ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿರುವ ನಿಜಶರಣ ಅಂಬಿಗರ ಚೌಡಯ್ಯನ ಅಧ್ಯಯನ ಪೀಠಕ್ಕೆ ವಿಧಾನ ಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ ಅವರು ಭಾನುವಾರ ಮಧ್ಯಾಹ್ನ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ರಿಶೀಲನೆ ನಡೆಸಿದ ಕಮಕನೂರ ಬಿರುಕು ಬಿಟ್ಟಿರುವ ಕಟ್ಟಡ, ಸುಣ್ಣ ಬಣ್ಣ ಬಳಿಯದ ದೃಶ್ಯ, ಪೀಠೋಪಕರಣ ಕೊರತೆ ಮತ್ತು ಶೌಚಾಲಯ ಅವ್ಯವಸ್ಥೆ ಮತ್ತು ಚೌಡಯ್ಯ ಅವರ ಕುರಿತಾದ ಒಂದು ಪುಸ್ತಕ ಇಲ್ಲದಿರುವುದನ್ನು ಕಂಡು ಅಸಮಾಧಾನಗೊಂಡು, ಕೂಡಲೇ ಈ ಪೀಠಕ್ಕೆ ಎಷ್ಟು ಅನುದಾನ ಬಂದಿದೆ, ಎಷ್ಟು ಖರ್ಚಾಗಿದೆ ಮತ್ತು ಯಾವ ಪೀಠೋಪಕರಣ ಖರೀದಿಸಲಾಗಿದೆ ಅದಕ್ಕೆ ಎಷ್ಟು ಖರ್ಚಾಗಿದೆ. 50 ಲಕ್ಷಕ್ಕೆ ಎಫ್ ಡಿ ಹಣಕ್ಕೆ ಎಷ್ಟು ಬಡ್ಡಿ ಜಮಾವಣೆಯಾಗಿದೆ ಎಂಬುದರ ಕುರಿತು ನಿಖರ ವರದಿ ಶೀಘ್ರದಲ್ಲಿ ನೀಡುವಂತೆ ನಿರ್ದೇಶಕ ಎಸ್.ಟಿ.ಪೋತೆ ಅವರಿಗೆ ಸೂಚಿಸಿದರು.
ಪ್ರತಿ ವರ್ಷ ಕಾಟಾಚಾರಕ್ಕೆ ಪೀಠದಲ್ಲಿ ಅಂಬಿಗರ ಚೌಡಯ್ಯ ಜಯಂತಿ ಮಾಡಿ ಕೈತೊಳೆದುಕೊಳ್ಳಲಾಗುತ್ತಿದೆ. ಸಮಾಜದ ಜನಪ್ರತಿನಿಧಿಗಳಿಗೆ, ಸಲಹಾ ಸಮಿತಿ ಪದಾಧಿಕಾರಿಗಳಿಗೆ, ಸಮಾಜದ ಮುಖಂಡರಿಗೆ 16 ವರ್ಷದಲ್ಲಿ ಒಮ್ಮೆಯೂ ಆಹ್ವಾನ ಮಾಡಿಲ್ಲ ಮತ್ತು ಚೌಡಯ್ಯ ಅವರ ಕುರಿತು ವಿಚಾರ ಸಂಕಿರಣ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡದೆ ನಿರ್ಲಕ್ಷ್ಯ ಮಾಡಲಾಗಿದೆ. ಮುಂದೆ ಹೀಗಾಗದಂತೆ ಕ್ರಮಕೈಗೊಳ್ಳಬೇಕು. ಸಲಹಾ ಸಮಿತಿ ಸಭೆ ಕರೆದು ಸಮಾಜದ ಜನಪ್ರತಿನಿಧಿಗಳಿಗೆ ಮತ್ತು ಸಮಾಜದ ಮುಖಂಡರೊಂದಿಗೆ ಚರ್ಚಿಸಿ ಪೀಠದಲ್ಲಿ ಚೌಡಯ್ಯನವರ ಮೂರ್ತಿ ಅನಾವರಣಗೊಳಿಸುವ ನಿರ್ಣಯ ಕೈಗೊಳ್ಳಬೇಕು ೆಂದರು.
ಈ ಪೀಠ ವಿಶ್ವವಿದ್ಯಾಲಯದಲ್ಲಿ ಎಲ್ಲಿದೆ ಎಂಬುದು ಯಾರಿಗೂ ಗೊತ್ತಿಲ್ಲ. ನಾನೇ ಪೀಠ ಹುಡುಕಲು ಅರ್ಧ ಗಂಟೆ ಬೇಕಾಯಿತು. ಪೀಠಕ್ಕೆ ಬರಲು ಮಾರ್ಗ ಸೂಚಿಯ ನಾಮಫಲಕ ಅಳವಡಿಸಬೇಕು. ಪ್ರತಿ ವರ್ಷ ನಿರಂತರವಾಗಿ ಚೌಡಯ್ಯನವರ ಕುರಿತು ವಿಚಾರ ಸಂಕಿರಣ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಬೇಕು. ಪೀಠದ ಅಭಿವೃದ್ಧಿಗೆ ಅಗತ್ಯವಾಗಿ ಬೇಕಾಗಿರುವ ಅನುದಾನ ಸರಕಾರದಿಂದ ಕೊಡಿಸುವ ಭರವಸೆ ನೀಡಿದರು.
ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ಕಮಕನೂರ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉನ್ನತ ಶಿಕ್ಷಣ ಸಚಿವರಾದ ಡಾ. ಎಂ. ಸಿ. ಸುಧಾಕರ್ ಅವರು ಅಂಬಿಗರ ಚೌಡಯ್ಯನ ಪೀಠದಿಂದ ನಿರ್ಮಾಣವಾಗಿರುವ ಭವನ ಗುಲ್ಬರ್ಗ ವಿಶ್ವವಿದ್ಯಾಲಯದೊಳಗಿದ್ದು, ಭವನವನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗುತ್ತಿದ್ದು, ಉದ್ದೇಶಿತ ಕಾರ್ಯ ಚಟುವಟಿಕೆಗಳಿಗಾಗಿ ಉಪಯೋಗಿಸಲಾಗುತ್ತಿದೆ ಎಂದು ಸಚಿವರು ಹೇಳಿದ್ದರು. ಇದಕ್ಕೆ ತೃಪ್ತರಾಗದ ಕಮಕನೂರ ಅವರು, ಭವನ ನಿರ್ಮಾಣ ಮಾಡಲಾಗಿದೆ. ಆದರೆ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳದೆ ಇರುವುದರಿಂದ ಭವನ ಬೀದಿನಾಯಿಗಳ ಆವಾಸ ಸ್ಥಾನವಾಗಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳದ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಲು ಒತ್ತಾಯಿಸಿರುವುದನ್ನು ಇಲ್ಲಿ ಸ್ಮರಿಸಬಹುದು. ಈ ಹಿನ್ನೆಲೆಯಲ್ಲಿ ವಾಸ್ತವಿಕ ಸ್ಥಿತಿಗತಿ ತಿಳಿದುಕೊಳ್ಳಲು ಕಮಕನೂರ ಅವರು ಖುದ್ದಾಗಿ ಪೀಠಕ್ಕೆ ಭೇಟಿ ನೀಡಿದರು.
ಭೇಟಿ ಸಂದರ್ಭದಲ್ಲಿ ಕೋಲಿ ಸಮಾಜದ ಮುಖಂಡರಾದ ರಮೇಶ ನಾಟೇಕಾರ, ಸಿದ್ದು ಬಾನರ, ವಿಜಯಕುಮಾರ ಹದಗಲ, ಶಿವಾನಂದ ಹೊನಗುಂಟಿ, ಸಂದೇಶ ಕಮಕನೂರ ಸೇರಿದಂತೆ ಇತರರಿದ್ದರು. ಪೀಠದ ನಿರ್ದೇಶಕ ಪ್ರೊ.ಎಸ್.ಟಿ.ಪೋತೆ, ಗುಲಬರ್ಗಾ ವಿಶ್ವವಿದ್ಯಾಲಯದ ರಿಜಿಸ್ಟರ್ ಶರಣಪ್ಪ ಸತ್ಯಂಪೇಟೆ ಅವರನ್ನು ಹೂಗುಚ್ಚ ನೀಡಿ ವಿಧಾನ ಪರಿಷತ್ ಸದಸ್ಯರಿಗೆ ಗೌರವಿಸಿದರು.