ಶಹಾಬಾದ: ದೈಹಿಕ ಶಿಕ್ಷಕರು ಆತ್ಮಸಾಕ್ಷಿಯಾಗಿ ಕೆಲಸ ಮಾಡಿದಾಗ ಮಾತ್ರ ದೈಹಿಕ ಶಿಕ್ಷಣ ಕ್ಷೇತ್ರ ಬೆಳವಣಿಗೆಯಾಗುತ್ತದೆ ಎಂದು ಕಲಬುರಗಿ ಆಯುಕ್ತರ ಕಚೇರಿಯ ಉಪನಿರ್ದೇಶಕರಾದ ವಸಂತ ಭಂಡಾರಿ ಹೇಳಿದರು.
ಅವರು ಗುರುವಾರ ನಗರದ ಎಸ್.ಜಿ.ವರ್ಮಾ ಹಿಂದಿ ಪ್ರೌಢಶಾಲೆಯಲ್ಲಿ ಆಯೋಜಿಸಲಾದ ದೈಹಿಕ ಶಿಕ್ಷಣ ಶಿಕ್ಷಕರ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಾರ್ಥನೆಗೂ ಮುಂಚಿತವಾಗಿ ಶಾಲೆಗೆ ಬರುವುದು.ಶಾಲೆಯ ಆವರಣ ಸೇರಿದಂತೆ ಶಾಲೆಯ ಸ್ವಚ್ಛತೆ ಕಾಪಾಡುವುದು ದೈಹಿಕ ಶಿಕ್ಷಕರ ಆದ್ಯ ಕರ್ತವ್ಯ.ದೈಹಿಕ ಶಿಕ್ಷಕರನ್ನು ಶಾಲೆಯ ಎರಡನೇ ಮುಖ್ಯಗುರು ಎಂದು ಕರೆಯುತ್ತಾರೆ.
ಆದ್ದರಿಂದ ದೈಹಿಕ ಶಿಕ್ಷಕರಾದವರು ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸಮಾಡಬೇಕಿದೆ.ಸರಿಯಾಗಿ ಶೈಕ್ಷಣಿಕ ಚಟುವಟಿಕೆಗಳ ದಾಖಲೆಯನ್ನು ಹೊಂದಿರಬೇಕು.ನೋಟ್ಸ್ ಆಫ್ ಟಿಚಿಂಗ್,ವಾರ್ಷಿಕ ಕ್ರೀಯಾಯೋಜನೆ, ಪ್ರೋಜೆಕ್ಟ್, ಟೆಸ್ಟ್ , ಪರೀಕ್ಷೆ, ಆಟ-ಪಾಠಗಳನ್ನು ನಿರ್ವಹಿಸಬೇಕು.ಒಬ್ಬರು ಕೆಲಸ ಮಾಡುತ್ತಾರೆ.ಆದರೆ ದಾಖಲೆಯನ್ನು ನಿರ್ವಹಿಸುವುದಿಲ್ಲ. ಇನ್ನೊಬ್ಬರು ದಾಖಲೆ ನಿರ್ವಹಿಸುತ್ತಾರೆ.ಕೆಲಸ ಮಾಡುವುದಿಲ್ಲ. ಮತ್ತೊಬ್ಬರು ದಾಖಲೆಯೂ ನಿರ್ವಹಿಸುವುದಿಲ್ಲ.ಅಲ್ಲದೇ ಕೆಲಸವೂ ಮಾಡುವುದಿಲ್ಲ. ಮೊಗದೊಬ್ಬರೂ ಕೆಲಸ ಮಾಡುತ್ತಾರೆ ಹಾಗೂ ದಾಖಲೆಯೂ ನಿರ್ವಹಿಸುತ್ತಾರೆ.
ಇವರಿಂದ ಶಿಕ್ಷಣ ಕ್ಷೇತ್ರಕ್ಕೆ ಮತ್ತು ಅವರಿಗೂ ಗೌರವ ಸಿಗುತ್ತದೆ.ಅಲ್ಲದೇ ಬದಲಾದ ಶಿಕ್ಷಣಕ್ಕೆ ಸಂಬಂಧಿಸಿದಂತೆ ಶಿಕ್ಷಕರು ಜ್ಞಾನವನ್ನು ಅರಿಯಬೇಕು.ಅದಕ್ಕೆ ತಕ್ಕಂತೆ ಹೊಂದಿಕೊಳ್ಳಬೇಕು. ಕೊಟ್ಟ ಕೆಲಸವನ್ನು ಉತ್ತಮ ರೀತಿಯಾಗಿ ಮಾಡುವ ಮೂಲಕ ವೃತ್ತಿಗೆ ಗೌರ ತರುವಂಥ ಕೆಲಸ ಮಾಡಬೇಕೆಂದು ತಿಳಿಸಿದರು.
ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ರಾಜಶೇಖರ ಗೋನಾಯಕ ಮಾತನಾಡಿ, ನಾನು ಶಿಕ್ಷಕರ ಸಂಘದ ಅಧ್ಯಕ್ಷ, ಕಾರ್ಯದರ್ಶಿ ಎನ್ನುವ ಬದಲು ನಮ್ಮ ಕರ್ತವ್ಯ ಹಾಗೂ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಬೇಕು. ಸಂಘದ ಪದಾಧಿಕಾರಿಗಳು ಎನ್ನುವುದು ಶಾಲೆಯ ನಾಲ್ಕು ಗೋಡೆಗಳ ಹೊರಗಡೆ.ಮೊದಲು ನಾವು ಶಿಕ್ಷಕರೆಂಬುದನ್ನು ಮರೆಯಬಾರದು. ಮಾಡುವ ಕೆಲಸವನ್ನು ನಿಷ್ಠೆಯಿಂದ ಪ್ರಾಮಾಣಿಕವಾಗಿ ಮಾಡಿದಾಗ ಮಾತ್ರ ಶಾಲೆಯಲ್ಲಿ ಉತ್ತಮ ವಾತಾವರಣ ಸೃಷ್ಠಿಸಲು ಸಾಧ್ಯ ಎಂದು ಹೇಳಿದರು.
ಚಿತ್ತಾಪೂರ ದೈಹಿಕ ಶಿಕ್ಷಣಾಧಿಕಾರಿ ಶಿವಶರಣಪ್ಪ ಮಂಠಾಳೆ ಮಾತನಾಡಿ,ನೂತನವಾಗಿ ಚಿತ್ತಾಪೂರ ತಾಲೂಕಾ ದೈಹಿಕ ಶಿಕ್ಷಣಾಧಿಕಾರಿ ಅಧಿಕಾರಿ ವಹಿಸಿಕೊಂಡಿದ್ದು, ಈ ಹಿಂದಿನ ಅಧಿಕಾರಿಗೆ ನೀಡಿರುವ ಸಹಕಾರವನ್ನು ಎಲ್ಲರಿಂದ ಬಯಸುತ್ತೆನೆ.ಎಲ್ಲಾ ದೈಹಿಕ ಶಿಕ್ಷಕರು ಒಂದಾಗಿ ತಾಲೂಕಿನ ಮಕ್ಕಳ ಏಳ್ಗೆಗಾಗಿ ದುಡಿಯುವ ಮೂಲಕ ಜಿಲ್ಲಾ, ರಾಜ್ಯ,ರಾಷ್ಟ್ರೀಯ ಮಟ್ಟದಲ್ಲಿ ಮಕ್ಕಳು ಸಾಧನೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡೋಣ ಎಂದರು.
ಸ. ನೌ.ಸಂಘದ ತಾಲೂಕಾಧ್ಯಕ್ಷ ಈರಣ್ಣ ಕೆಂಭಾವಿ, ದೈ.ಶಿ.ಸಂ.ರಾ. ಉಪಾಧ್ಯಕ್ಷ ಚನ್ನಬಸಪ್ಪ ಕೊಲ್ಲೂರ್, ಎಸ್.ಜಿ.ವರ್ಮಾ ಹಿಂದಿ ಪ್ರೌಢಶಾಲೆಯ ಮುಖ್ಯಗುರು ಮಲ್ಲಿನಾಥ ಪಾಟೀಲ,ನಿರ್ಗಮಿತ ದೈಹಿಕ ಶಿಕ್ಷಣಾಧಿಕಾರಿ ದೇವೆಂದ್ರ ರೆಡ್ಡಿ, ದೈ. ಶಿ. ಸಂಘದ ತಾಲೂಕಾಧ್ಯಕ್ಷ ವೀರಭದ್ರಪ್ಪ ಗುರುಮಿಠಕಲ್, ಗ್ರೇಡ್-1 ದೈ.ಶಿ.ಸಂ ತಾಲೂಕಾಧ್ಯಕ್ಷ ವಿಜಯಲಕ್ಷ್ಮಿ ಪಾಟೀಲ ವೇದಿಕೆಯ ಮೇಲಿದ್ದರು.
ಈ ಸಂದರ್ಭದಲ್ಲಿ ಚಿತ್ತಾಪೂರ ದೈಹಿಕ ಶಿಕ್ಷಣಾಧಿಕಾರಿ ಶಿವಶರಣಪ್ಪ ಮಂಠಾಳೆ ಹಾಗೂ ನಿರ್ಗಮಿತ ದೈಹಿಕ ಶಿಕ್ಷಣಾಧಿಕಾರಿ ದೇವೆಂದ್ರ ರೆಡ್ಡಿ ಅವರನ್ನು ಸನ್ಮಾನಿಸಲಾಯಿತು.ನಂತರ ಕಾರ್ಯಾಗಾರವನ್ನು ನಡೆಸಲಾಯಿತು.
ದೈಹಿಕ ಶಿಕ್ಷಕರಾದ ಬನ್ನಪ್ಪ ಸೈದಾಪೂರ ನಿರೂಪಿಸಿದರು,ಮಲ್ಲಿನಾಥ ಪಾಟೀಲ ಸ್ವಾಗತಿಸಿದರು, ಸಿದ್ದಲಿಂಗಪ್ಪ ಬುಳ್ಳಾ ವಂದಿಸಿದರು.