ವಚನ ಸಾಹಿತ್ಯವನ್ನು ಓದಿ, ತಮ್ಮ ಅಜ್ಞಾನವನ್ನು ನಿವಾರಿಸಿಕೊಳ್ಳಿರಿ

0
58

ಪೂಜ್ಯ ಶ್ರೀ. ವಿಶ್ವೇಶ್ವರತೀರ್ಥ ಸ್ವಾಮೀಜಿ ಉಡುಪಿ ಅವರಿಗೆ ಪ್ರೀತಿಯ ಶರಣು ಶರಣಾರ್ಥಿಗಳು.

ತಮಗೆ ಲಿಂಗಾಯತ ಹೋರಾಟ ಶುರುವಾದಂದಿನಿಂದ ಇಂದಿನವರೆಗೆ ನಿದ್ದೆ ಹತ್ತಿರಲಿಕ್ಕಿಲ್ಲ. ಬಹುಶಃ ಹತ್ತಲಿಕ್ಕಿಲ್ಲ ಸಹ. ಲಿಂಗಾಯತ ಧರ್ಮವೆಂದರೆ ಬಹಳಷ್ಟು ಜನರಿಗೆ ಒಳಗೊಳಗೆ ತಳಮಳ. ಕಳವಳ. ಅದು ನಿಮಗೂ ಉಂಟಾಗಿದ್ದರೆ ಉಂಟು ಮಾಡಿಕೊಂಡವರ ದೌರ್ಬಲ್ಯವೆ ಹೊರತು ಮತ್ತೇನು ಅಲ್ಲ. 12 ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಕಟ್ಟಿದ ಚಳುವಳಿ ಪಟ್ಟಭದ್ರರ ವಿರುದ್ಧ ಪುರೋಹಿತರ ವಿರುದ್ಧ ಕಟ್ಟಿದ ಚಳುವಳಿ ಅನ್ನುವುದಕ್ಕಿಂತ ದುಡಿಯುವ ವರ್ಗದ ಜನತೆ ತಮಗಾಗಿ, ತಮ್ಮ ಬದುಕು ಹಸನಾಗಲಿ ಎಂದು ಅರಿವು ಮೂಡಿಸಿಕೊಳ್ಳಲು ರಚನೆ ಮಾಡಿಕೊಂಡದ್ದಾಗಿತ್ತು. ಇದನ್ನು ಸ್ಪಷ್ಟವಾಗಿ ಗ್ರಹಿಸಿದ ಪುರೋಹಿತರು ಮತ್ತು ಪಟ್ಟಭದ್ರರು ದುಡಿಯುವ ವರ್ಗದ ಜನತೆ ಒಂದಾಗಿ, ತಮ್ಮ ಕಷ್ಟ ಸುಖಕ್ಕೆ ಕಾರಣವೇನು ? ಎಂದು ಹುಡುಕುತ್ತ ಹೋದರೆ ನಾವು ಕೆಲಸ ಇಲ್ಲದವರಾಗಬೇಕಾಗುತ್ತದೆ ಸತ್ಯ ತಿಳಿದುಕೊಂಡರು.

Contact Your\'s Advertisement; 9902492681

ಆದ್ದರಿಂದಲೆ ಅವರೆಲ್ಲ ಶರಣರ ವಚನಗಳ ಬೆಳಕು ತಾಳಲಾಗದೆ ಹಿಂಬಾಗಿಲಿನ ಮೂಲಕ ಶರಣರನ್ನು ಕಲ್ಯಾಣದಿಂದ ಹೊರಗೆ ಕಳಿಸುವಲ್ಲಿ ಸಫಲರಾದರು. ಶರಣರಷ್ಟೇ ಅವರ ಗುರಿಯಾಗಿರಲಿಲ್ಲ. ಶರಣರು ಸೃಜಿಸಿದ ವಚನ ಸಾಹಿತ್ಯವೆಂಬ ಪಂಜು ಇದ್ದರೆ ಮುಂದೆಯೂ ತಮ್ಮ ಬಿಟ್ಟಿ ಬದುಕಿಗೆ ಕಂಟಕ ಎಂದು ಅರಿತಿದ್ದರಿಂದ ವಚನಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಸುಟ್ಟು ಹಾಕಿದರು. ಶರಣರು ಕಂಡ ಕಂಡಲೆಲ್ಲ ಹತ್ಯೆ ಮಾಡಿ ತಮ್ಮ ವಿಕೃತತನ ಮೆರೆದರು.

‘ಭೂಮಿಗೆ ಬಿದ್ದ ಬೀಜ ಕೆಟ್ಟಿತೆನಬೇಡ ಮುಂದಿನ ಫಲದೊಳಗೆ ಅರಸಿಕೊ’ ಎಂಬಂತೆ 12 ನೇ ಶತಮಾನದಲ್ಲಿ ಶರಣರು ಕಂಡಿದ್ದ ಸಮ ಸಮಾಜದ ಬೀಜಗಳು ಸಾವಿರಾರು ವರ್ಷಗಳಾದರೂ ಯಥಾಸ್ಥಿತಿಯಲ್ಲಿವೆ. ಏನೆಲ್ಲ ಸ್ಥಿತ್ಯಂತರಗಳಾದರೂ ವಚನ ಸಾಹಿತ್ಯ ಅಷ್ಟು ಇಷ್ಟು ಉಳಿದು ಬಂದಿವೆ. ಈಗ ರಾಜ್ಯ, ರಾಷ್ಟ್ರ, ವಿಶ್ವದಲ್ಲೂ ಅದರ ಬೆಳಕು ಮೂಡುತ್ತಿದೆ. ಇದರಿಂದ ಕಂಗಾಲಾದವರಿಗೆ ಬಹು ಸಂಕಟ ಶುರುವಾಗಿದೆ. ಬಸವಣ್ಣನವರ ವಾಸ್ತವದ ವಚನಗಳು ಜನ ಸಾಮಾನ್ಯರು ಅಪ್ಪಿಕೊಳ್ಳುತ್ತ ನಡೆದರೆ ನಮ್ಮ ಗೋಪಾಳಕ್ಕೆ ದಾನ ದಕ್ಷಿಣೆ ಹಾಕುವವರು ಯಾರು ? ಎಂದು ಚಿಂತಾಕ್ರಾಂತರಾಗಿದ್ದಾರೆ.

ತಾವಂತೂ ಎಲ್ಲರಿಗಿಂತಲೂ ಹೆಚ್ಚು ಹೆಚ್ಚು ಲಿಂಗಾಯತ ಧರ್ಮ ಎಂದು ಕೇಳುತ್ತಿರುವಂತೆ ಕಂಗಾಲಾಗಿ ಹೋಗುತ್ತಿರುವಿರಿ. ಲಿಂಗಾಯತ ಧರ್ಮದ ಯಾರಾದರೊಬ್ಬರು ಮಾತಾಡತೊಡಗಿದರೆ ಗಡ ಗಡ ನಡುತ್ತಿರಿ. ಆದರೂ ಕೊಂಕು ಮಾತುಗಳನ್ನು ಆಡುವುದು ಮುಂದುವರೆಸಿದ್ದೀರಿ. ಇದು ತಮ್ಮಂಥ ಹಿರಿಯರಿಗೆ ಸಲ್ಲುವ ನಡತೆಯಲ್ಲ. ಚಾತುರ್ಮಾಸವಂತೂ ಮುಗಿದಿದೆ. ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಹೇಗೂ ತಮಗೆ ಮುಕ್ತವಾದ ಆಹ್ವಾನವನ್ನು ನೀಡಿದ್ದಾರೆ. ದಯವಿಟ್ಟು ತಾವು ಸಾಣೆಹಳ್ಳಿಗೆ ಹೋಗಿ ಲಿಂಗಾಯತ ಧರ್ಮದ ಬಗೆಗೆ ತಿಳಿದುಕೊಂಡು ಮುಕ್ತಿಯನ್ನು ಕಾಣಿಸಿರಿ.

ಸರಿಯಾಗಿ ಗೊತ್ತಿಲ್ಲದ ಸಂಗತಿಗಳ ಕುರಿತು ಮಾತನಾಡಿ ನಿಮಗೆ ನೀವೇ ಅರಿವಿಲ್ಲದವರು ಅನಿಸಿಕೊಳ್ಳುತ್ತಿರುವಿರಿ. ನಮ್ಮ ದೇಶದ ಇಂದಿನ ಪ್ರಧಾನಿ ಸನ್ಮಾನ್ಯ ಶ್ರೀ. ನರೇಂದ್ರ ಮೋದಿಯವರು ಬಸವಣ್ಣನವರ ಬಗೆಗೆ ಎಂಥ ಅದ್ಭುತವಾದ ಮಾತುಗಳನ್ನು ಆಡಿದ್ದಾರೆ. ತಾವು ದಯವಿಟ್ಟು ಅವರ ಮಾತುಗಳನ್ನು ಕೇಳಿರಿ. ಅಲ್ಲದೆ ಸನ್ಮಾನ್ಯ ಪ್ರಧಾನಿಗಳು ಹಿಂದೂ ಧರ್ಮದ ಕುರಿತು ಆಡಿದ ಮಾತುಗಳನ್ನೂ ಕೇಳಿ. ತಮ್ಮ ಅರಿವನ್ನು ಕಂಡುಕೊಳ್ಳಿರಿ.

ಲಿಂಗಾಯತರಾರು ಹಿಂದೂ ಧರ್ಮದ ವಿರೋಧಿಗಳಲ್ಲ. ಲಿಂಗಾಯತರು ಇವನಾರವ ಇವನಾರವ ಅನ್ನದೆ, ಇವ ನಮ್ಮವ ಇವ ನಮ್ಮವ ಎಂದು ಎಲ್ಲರನ್ನೂ ತಬ್ಬಿಕೊಂಡು ಹೋಗುವವರು. ಆದರೆ ಲಿಂಗಾಯತ ಧರ್ಮದ ಆಚರಣೆಗಳು ಹಿಂದೂ ಧರ್ಮದ ಆಚರಣೆಗಳು ಭಿನ್ನ ಭಿನ್ನ ಎಂಬುದು ಸೂರ್ಯ ಪ್ರಕಾಶದಷ್ಟು ಸತ್ಯ. ಆದರೂ ತಾವು ಮೊಂಡು ಹಟ ಇಟ್ಟುಕೊಂಡು ತಾವು ಹಿಡಿದ ಮೊಲಕ್ಕೆ ಒಂದೇ ಕಾಲು ಎಂದು ವಾದಿಸಿದರೆ ಅದು ತಮ್ಮ ಅಭಿಪ್ರಾಯವಷ್ಟೆ ಆಗುತ್ತದೆ.

ಕೊನೆಯದಾಗಿ ತಾವು ಪತ್ರಿಕಾ ವರದಿಯಲ್ಲಿ ಹೇಳಿದಂತೆ ಅನ್ಯೂನ್ಯತೆಯಿಂದ ಬಾಳೋಣ ಎಂಬ ಮಾತನ್ನು ಲಿಂಗಾಯತರು ಖಂಡಿತ ಸ್ವೀಕರಿಸುತ್ತಾರೆ. ನಿಮ್ಮ ಧರ್ಮ ಲಿಂಗಾಯತರ ಧರ್ಮವಾಗುವುದಾದರೂ ಹೇಗೆ ತಾತ ? ಲಿಂಗಾಯತವೆ ಬೇರೆ. ನಿಮ್ಮ ಧರ್ಮವೆ ಬೇರೆ. ಇನ್ನಷ್ಟು ಪುಸ್ತಕ ಓದಿ. ಜ್ಞಾನವನ್ನು ವಿಸ್ತರಿಸಿಕೊಳ್ಳಿರಿ.

ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡಯ್ಯ
ಜ್ಯೋತಿಯ ಬಲದಿಂದ ತಮಂಧದ ಕೇಡ ನೋಡಯ್ಯ
ಸತ್ಯದ ಬಲದಿಂದ ಅಸತ್ಯದ ಕೇಡ ನೋಡಯ್ಯ

ಎಂದು ಬಸವಣ್ಣನವರು ಹೇಳಿದಂತೆ ತಾವು ಹೆಜ್ಜೆ ಇಟ್ಟದ್ದೆ ಆದರೆ ನೀವು ನಂಬಿರುವ ಸ್ವರ್ಗ, ಮುಕ್ತಿ ಎಲ್ಲವೂ ಇದೆ ಜನ್ಮದಲ್ಲಿಯೆ ನಿಮ್ಮ ಕಣ್ಣ ಮುಂದೆ ಕಾಣುತ್ತವೆ. ಆದಷ್ಟು ಬೇಗ ಬೇಗ ವಚನ ಸಾಹಿತ್ಯ ಓದಿರಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here