ಕಂದಾಯ ಇಲಾಖೆಯಲ್ಲಿ ಆನ್‍ಲೈನ್ ಸೇವೆಗಳಿಗೆ ಪ್ರೋತ್ಸಾಹ: ಸಚಿವ ಕೃಷ್ಣ ಬೈರೇಗೌಡ

0
6

ಬೆಂಗಳೂರು; ಕಂದಾಯ ಇಲಾಖೆಯಲ್ಲಿ ತಂತ್ರಜ್ಞಾನ ಆಧಾರಿತ ಆನ್‍ಲೈನ್ ಸೇವೆಗಳನ್ನು ಒದಗಿಸಿ, ಜನರನ್ನು ಕಚೇರಿಗಳಿಗೆ ಭೇಟಿ ಮಾಡುವುದರಿಂದ ಮುಕ್ತಿಗೊಳಿಸುವುದೇ ನಮ್ಮ ಉದ್ದೇಶವೆಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ತಿಳಿಸಿದರು.

ಇಂದು ವಿಕಾಸಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಕಂದಾಯ ಇಲಾಖೆ, ಭೂಮಾಪನ, ಕಂದಾಯ ವವ್ಯಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಹಾಗೂ ಕಂದಾಯ ಆಯುಕ್ತಾಲಯ ಇವರ ಸಹಭಾಗಿತ್ವದಲ್ಲಿ ಹೊಸದಾಗಿ ಆಯ್ಕೆಯಾದ 991 ಪರವಾನಗಿ ಭೂಮಾಪಕರುಗಳಿಗೆ ಪರವಾನಗಿ ಪ್ರಮಾಣಪತ್ರ ಹಾಗೂ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‍ಟಾಪ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದರು.

Contact Your\'s Advertisement; 9902492681

ಪ್ರತಿ ತಿಂಗಳು ಸುಮಾರು ಒಂದು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳನ್ನು ಮೋಜಿಣೀ ಅಡಿಯಲ್ಲಿ ಸ್ವೀಕರಿಸಿ ವಿಲೇವಾರಿ ಮಾಡಲಾಗುತ್ತಿದೆ. ಕಳೆದ ವರ್ಷ ಮೇ ನಿಂದ ಈ ಫೆಬ್ರವರಿವರೆಗೆ ಒಟ್ಟು 11,77,564 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಹೊಸದಾಗಿ ಆಯ್ಕೆಯಾದ ಸುಮಾರು 991 ಭೂಮಾಪಕರಿಗೆ ತರಬೇತಿಯನ್ನು ಸಹ ಒದಗಿಸಲಾಗಿದೆ. ಡ್ರೋಣ್ ಆಧಾರಿತ ಮರು ಭೂಮಾಪನ ಕಾರ್ಯ ಕೈಗೊಳ್ಳಲಾಗಿದ್ದು, ಸ್ವಾತಂತ್ರ್ಯ ಬಂದ ನಂತರ ಇದೇ ಮೊದಲ ಬಾರಿಗೆ 21 ಜಿಲ್ಲೆಗಳಲ್ಲಿ 1,50,000 ಚದರ ಕಿ.ಮೀ ಡ್ರೋನ್ ತಂತ್ರಜ್ಞಾನ ಬಳಸಿಕೊಂಡು ಭೂಮಾಪನ ಕಾರ್ಯ ಕೈಗೊಳ್ಳಲಾಗುತ್ತಿದೆ. ರಾಮನಗರ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಸಂಪೂರ್ಣ ಡ್ರೋಣ್ ಫ್ಲೈಯಿಂಗ್ ಕಾರ್ಯ ಪೂರ್ಣಗೊಂಡಿದೆ ಎಂದರು.

ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆಯಲ್ಲಿ ಶಾಶ್ವತ ಯೋಜನೆ ಜಾರಿ ಮಾಡಿ, ಇದಕ್ಕೆ ನೀಲಿನಕ್ಷೆಯನ್ನು ಸಿದ್ದಪಡಿಸಬೇಕು, ಇದಕ್ಕೆ ಅನುಗುಣವಾಗಿ ಸಿಬ್ಬಂದಿಗಳನ್ನು ನೇಮಿಸಿ ಕಾರ್ಯಕ್ರಮಗಳು ತ್ವರಿತಗತಿಯಲ್ಲಿ ಮಾಡಬೇಕು. ನಾವಿನ್ನು 18 ರಿಂದ 19ನೇ ಶತಮಾನದ ಮನಸ್ಥಿತಿಯನ್ನು ಹೊಂದಿದ್ದೇವೆ. ಈ ಶತಮಾನದ ಹೊಸ ತಂತ್ರಜ್ಞಾನಗಳಿಗೆ ನಮ್ಮನ್ನು ಒಗ್ಗಿಸಿಕೊಂಡು ವೇಗವಾಗಿ ಕೆಲಸ ನಿರ್ವಹಿಸಬೇಕೆಂದರು.

ಸರ್ಕಾರವು 364 ಸರ್ಕಾರಿ ಸರ್ವೇಯರ್‍ಗಳ ನೇಮಕಾತಿಗೆ ಒಪ್ಪಿಗೆ ನೀಡಿದ್ದು, ಇನ್ನು 6 ತಿಂಗಳೊಳಗೆ ಇವರಿಗೆ ನೇಮಕಾತಿ ಆಗಲಿದೆ. 27 ಸಹಾಯಕ ನಿರ್ದೇಶಕರು, ಭೂದಾಖಲೆಗಳ ಹುದ್ದೆಗಳ ಆಯ್ಕೆಗೆ ಅರ್ಜಿ ಕರೆಯಲಾಗಿದೆ. ಅಲ್ಲದೆ 541 ಸರ್ವೇಯರ್‍ಗಳ ನೇರ ನೇಮಕಾತಿಗೆ ಸಹ ಸರ್ಕಾರ ಸಕರಾತ್ಮಕವಾಗಿ ಸ್ಪಂದಿಸಿದೆ. 500 ಸರ್ವೇಯರ್‍ಗಳ ಹೆಚ್ಚವರಿ ಹುದ್ದೆಗಳಿಗೆ ಸಹ ಬೇಡಿಕೆ ಇಡಲಾಗಿದ್ದು, ಮುಂಬರುವ ದಿನಗಳಲ್ಲಿ ನೇಮಕವಾಗಲಿದೆ. 13 ಕೋಟಿ ವೆಚ್ಚದಲ್ಲಿ 420 ರೋವರ್ಸ್ ಮಿಷನ್‍ಗಳ ಟೆಂಡರ್ ಕರೆಯಲಾಗಿದೆ. ಇದರಿಂದ ಭೂ ಅಳತೆ ಕಾರ್ಯ ಸುಗಮವಾಗಿ ಕೈಗೊಳ್ಳಲಾಗುವುದೆಂದರು.

ಭೂದಾಖಲೆಗಳಲ್ಲಿ ಅತಿ ಮುಖ್ಯವಾದ ಆಕಾರ್‍ಬಂದ್ ಪುಸ್ತಕಗಳ ಗಣಕೀಕರಣ ಕಾರ್ಯ ಕೈಗೊಳ್ಳಲಾಗುತ್ತಿದ್ದು ಬಾಕಿ ಇರುವ 80 ಲಕ್ಷ ಆಕಾರ್ ಬಂದ್ ಮಾಹಿತಿಯನ್ನು ಆಂದೋಲನ ರೂಪದಲ್ಲಿ ಗಣಕೀಕರಣ ಗೊಳಿಸಲಾಗುತ್ತಿದ್ದು, ಒಂದೆರೆಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಇದಕ್ಕೆ ಹೊಸ ಮಾದರಿ ಕ್ಯಾಮೆರಾ, ಕಂಪ್ಯೂಟರ್, ಪಿಂಟರ್‍ಗಳ ಖರೀದಿ 55 ಕೋಟಿ ರೂಗಳಿಗೆ ಟೆಂಡರ್ ನೀಡಲಾಗಿದೆ, ನಕಲಿ ವ್ಯವಹಾರಗಳನ್ನು ತಡೆಯಲು ದಾಖಲೆಗಳನ್ನು ಡಿಜಿಟಲೀಕರಣ ಮಾಡಿ, ಪಹಣಿಗಳಿಗೆ ಆಧಾರ್ ಜೋಡಣೆ ಮಾಡಲಾಗುತ್ತಿದೆ, ಗ್ರಾಮ ಆಡಳತಾಧಿಕಾರಿಗಳ / ಲೆಕ್ಕಾಧಿಕಾರಿಗಳಿಗೆ 25 ಕೋಟಿ ವೆಚ್ಚದಲ್ಲಿ ಲ್ಯಾಪ್‍ಟಾಪ್ ಖರೀದಿಸಿ ವಿತರಣೆ ಮಾಡಲಾಗುತ್ತಿದ್ದು, ಒಂದು ವರ್ಷದಲ್ಲಿ ಇವರೆಲ್ಲರಿಗೂ ವಿತರಿಸಲಾಗುತ್ತಿದೆ, ಕಂದಾಯ ಇಲಾಖೆಯಲ್ಲಿ ಎಲ್ಲಾ ಕಡತಗಳೂ ಆನ್‍ಲೈನ್ ಮೂಲಕವಾಗಿ ತ್ವರಿತ ವಿಲೇವಾರಿ ಮಾಡಲು ಪ್ರೋತ್ಸಾಹ ನೀಡಲಾಗುತ್ತಿದೆ. ಇದೇ ಏಪ್ರಿಲ್ 01 ರಿಂದ ಗ್ರಾಮ ಸೇವಕರಿಗೆ ನೀಡುವ ವೇತನವನ್ನು 13 ಸಾವಿರದಿಂದ 18 ಸಾವಿರಕ್ಕೆ ಹೆಚ್ಚಿಸಲಾಗುವುದುದೆಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರಾದ ರಿಜ್ವಾನ್ ಅರ್ಷದ್, ಕಂದಾಯ ಇಲಾಖೆಯನ್ನು ಗೊಂದಲದ ಗೂಡಗಿಯೇ ಇನ್ನು ಜನ ನೋಡುತ್ತಿದ್ದಾರೆ. ಕಂದಾಯ ಸಚಿವರ ನೇತೃತ್ವದಲ್ಲಿ ಯೋಜನೆಗಳು ಜನರಿಗೆ ತ್ವರಿತವಾಗಿ ತಲುಪಲು ಇದಕ್ಕೆ ಅಧಿಕಾರಿ, ಸಿಬ್ಬಂದಿಗಳ ಕಾರ್ಯಕ್ಷಮತೆ ಸಹ ಬಹು ಮುಖ್ಯ ಎಂದರು.

ಸಮಾರಂಭದಲ್ಲಿ ಭೂಮಾಪನ ಮಾರ್ಗದರ್ಶಿ ಸಂಪುಟ-1, ಸಂಪುಟ-2, ಭೂಮಾಪನ ಇಲಾಖೆ ಪದಕೋಶವನ್ನು ಗಣ್ಯರು ಬಿಡುಗಡೆ ಗೊಳಿಸಿದರು.

ಕಾರ್ಯಕ್ರಮದಲ್ಲಿ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಆಯುಕ್ತರು ಜೆ.ಮಂಜುನಾಥ ಪ್ರಾಸ್ತಾವಿಕ ಭಾಷಣ ಮಾಡಿದರು, ಕಾರ್ಯಕ್ರಮದಲ್ಲಿ ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯರಾದ ನಸೀರ್ ಅಹ್ಮದ್, ಕಂದಾಯ ಇಲಾಖೆ ಆಯುಕ್ತರಾದ ಸುನೀಲ್ ಕುಮಾರ್, ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ರಾಜೇಂದ್ರ ಕುಮಾರ್ ಕಟಾರಿಯಾ ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here