- ಎಂ.ಸಿ.ಎಂ.ಸಿ. ಸಮಿತಿ ಕಾರ್ಯ ಪರಿಶೀಲಿಸಿದ ಡಿ.ಸಿ.ಎಫ್ ಸುಮಿತ್ ಪಾಟೀಲ
ಕಲಬುರಗಿ; ಇತ್ತೀಚೆಗೆ ರಾಜಕೀಯ ನಾಯಕರು ಹೆಚ್ಚಾಗಿ ವಾಟ್ಸಾಪ್ ಚಾನೆಲ್ ಬಳಸುತ್ತಿರುವುದರಿಂದ ವಾಟ್ಸಾಪ್ ಚಾನೆಲ್‌ಗಳು ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೇಲೆ ತೀವ್ರ ನಿಗಾ ವಹಿಸಬೇಕು ಎಂದು ಮೀಡಿಯಾ ಮಾನಿಟರಿಂಗ್ ಸೆಲ್ ಸಿಬ್ಬಂದಿಗೆ ಮಾಧ್ಯಮ ಸಂಬಂಧಿತ ವಿಷಯಗಳ ಮೇಲ್ವಿಚಾರಣೆಯ ನೋಡಲ್ ಅಧಿಕಾರಿಗಳು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮಿತ್ ಪಾಟೀಲ ಸೂಚನೆ ನೀಡಿದರು.
ಶನಿವಾರ ಕಲಬುರಗಿ ನಗರದ ವಾರ್ತಾ ಭವನದಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸ್ಥಾಪಿಸಲಾಗಿರುವ ಮೀಡಿಯಾ ಮಾನಿಟರಿಂಗ್ ಸೆಲ್ ಗೆ ಭೇಟಿ ನೀಡಿದ ಅವರು, ಇದಲ್ಲದೆ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮದಲ್ಲಿ ಬರುವ ಕಾಸಿಗಾಗಿ ಸುದ್ದಿ ಪ್ರಸಾರ ಗೊಂಡಲ್ಲಿ ಕೂಡಲೆ ಎಂ.ಸಿ.ಎಂ.ಸಿ ಸಮಿತಿಗೆ, ಎಂ.ಸಿ.ಸಿ ಉಲ್ಲಂಘನೆ ಕಂಡುಬಂದಲ್ಲಿ ತಕ್ಷಣವೇ ಸೂಕ್ತ ಕಾನೂನು ಕ್ರಮಕ್ಕೆ ಸಹಾಯಕ ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದರು.
ದಿನದ 24 ಗಂಟೆ ಮುದ್ರಣ ಮಾಧ್ಯಮ, ಕೇಬಲ್ ಟಿ.ವಿ., ರಾಜಕೀಯ ಪಕ್ಷ, ನಾಯಕ,ಅಭ್ಯರ್ಥಿಗಳ ಸಾಮಾಜಿಕ ಜಾಲತಾಣ ಖಾತೆಗಳನ್ನು ವೀಕ್ಷಿಸಬೇಕು. ಎಫ್.ಎಂ. ರೇಡಿಯೋ ಮೇಲೂ ನಿಗಾ ವಹಿಸಬೇಕು ಎಂದರು. ಜಾಹೀರಾತು ಪ್ರಕಟಗೊಂಡಲ್ಲಿ ಅದನ್ನು ಆಯಾ ಪಕ್ಷ, ಅಭ್ಯರ್ಥಿಗಳ ಲೆಕ್ಕಕ್ಕೆ ಝರ್ಚು ಹಾಕಿ ಖರ್ಚು ವೆಚ್ಚ ಸಮಿತಿಗೆ ಮಾಹಿತಿ ನೀಡಬೇಕೆಂದು ಸಿಬ್ಬಂದಿಗಳಿಗೆ ನಿರ್ದೇಶನ ನೀಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಮತ್ತು ಜಿಲ್ಲಾ ಎಂ.ಸಿ.ಎಂ.ಸಿ ಸಮಿತಿ ಕಾರ್ಯದರ್ಶಿ ಸಿದ್ದೇಶ್ವರಪ್ರ ಜಿ.ಬಿ. ಅವರು ಸಮಿತಿ ಕಾರ್ಯನಿರ್ವಹಣೆ ಬಗ್ಗೆ ವಿವರಿಸಿದರು. ಇತರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.