡಿದರು.
ಮುಂದುವರೆದು ಮಾತನಾಡಿದ ಅವರು, ಯುವಕರು ಎಂದಿಗೂ ಜೀವನೋತ್ಸಾಹ ಕಳೆದುಕೊಳ್ಳಬಾರದು. ಯುವತಿಯರಲ್ಲಿ ಮುಜುಗರ, ಹಿಂಜರಿಕೆ, ಕೀಳರಿಮೆ ಇರಬಾರದೆಂದು ವಿಚಾರ ಮಂಡಿಸಿದರು.
ಅರಿಯದವರೊಡನೆ ಸಂಗಮ ಮಾಡಿದೊಡೆ ಕಲ್ಲ ಹೊಯ್ದು ಕಿಡಿಯ ತೆಗೆದುಕೊಂಬoತೆ ಕಾಯ ಕರ್ರನೆ ಕಂದಿದಡೇನು, ದೇಹ ಮಿರ್ರನೆ ಮಿಂಚಿದೊಡೇನು. ಹೆದರದಿರು ಮನವೇ, ಬೆದರದಿರು ಮನವೇ. ಬೆಟ್ಟದಾ ಮೇಲೊಂದು ಮನೆಯ ಮಾಡಿ, ಮೃಗಗಳಿಗoಜಿದೊಡೆoತಯ್ಯ ಮುಂತಾದ ವಚನಗಳನ್ನು ಉದಾಹರಿಸುವುದರೊಂದಿಗೆ, ವಿದ್ಯಾರ್ಥಿಗಳು ಸದಾ ಶಿಕ್ಷಕರ ಹಾಗೂ ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು; ಏಕೆಂದರೆ ಬುದ್ಧಿವಂತರ ಮಾತುಗಳು ಮಜ್ಜಿಗೆಯೊಳಗಿನ ಬೆಣ್ಣೆ ತೆಗೆದಂತೆ ಇರುತ್ತವೆ ಎಂದು ವಿದ್ಯಾರ್ಥಿಗಳಿಗೆ, ಮನೋಜ್ಞವಾಗಿ ಅಕ್ಕಮಹಾದೇವಿಯವರ ಕಷ್ಟ ಸಹಿಷ್ಣುತೆಯ ಜೀವನವನ್ನು ಪರಿಚಯ ಮಾಡಿಕೊಟ್ಟರು.
ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ಸಾಹಿತಿ ಡಾ. ವಿಜಯಕುಮಾರ ಪರುತೆಯವರು, ಕ್ಯಾಲೆಂಡರ್ ಗಳು ಸoಸ್ಕೃತಿಯ ಪ್ರತೀಕವಾಗಿವೆ. ಗೋಡೆಯ ಮೇಲಿನ ಗಡಿಯಾರ ದಿನದ 24 ಗಂಟೆಯೂ ನಿರಂತರವಾಗಿ ಸಮಯ ತೋರಿಸುತ್ತಾ, ಕೆಲಸದ ಎಚ್ಚರಿಕೆ ನೀಡುವಂತೆ, ದಿನ ದರ್ಶಿಕೆಗಳು ವರ್ಷದ 365 ದಿನಗಳ ಮಹತ್ವವನ್ನು ಸಾರುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಬಸವಕಲ್ಯಾಣದ ಅನುಭವ ಮಂಟಪದಲ್ಲಿ ಏರ್ಪಡಿಸಿದ, ರಾಜ್ಯಮಟ್ಟದ ಬಸವಣ್ಣನವರ ವಚನಗಳ ಕಂಠಪಾಠ ಸ್ಪರ್ಧೆಯಲ್ಲಿ, 698 ವಚನಗಳನ್ನು ಕಂಠ ಪಾಠವಾಗಿ ಹೇಳಿ, ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಜಗದೀಶ್ ಮರಪಳ್ಳಿ ಚಿಮ್ಮನಚೋಡ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಚಿಂಚೋಳಿ ಬಿ ಆರ್ ಸಿ ಸಮನ್ವಯಾಧಿಕಾರಿ ನಾಗಶೆಟ್ಟಿ ಭದ್ರಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ಶ ಸಾ ಪ ಗೌರವಾಧ್ಯಕ್ಷ ಪ್ರೊ. ಮಲ್ಲಿಕಾರ್ಜುನ ಪಾಲಾಮೂರ್ ಅಧ್ಯಕ್ಷತೆ ವಹಿಸಿದ್ದರು.
ಅಧ್ಯಕ್ಷ ಬಸವರಾಜ ಐನೋಳಿ ಸ್ವಾಗತಿಸಿದರು. ಶ್ರೀಶೈಲ್ ನಾಗಾವಿ ಶರಣು ಸಮರ್ಪಣೆಗೈದರು. ಗಣಪತ ದೇವಕತ್ತೆ ನಿರೂಪಿಸಿದರು. ಶರಣಯ್ಯ ಸ್ವಾಮಿ ಅಲ್ಲಾಪುರ ಹಾಗೂ ಗುರುರಾಜ ಜೋಶಿ ಐನೂಲಿಯವರು ವಚನ ಸಂಗೀತ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ರಾಮಯ್ಯ ಸ್ವಾಮಿ ಐನೂಲಿ, ಚಂದ್ರಶೇಖರ್ ಲಕ್ಕಶೆಟ್ಟಿ, ಜ್ಯೋತಿ ಬೊಮ್ಮ, ಗೀತಾರಾಣಿ ಐನೋಳಿ, ಉಪನ್ಯಾಸಕರಾದ ಶಂಶುದ್ದೀನ್, ಮಧುಕರ ರಾಮತೀರ್ಥ, ದಿವ್ಯ ಭಾರತಿ ಸೇರಿ ಅನೇಕ ಗಣ್ಯರು ಉಪಸ್ಥಿತರಿದ್ದರು.