ಶಹಾಬಾದ: ಅಗತ್ಯ ವಸ್ತುಗಳ ಬೆಲೆ ಏರಿಕೆ ಇಳಿಸಲು, ದುಡಿಯುವ ಜನರ ಶೋಷಣೆ ತಪ್ಪಿಸಲು, ಕೇಂದ್ರ ಮತ್ತು ರಾಜ್ಯ ಸರಕಾರದ ಜನ ವಿರೋಧಿ ನೀತಿಗಳ ವಿರುದ್ಧ ದೇಶಾದ್ಯಂತ ರೈತ, ಕೂಲಿಕಾರ್ಮಿಕ, ಕಾರ್ಮಿಕರ, ದುಡಿಯುವ ಜನರ ಬೇಡಿಕೆಗಳಿಗೆ ಆಗ್ರಹಿಸಿ ಶುಕ್ರವಾರ ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ,ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ವತಿಯಿಂದ ತಹಸೀಲ್ದಾರ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.
2024 ರ ಲೋಕಸಭಾ ಚುನಾವಣೆಗಳು ಮತ್ತೆ ಪ್ರಾರಂಭವಾಗುತ್ತಿದೆ. ಎನ್‍ಡಿಎ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು 10 ವರ್ಷಗಳಾಗಿವೆ. ಚುನಾವಣೆಗೂ ಮೊದಲು ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ತಿಳಿಸಿದಂತೆ 2 ಕೋಟಿ ಉದ್ಯೋಗದ ಸೃಷ್ಟಿ, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಡಾ.ಸ್ವಾಮಿನಾಥನ್ ರವರ ಶಿಫಾರಸ್ಸಿನಂತೆ ಬೆಂಬಲ ಬೆಲೆಯ ಕಾನೂನು ರಚಿಸುವುದಾಗಿ ತಿಳಿಸಲಾಗಿತ್ತು.
ಆದರೆ ‘ಸಬ್‍ಕಾ ಸಾಥ್’ ಎಂದು ಜನಸಾಮಾನ್ಯರ ಕೊಂಡುಕೊಳ್ಳುವ ಸಾಮಾಥ್ರ್ಯವನ್ನು ಕುಗ್ಗಿಸಿ, ಆಹಾರ, ಆರೋಗ್ಯ ಮತ್ತು ಶಿಕ್ಷಣಕ್ಕಾಗಿ ಅನುದಾನಗಳನ್ನು ಹೆಚ್ಚಳ ಮಾಡುವ ಬದಲಿಗೆ ಅನುದಾನ ಕಡಿತ ಮಾಡಿ ಆರೋಗ್ಯ ಮತ್ತು ಶಿಕ್ಷಣವನ್ನು ಸಂಪೂರ್ಣವಾಗಿ ಖಾಸಗೀಕರಿಸಿ, ಜನರಿಗೆ 2700 ಕ್ಯಾಲೋರಿ ಆಹಾರ ಪ್ರತಿದಿನ ಸಿಗದ ಪರಿಣಾಮ ಇಂದು ಭಾರತ ಹಸಿವಿನ ಸೂಚ್ಯಾಂಕದಲ್ಲಿ 111ನೇ ಸ್ಥಾನಕ್ಕೆ ಕುಸಿದಿದೆ.
ಭಾರತವನ್ನು ಕಟ್ಟಿರುವ ಸಾರ್ವಜನಿಕ ಕೈಗಾರಿಕೆಗಳನ್ನು ಖಾಸಗೀಕರಿಸಿದ್ದಲ್ಲದೇ ಸರ್ಕಾರದ ಆಸ್ತಿಯನ್ನು ಎನ್‍ಎಮ್‍ಪಿ ಮುಖಾಂತರ ಖಾಸಗೀಯವರಿಗೆ ದಾನ ಮಾಡಲಾಗುತ್ತಿದೆ. ದೇಶಕ್ಕೆ ಅನ್ನ ನೀಡುವ ರೈತ ಬೆಳೆದ ಬೆಳೆಗಳಿಗೆ ಡಾ. ಸ್ವಾಮಿನಾಥನ್ ಶಿಫಾರಸ್ಸಿನಂತೆ ಬೆಂಬಲ ಬೆಲೆಗೆ ಕಾನೂನು ತರುವ ಬದಲು ರೈತನನ್ನು ಬಲಿ ತೆಗೆದು ಕೊಳ್ಳುವ ನೀತಿ ಸರಿಯೇ?ಕೋಮುಭಾವನೆಗಳನ್ನು ಪ್ರಚೋದನೆಗೊಳಿಸಿ ಜನರನ್ನು ಧಾರ್ಮಿಕವಾಗಿ ಕಿತ್ತಾಡಲು ಬೇಕಾದ ವಿಷಮ ವಾತಾವರಣವನ್ನು ಸೃಷ್ಟಿಸುವುದು ಸಬ್ ಕಾ ವಿಕಾಸ ಎನ್ನಲಾಗುತ್ತಿದೆ.
ಆದ್ದರಿಂದ ಸರ್ಕಾರ ಸಂಪೂರ್ಣವಾಗಿ ತನ್ನ ನೀತಿಗಳನ್ನು ಬದಲಾಯಿಸಬೇಕೆಂದೂ ಒತ್ತಾಯಿಸಿ ದೇಶದ ಎಲ್ಲಾ ರೈತರು, ಕೂಲಿಕಾರರು, ಕಾರ್ಮಿಕರು ಒಂದಾಗಿ ಚಳುವಳಿ ನಡೆಸುತ್ತಿದ್ದಾರೆ. ಇಂತಹ ಚಳುವಳಿಗಳ ಮೇಲೆ ದೆಹಲಿಯಲ್ಲಿ ಪೆÇಲೀಸ್ ದಬ್ಬಾಳಿಕೆ ಮಾಡಿರುವುದನ್ನು ಖಂಡಿಸಿ ಮತ್ತು ಕೆಳಕಂಡ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ರಾಯಪ್ಪ ಹುರಮುಂಜಿ, ಅಂಗನವಾಡಿ ನೌಕರರ ಸಂಘದ ತಾಲೂಕಾಧ್ಯಕ್ಷೆ ಸಾಬಮ್ಮ ಕಾಳಗಿ, ಕಟ್ಟಡ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ನಾಗಪ್ಪ ರಾಯಚೂರಕರ್, ಅಂಗನವಾಡಿ ನೌಕರರ ಸಂಘದ ನಗರಾಧ್ಯಕ್ಷೆ ಮೈತ್ರಾ.ಎಮ್.ತಳವಾರ, ಪ್ರಶಾಂತ ಕುಸಾಳೆ, ವಿಲೇಶ.ಕೆ.ರಾಠೋಡ, ಅಂಬುಜಾ.ಎಮ್.ಅಂತೇಕನಳ್ಳಿ, ಸಿದ್ದಮ್ಮ.ಎಸ್.ದೇವನ್, ಮಲ್ಲೇಶಿ ಭಜಂತ್ರಿ ಇತರರು ಇದ್ದರು.