ಗೌರವ ಡಾಕ್ಟರೇಟ್‌ ಸುತ್ತ ತಮಾಷೆಯ ಹುತ್ತ….!

0
93

ಅದೊಂದು ದೊಡ್ಡ ನಗರ. ಆ ನಗರದ ರೈಲ್ವೆ ನಿಲ್ದಾಣಕ್ಕೆ ಬೇರೆ ವಿಶ್ವವಿದ್ಯಾಲಯದಿಂದ ಪ್ರೊಫೆಸರ್ ಒಬ್ಬರು ಸೂಟು, ಬೂಟು ತೊಟ್ಟು, ಕೈಯಲ್ಲಿ ಬ್ರೀಫ್ ಕೇಸ್ ಹಿಡಿದುಕೊಂಡು ಬಂದಿಳಿದರಂತೆ! ಇಳಿದವರೆ ಯುನಿವರ್ಸಿಟಿಗೆ ಹೋಗಲು ಟೆಕ್ಸಿ ಕಾರ್ ನವರನ್ನು ವಿಚಾರಿಸಿದರಂತೆ. ಕಾರ್ ಡ್ರೈವರ್ ನಾನು ಅಲ್ಲಿಗೆ ಬರುವುದಿಲ್ಲ ಎಂದನಂತೆ. ಯಾಕೆ ಎಷ್ಟು ಹಣ ಕೊಡಬೇಕು ಎಂದು ಕೇಳಿದರಂತೆ. ಆಗ ಟ್ಯಾಕ್ಸಿ ಡ್ರೈವರ್ ನೀವು ಎಷ್ಟು ಕೊಟ್ಟರೂ ಬರುವುದಿಲ್ಲ ಎಂದನಂತೆ!

ನಂತರ ಆಟೋ ಡ್ರೈವರ್ ವೊಬ್ಬರನ್ನು ವಿವಿಗೆ ಬರಲು ಕೇಳಿದರಂತೆ. ಆಟೋಡ್ರೈವರ್ ನಾನೂ ಅಲ್ಲಿಗೆ ಬರುವುದಿಲ್ಲ ಎಂದನಂತೆ. ನೀನು ಕೇಳಿದಷ್ಟು ಹಣ ಕೊಡುತ್ತೇನೆ. ಅಲ್ಲೊಂದು ಮೀಟಿಂಗ್ ಇದೆ ಬೇಗ ನಡಿಯಪ್ಪ ಎಂದರಂತೆ ಪ್ರೊಫೆಸರ್. ಆಗ ಆಟೋ ಡ್ರೈವರ್, ಸರ್‌ ನೀವೆನೋ ಹಣ ಕೊಡುತ್ತೀರಿ. ಅದೇ ಹಣದಲ್ಲಿ ಬೇರೆ ಎಲ್ಲಿಗಾದರೂ ಕರೀರಿ. ಅಲ್ಲಿಗೆ ಬರುತ್ತೇನೆ. ಆದರೆ ಯುನಿವರ್ಸಿಟಿ ಗೆ ಮಾತ್ರ ಬರುವುದಿಲ್ಲ ಎಂದನಂತೆ! ಇದೇನಪ್ಪ ಇವರೆಲ್ಲ ಯಾಕೆ ಹೀಗೆ ಹೇಳುತ್ತಿದ್ದಾರೆ. ನನಗೆ ಮೀಟಿಂಗ್ ಟೈಮ್ ಬೇರೆ ಆಗಿದೆ. ಏನ್ಮಾಡೋದು ಎಂದು ಅಲ್ಲಿಯೇ ಇದ್ದ ರಿಕ್ಷಾವಾಲಾನನ್ನು ಯುನಿವರ್ಸಿಟಿ ಗೆ ಬರುವಂತೆ ಕೇಳಿದರಂತೆ! ಆಗ ಆ ರಿಕ್ಷಾವಾಲಾ ಸಹ, ಸಾಹೇಬ್ರೆ ಬೇರೆ ಎಲ್ಲಿಗಾದ್ರೂ ಕರೀರಿ ಬರುತ್ತೇನೆ. ಆದರೆ ಆ ಯುನಿವರ್ಸಿಟಿ ಗೆ ಮಾತ್ರ ಬರುವುದಿಲ್ಲ ಎಂದನಂತೆ! ಸರಿ ಯಾಕೆ ನೀವೆಲ್ಲ ಅಲ್ಲಿಗೆ ಬರುವುದಿಲ್ಲ. ಅದು ಬಹಳ ದೂರ ಇದೆಯಾ? ಅಥವಾ ನಿಮಗೆಲ್ಲ ಏನಾಗಿದೆ? ನಾನು ಎಷ್ಟು ಹಣ ಕೊಡುತ್ತೇನೆ ಎಂದರೂ ನೀವು ಅಲ್ಲಿಗೆ ಬರಲು ತಯಾರಿಲ್ಲ ಎಂದು ಪ್ರೊಫೆಸರ್ ಕೇಳಿದರಂತೆ!

Contact Your\'s Advertisement; 9902492681

ಆಗ ಆ ರಿಕ್ಷಾವಾಲಾ ಹೀಗೆ ಹೇಳಿದನಂತೆ, ” ಸರ್ ಉಳಿದವದು ನನಗೆ ಗೊತ್ತಿಲ್ಲ. ನಾನು ಹೇಳಿ ಕೇಳಿ ರಿಕ್ಷಾವಾಲಾ. ಪ್ರಯಾಣಿಕರನ್ನು ರಿಕ್ಷಾದಲ್ಲಿ ಕೂಡಿಸಿಕೊಂಡು ಅವರು ಹೇಳಿದ ಜಾಗಕ್ಕೆ ತಲುಪಿಸಿ ಅದರಿಂದ ಬರುವ ಹಣದಲ್ಲಿ ನನ್ನ ಪಾಡಿಗೆ ನಾನು ನನ್ನ ಸಂಸಾರ ನಡೆಸುವವನು. ಆದರೆ ಅಲ್ಲಿಗೆ ಮಾತ್ರ ನನ್ನ ಕರಿಬ್ಯಾಡ್ರಿ” ಎಂದನಂತೆ! ಕೊನೆಗೆ ಅಲ್ಲಿಯೇ ಹೋಗುತ್ತಿದ್ದ ಟಾಂಗಾವಾಲಾನನ್ನು ಯುನಿವರ್ಸಿಟಿ ಗೆ ಬರಲು ಕೇಳಿದರಂತೆ. ಆಗ ಆ ಟಾಂಗಾವಾಲಾ “ಸರ್, ನೀವು ನೋಡಲಿಕ್ಕೆ ದೊಡ್ಡ ಆಫೀಸರ್ ಕಂಡಂಗ ಕಾಣ್ತಿದ್ದೀರಿ. ಹೀಗಾಗಿ ನಾನು ಕೇಳಿದಷ್ಟು ಹಣ ನೀವು ಕೊಡುತ್ತೀರಿ ಅಂತ ನನಗೆ ಅನ್ನಿಸುತ್ತೆ. ಆದರೆ ನಾನು ಆ ಯುನಿವರ್ಸಿಟಿಗೆ ಮಾತ್ರ ಬರುವುದಿಲ್ಲ. ಇನ್ಮುಂದೆ ಅಲ್ಲಿಗೆ ಹೋಗಲೇಬಾರದು ಎಂದು ತೀರ್ಮಾನ ಮಾಡಿದ್ದೇನೆ ಎಂದನಂತೆ!

ಆಯ್ತು ನೀನೂ ಬರಬೇಡ. ನಾನು ಯಾರಿಗಾದರೂ ಫೋನ್ ಮಾಡಿ ಗಾಡಿ ತರಿಸಿಕೊಂಡು ಅಲ್ಲಿಗೆ ಹೋಗುತ್ತೇನೆ. ಆದರೆ ನೀವೆಲ್ಲ (ಕಾರ್, ಆಟೋ, ಸೈಕಲ್ ರಿಕ್ಷಾದವರು) ಅಲ್ಲಿಗೆ ಯಾಕೆ ಬರುವುದಿಲ್ಲ ಎಂಬುದನ್ನು ನನಗೆ ತಿಳಿಸು ಎಂದರಂತೆ ಪ್ರೊಫೆಸರ್. ಆಗ ಆ ಟಾಂಗಾವಾಲಾ, ಸರ್, ಅವರು ಯಾಕೆ ಬರುವುದಿಲ್ಲ ಎಂಬುದು ನನಗೆ ಸಂಬಂಧಪಡದ ವಿಷಯ. ಅಲ್ಲಿಗೆ ನಾನು ಬಂದರೆ ನೀವೆನೋ ನಾನು ಕೇಳಿದಷ್ಟು ಹಣ ಕೊಡ್ತೀರಿ ಖರೆ ಅದ. ಆದರೆ ನಾನು ಅಲ್ಲಿಗೆ ಬರುವುದಿಲ್ಲ. ಏಕೆಂದರೆ ನಾನು ಅಲ್ಲಿಗೆ ಬರಾಕ ಬಂದಿಲ್ರೀ. ಆ ಕಾಂಪೌಂಡ್ ಒಳಗೆ ಕಾಲಿಟ್ಟರೆ ಸಾಕು, ಅವರು ನನ್ನನ್ನು ಬಿಡುವುದಿಲ್ರಿ.. ಎಂದನಂತೆ!

ಆಗ ಪ್ರೊಫೆಸರ್ ಯಾರು ಏನ್ ಮಾಡ್ತಾರೆ? ಯಾರವರು? ಯಾಕೆ ನಿನಗೆ ಏನ್ ಮಾಡ್ತಾರೆ? ಏನಾದರೂ ಹೊಸ ರೂಲ್ಸ್ ಮಾಡಿದ್ದಾರೆಯೇ?ಎಂದು ಆ ಟಾಂಗಾ ವಾಲಾನನ್ನು ಕೇಳಿದರಂತೆ!ಆಗ ಆ ಟಾಂಗಾ ವಾಲಾ, “ಸರ್ ಅಲ್ಲಿಗೆ ಬಂದರೆ ಅವರು ಬಿಡುವುದೇ ಇಲ್ಲ. ಕೈ ಹಿಡಿದು ಎಳೆದೊಯ್ದು ಗೌರವ ಡಾಕ್ಟರೇಟ್ ಕೊಡ್ತಾರೆ . ನಾನು ಹೇಳಿ ಕೇಳಿ ದುಡದ ತಿನ್ನಾವ, ಈ ಯುನಿವರ್ಸಿಟಿ ಯವರು ಎಂಥೆಂಥವರಿಗೋ ಗೌರವ ಡಾಕ್ಟರೇಟ್ ಕೊಟ್ಟಿದ್ದಾರೆ. ಅವರ ಸಾಲಿನಲ್ಲಿ ನಾನು ಸೇರುತ್ತೇನಲ್ಲ ಎಂಬ ಭಯ, ಅಂಜಿಕಿ ಸರ್. ಹೀಗಾಗಿ ಅಲ್ಲಿಗೆ ಬರುವುದಿಲ್ಲ. ಇಲ್ಲದಿದ್ದರೆ ಅಲ್ಲಿಗೆ ಖಂಡಿತ ಬರುತ್ತಿದ್ದೆ.
ಸ್ವಾರಿ ಸರ್ ಎಂದನಂತೆ!

-ಸಂಗ್ರಹ: ಶಿವರಂಜನ್ ಸತ್ಯಂಪೇಟೆ (ಸತ್ಯಪ್ರಿಯ)

(ದಯವಿಟ್ಟು ಕ್ಷಮಿಸಿ: ಕಾರ್, ಆಟೋ, ರಿಕ್ಷಾ ಹಾಗೂ ಟಾಂಗಾವಾಲಾ ಮುಂತಾದ ಕಾಯಕಜೀವಿಗಳಿಗೆ ಬಹಿರಂಗ ಕ್ಷಮೆಕೋರಿ ಈ ತಮಾಷೆಯ ಪ್ರಸಂಗ ಬರೆದಿರುವೆ. ಏಕೆಂದರೆ ಈಗ ಎಂಥೆಂಥವರೋ ಗೌರವ ಡಾಕ್ಟರೇಟ್ ತೆಗೆದುಕೊಂಡು ಬರುತ್ತಿದ್ದಾರೆ. ಕೆಲವು ಜನ ಅರ್ಹರು ಪ್ರಶಸ್ತಿ ಪುರಸ್ಕೃತರಿದ್ದಾರೆ. ಅರ್ಹರಿದ್ದರೆ ಅನ್ಯಥಾ ಭಾವಿಸಬಾರದು.)

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here