ಇಂದು ಕಲಬುರ್ಗಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಹೈದರಾಬಾದ್ ಕರ್ನಾಟಕ ಯಾನೆ ಕಲ್ಯಾಣ ಕರ್ನಾಟಕ (ಕ.ಕ.) ಎಂದು ಹೆಸರಿನ ಮರು ನಾಮಕರಣ ಮಾಡಿ ಕಲ್ಯಾಣ ಕರ್ನಾಟಕದ ಉತ್ಸವ ಉದ್ಘಾಟಿಸಲಿದ್ದಾರೆ.
೧೯೪೭ ಆಗಸ್ಟ್ ೧೫ ಭಾರತದ ಸ್ವಾತಂತ್ರ್ಯ ದಿನಾಚರಣೆ. ನಮ್ಮ ಮೊಗಲಾಯಿ ನಾಡಿನ ಹೈದರಾಬಾದ್ ಕರ್ನಾಟಕಕ್ಕೆ ವಿಮೋಚನೆ ದೊರಕಿದ್ದು ೧೯೪೮ ಸೆಪ್ಟೆಂಬರ್ ೧೭ರ ಸಂಜೆ ೫ ಗಂಟೆಗೆ. ಅಂದಿನ ಕನ್ನಡ ನಾಡಿನ ಕಲಬುರ್ಗಿ, ಬೀದರ, ರಾಯಚೂರು ಜಿಲ್ಲೆಗಳು ಸೇರಿದಂತೆ ಮರಾಠಿ ನೆಲದ ಐದು ಜಿಲ್ಲೆಗಳು, ತೆಲಂಗಾಣದ ಎಂಟು ಜಿಲ್ಲೆ ಸೇರಿ ಒಟ್ಟು ಹದಿನಾರು ಜಿಲ್ಲೆಗಳು ಹೈದರಾಬಾದ್ ಸಂಸ್ಥಾನದ ನಿಜಾಮ ರಾಜ್ಯದ ಅಧೀನದಲ್ಲಿದ್ದವು. ಇವತ್ತಿಗೂ ನಮ್ಮ ಕಲಬುರ್ಗಿಯಲ್ಲಿ ಈ ಮೂರು ಪ್ರಮುಖ ಸಂಸ್ಕೃತಿಗಳ ‘ ಬಹುತ್ವ ‘ ಢಾಳಾಗಿ ಗೋಚರಿಸುತ್ತದೆ. ಅಂತೆಯೇ ನಮ್ಮ ಕಲಬುರ್ಗಿಯು ಕನ್ನಡ, ಉರ್ದು, ಮೋಡಿ, ಮರಾಠಿ, ತೆಲುಗು, ಹಿಂದಿ ಮಾತಾಡುವ ಬರೆಯುವ ಬಹು ಭಾಷಾ ಸಂಸ್ಕೃತಿಗಳ ಸೌಹಾರ್ದದ ಮಹಾ ಸಂಗಮ. ಒಂದು ವರ್ಷ ಒಂದು ತಿಂಗಳು ಒಂದು ದಿನ ತಡವಾಗಿ ಭಾರತದ ಒಕ್ಕೂಟದಲ್ಲಿ ನಮಗೆ ಸೇರ್ಪಡೆಯ ಅವಕಾಶ ಸಿಕ್ಕಿತು. ಅಷ್ಟೇ ಯಾಕೆ ದೇಶದ ೫೬೫ ಸಂಸ್ಥಾನಗಳು ಭಾರತದ ಒಕ್ಕೂಟದಲ್ಲಿ ತುಸು ತಡವಾಗಿ ವಿಲೀನಗೊಂಡವು.
ಅಂದಿನ ಉಪ ಪ್ರಧಾನಿ ಹಾಗೂ ಗೃಹ ಮಂತ್ರಿಗಳಾದ ಉಕ್ಕಿನ ಮನುಷ್ಯ ಖ್ಯಾತಿಯ ಸರದಾರ ವಲ್ಲಭಭಾಯಿ ಪಟೇಲ್ ಅವರಿಗೆ ಸಂಸ್ಥಾನಗಳ ವಿಲೀನಿಕರಣದ ಕೀರ್ತಿ ಸಲ್ಲುತ್ತದೆ. ನಮ್ಮ ಅಂದಿನ ಹೈ.ಕ. ವಿಮೋಚನಾ ಹೋರಾಟದ ಕೀರ್ತಿ ಸಿಂದಗಿ ಮೂಲದ ಸ್ವಾಮಿ ರಮಾನಂದ ತೀರ್ಥರಿಗೆ ಸಲ್ಲುತ್ತದೆ. ಅಂತೆಯೇ ಅವರನ್ನು ಹೈ.ಕ. ಸ್ವಾತಂತ್ರ್ಯ ಹೋರಾಟದ ಗಾಂಧಿ ಎಂತಲೂ ಕರೆಯುತ್ತಾರೆ. ಹಾಗೆಂದ ಮಾತ್ರಕ್ಕೆ ಅವರೊಬ್ಬರಿಂದಲೇ ದೊರಕಿತೆಂದಲ್ಲ. ಮಹಾತ್ಮ ಗಾಂಧಿ ಒಬ್ಬರಿಂದಲೇ ದೇಶಕ್ಕೆ ಸ್ವಾತಂತ್ರ್ಯ ದೊರಕಿತು ಎಂದರ್ಥವಲ್ಲ. ಆದರೂ ಆಗಷ್ಟ್ ೧೫ ರ ಸ್ವಾತಂತ್ರ್ಯ ದಿನಾಚರಣೆಯ ದಿನದಂದು ಎಲ್ಲರೂ ಮೊದಲ ಹೆಸರು ಹೇಳುವುದೇ ಗಾಂಧಿಯವರದಲ್ಲವೇ ? ಹಾಗೇ.
ಹೈ.ಕ. ವಿಮೋಚನೆಗೆ ಜನಸಾಮಾನ್ಯರ ಬಹುದೊಡ್ಡ ಬಲಿದಾನ, ಹೋರಾಟದ ಕೊಡುಗೆ ಇದೆ. ರೈತರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ಹೀಗೆ ಸಮಷ್ಟಿಯ ಹೋರಾಟದ ಫಲವದು. ಆದರೆ ಮುಂಚೂಣಿ ನಾಯಕತ್ವವೇ ಯಾವಾಗಲೂ ನೆನಪಿಗೆ ಬರೋದು ಸಹಜ. ಅಂದು ಸಾಮಾನ್ಯ ಮತ್ತು ಸುಶಿಕ್ಷಿತ ಮುಸಲ್ಮಾನರು ಸಹ ಭಾರತದ ಒಕ್ಕೂಟಕ್ಕೆ ಸೇರುವ ಹೋರಾಟದ ಮುಂಚೂಣಿಯಲ್ಲಿದ್ದು ಪ್ರಾಣ ಬಲಿದಾನಗೊಂಡವರಿದ್ದಾರೆ. ಅದರಲ್ಲಿ ಸೋಯಬುಲ್ಲಾ ಎಂಬ ” ಅಮ್ರೋಜ್ ” ಉರ್ದು ಪತ್ರಿಕೆಯ ಸಂಪಾದಕ ಪ್ರಮುಖರು. ಖಾಸೀಮ್ ರಜ್ವಿ ಎಂಬ ನಿಜಾಮನ ರಾಜಕೀಯ ಸಲಹೆಗಆಸ ದಂಡನಾಯಕನ ಕುತಂತ್ರಕ್ಕೆ ಬಲಿಯಾದ ಅನೇಕ ಮುಸಲ್ಮಾನರಿದ್ದಾರೆ.
ಖಾಸೀಮ್ ರಜ್ವಿ ಲಾತೂರಿನ ಹೆಸರಾಂತ ವಕೀಲ. ಅಲಿಗಡ ವಿ.ವಿ.ಯ ಕಾನೂನು ಪದವೀಧರ. ಅತ್ಯಂತ ಆಕರ್ಷಕ ಹಾಗೂ ಪ್ರಚೋದನಕಾರಿ ಭಾಷಣ ಮಾಡುವಲ್ಲಿ ಎತ್ತಿದ ಕೈ. ಮಹಾ ಮತಾಂಧನಾಗಿದ್ದ ಆತನಿಗೆ ” ಆಜಾದ ಹೈದರಾಬಾದ್ ” ಎಂಬ ಮುಸ್ಲಿಂ ರಾಜ್ಯ ಕಟ್ಟುವ ಕೆಟ್ಟ ಹುಚ್ಚು. ಹೀಗಾಗಿ ಯು.ಎನ್.ಒ. ಮಟ್ಟದವರೆಗೂ ತನ್ನ ವಾಕ್ಪಟುತ್ವ ಮತ್ತು ವಕಾಲತ್ತು ಬುದ್ದಿ ಉಪಯೋಗಿಸುವ ಮೂಲಕ ತಕರಾರು ಅರ್ಜಿ ಗುಜರಾಯಿಸಿ ಸ್ವತಂತ್ರ ಮುಸ್ಲಿಂ ರಾಜ್ಯದ ಕುಹಕ ಕನಸು ಕಂಡ ಕಿಡಿಗೇಡಿ ಆಗಿದ್ದ. ಆ ಒಂದೆರೆಡು ವರ್ಷಗಳ ವಿಮೋಚನಾ ಹೋರಾಟಕ್ಕೆ ಮತೀಯ ಬಣ್ಣ ಬಳಿಯುವ ಒಳ ಹುನ್ನಾರ. ಸಂಸ್ಕೃತಿ ಪ್ರಚಾರದ ಹೆಸರಿನಲ್ಲಿ ” ಇತ್ಥೇಹಾದ್ ಉಲ್ ಮುಸ್ಲಿಮಿನ್ ” ಎಂಬ ಸಂಘಟನೆ ಕಟ್ಟಿ , ಅದಕ್ಕೆ ನಿವೃತ್ತ ಐ.ಸಿ.ಎಸ್. ಅಧಿಕಾರಿ ನವಾಜ್ ಜಂಗ್ ಎಂಬ ಕಟ್ಟಾಳುವನ್ನು ಅಧ್ಯಕ್ಷನೆಂದು ಹೆಸರಿಗೆ ನೇಮಿಸಿ ಎಲ್ಲವನ್ನು ತಾನೇ ನಿಭಾಯಿಸುತ್ತಾ ಮುಸ್ಲಿಮೇತರರನ್ನು ತನ್ನ ಒಳಹೇತು ಹುನ್ನಾರಕ್ಕೆ ಸೇರಿಸಿಕೊಂಡಿದ್ದ.
ಆ ಮೂಲಕ ದೊರೆ ಮೀರ್ ಉಸ್ಮಾನಲಿ ಖಾನ್ ಬಹದ್ದೂರ್ (ಇದು ನಿಜಾಮನ ಪೂರ್ಣ ಹೆಸರು) ಅವರನ್ನು ಅನೇಕ ಬಾರಿ ಅಡ್ಡ ಹಾದಿಗೆ ಎಳೆತಂದ ಕೀರ್ತಿ ಖಾಸೀಮ್ ರಜ್ವೀಗೆ ಸಲ್ಲಬೇಕು. ರಜಾಕಾರರ ಅರೆ ಸೇನಾಪಡೆಯಲ್ಲಿ ಅನೇಕ ಮಂದಿ ಮುಸ್ಲಿಂಮೇತರರು, ದಲಿತರು ಕೂಡ ಇದ್ದರು. ಹೀಗಾಗಿ ಹಿಂದುಗಳ ಮೇಲಿನ ರಜಾಕಾರರ ದಂಗೆ (ಸಪಾಟಿ) ಯನ್ನಾಗಲಿ, ಪೊಲೀಸ್ ಎಕ್ಷನ್ ಎರಡನ್ನೂ ಕೋಮುಗಲಭೆ ಎಂದು ಕರೆಯಲಾಗದು. ಮುಸ್ಲಿಂ ದೊರೆ ಇದ್ದ ಮಾತ್ರಕ್ಕೆ ಶೇಕಡಾ ಹದಿನೈದರಷ್ಟಿದ್ದ ಬಡ ಮುಸ್ಲಿಮರ ಬದುಕೇನು ನೆಮ್ಮದಿಯಿಂದ ಇರಲಿಲ್ಲ. ಮುಸ್ಲಿಂಮೇತರ ಎಲ್ಲರಂತಿತ್ತು. ಉರ್ದು, ಇಂಗ್ಲಿಷ್, ಪರ್ಷಿಯನ್ ಭಾಷಾ ಪ್ರಭುತ್ವವುಳ್ಳ ಕೃಶ ಕಾಯದ ನಿಜಾಮ ಶೋಕಿಲಾಲ, ನಿರುಪದ್ರವಿ ಆಗಿದ್ದ. ಅಷ್ಟಕ್ಕೂ ನಿಜಾಮರು ಉಪದ್ರವಿಗಳಾಗಿದ್ದರೇ ನಮ್ಮ ಕಡಕೋಳ ಮಡಿವಾಳಪ್ಪ ಅವರಂತಹ ಕ್ರಾಂತಿಕಾರಿ ಕವಿಗಳು ಹೃದಯ ಬಿಚ್ಚಿ ಹಾಡುವುದು ಕಷ್ಟವಿತ್ತು. ರಸ್ತಾಪುರದ ಭೀಮಕವಿ, ಮೋಟನಹಳ್ಳಿ ಹಸನ್ ಸಾಹೇಬ, ಚನ್ನೂರ ಜಲಾಲ ಸಾಹೇಬ, ಕೂಡಲೂರು ಬಸವಲಿಂಗ ಶರಣರು… ಹೀಗೆ ಬಹುಪಾಲು ನಮ್ಮ ಸೂಫಿ, ಸಂತರು, ತತ್ವ ಪದಕಾರರು ನಿಜಾಮಶಾಹಿ ಅರಸರ ಕಾಲದವರು. ಅದು ಕನ್ನಡ ಸಾಹಿತ್ಯ, ಕನ್ನಡದ ಅಸ್ಮಿತೆಯ ಪ್ರಧಾನ ಕಾಲಘಟ್ಟವೇ ಆಗಿದೆ. ಆದಾಗ್ಯೂ ಭಾಲ್ಕಿಯ ಚನ್ನಬಸವ ಪಟ್ಟದ್ದೇವರು, ಕಲಬುರ್ಗಿಯ ದೊಡ್ಡಪ್ಪ ಅಪ್ಪ ಅವರು ನಿಜಾಮನ ಆಡಳಿತಕ್ಕೆ ಹೆದರಿ ಹೊರಗೆ ಉರ್ದು ಬೋರ್ಡ್ ಹಾಕಿ ಶಾಲೆಯೊಳಗೆ ಕನ್ನಡ ಕಲಿಸಿದ್ದನ್ನು ಮರೆಯಲಾಗದು.
ಆದರೆ ಖಾಸೀಮ್ ರಜ್ವೀ ಮಾತ್ರ ಪಿತೂರಿಯ ಖಳನಾಯಕನಂತಿದ್ದ. ರಜ್ವಿಯ ಕ್ರೌರ್ಯಕ್ಕೆ ಗೋರಟಾದಂತಹ ಗ್ರಾಮ ನಿರ್ನಾಮವಾದ ಕತೆಗಳು ಕರುಣಾಜನಕ. ನಿಜಾಮನಿಗೆ ಇವನಿಂದಾಗಿಯೇ ಪಾಕಿಸ್ತಾನದ ನಂಟು ಬೆಳೆದಿತ್ತು. ಕರ ವಸೂಲಿ, ಯಥೇಚ್ಛವಾಗಿ ಸಂಪನ್ಮೂಲಗಳ ಕ್ರೋಡೀಕರಣ. ಇದೆಲ್ಲ ಸ್ಥಳೀಯ ಗೌಡ, ಕುಲಕರ್ಣಿ, ಜಾಗೀರದಾರ, ದೇಶಮುಖ, ದೇಶಪಾಂಡೆಗಳವರ ಮೂಲಕ ಆಡಳಿತ ನಡೆಸುವಾಗ ನಿಜಾಮನ ಹೆಸರಲ್ಲಿ ಜನಸಾಮಾನ್ಯರು ಅಂದು ನೋವುಂಡದ್ದು ಹೆಚ್ಚುಪಾಲು ಸ್ಥಳೀಯ ನಮ್ಮವರಿಂದಲೇ.
ಆರ್ಯ ಸಮಾಜ, ಹಿಂದು ಸಮಾಜ, ಹೈದರಾಬಾದ್ ಕಾಂಗ್ರೆಸ್ ಇನ್ನೂ ಕೆಲವು ಸಂಘ ಸಂಸ್ಥೆಗಳು ಹೋರಾಟದಲ್ಲಿ ಪಾಲ್ಗೊಂಡವು. ಪ್ರಧಾನಿ ನೆಹರು ಅವರು ನಿಜಾಮನ ಜತೆ ಮೃದು ಧೋರಣೆಯಿಂದ ನಡೆಸಿದ ಯಥಾಸ್ಥಿತಿ ಒಪ್ಪಂದದ ಮಾತುಕತೆ, ಪಟೇಲರ ರಾಜಕೀಯ ಕಾರ್ಯದರ್ಶಿ ವಿ.ಪಿ. ಮೆನನ್ ಅವರ ಮಾತುಗಳಿಗೂ ಮನ್ನಣೆ ದೊರಕಲಿಲ್ಲ. ಆಗ ಪಟೇಲರ ಪೊಲೀಸ್ ಎಕ್ಷನ್ ಅಸ್ತ್ರ ಪ್ರಯೋಗ. ಹೋಬಳಿ ಮಟ್ಟದಲ್ಲಿ ಹೋರಾಟದ ಬಿಡಾರಗಳ ಸ್ಥಾಪಿಸಿ ಒಂದೊಂದು ಗಡಿ ಶಿಬಿರದಲ್ಲಿ ಇಪ್ಪತ್ತರಿಂದ ಇನ್ನೂರ ಮಂದಿ ಸ್ವಯಂ ಸೇವಕ ಮಾದರಿ ಸೈನಿಕ ತರಬೇತಿ. ಅದಕ್ಕೊಬ್ಬ ನಿಪುಣ ಮುಖಂಡ. ಯಡ್ರಾಮಿ ಗಡಿ ಶಿಬಿರದ ಮುಖಂಡರೇ ದುಮ್ಮದ್ರಿ ಮೂಲದ ಸರದಾರ ಶರಣಗೌಡ ಇನಾಮದಾರ ಅವರು. ಹೀಗೆ ಹೈ. ಕ. ಭಾಗದ ಅನೇಕ ಕಡೆಗಳಲ್ಲಿ ಮಹಾಗಾಂವ ಚಂದ್ರಶೇಖರ ಪಾಟೀಲ, ಅಳವಂಡಿ, ಶಿವಮೂರ್ತಿ ಶಾಸ್ತ್ರೀ, ವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರೀ, ಸುರಪುರದ ರಾಜಾ ವೆಂಕಟಪ್ಪ ನಾಯಕ, ಮದಗುಣಕಿ ಭೀಮರಾಯ, ಅವರಾದಿ ದತ್ತಾತ್ರೇಯ, ಪಟ್ಟಣ ಲಾಡಸಾಹೇಬ, ಅಲ್ದಿ ಎ.ವಿ.ಪಾಟೀಲ, ರಾಮಚಂದ್ರ ವೀರಪ್ಪ.
ಹೀಗೆ ಸಹಸ್ರಾರು ಮಂದಿ ಹೈ.ಕ. ಸ್ವಾತಂತ್ರ್ಯ ಸಂಗ್ರಾಮದ ವೀರ ಕಲಿಗಳು. ಸ್ವಾಮಿ ರಮಾನಂದ ತೀರ್ಥರು, ಅಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೈ.ಕ. ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ ಬಿ.ಶಾಮಸುಂದರ ಇನ್ನೂ ಅನೇಕರ ಧೈರ್ಯ ಸಾಹಸಗಳಿಗೆ ರಾಷ್ಟ್ರೀಯ ಹೋರಾಟದ ಪುಟಗಳಲ್ಲಿ ಅಗ್ರಸ್ಥಾನ ಸಿಗಬೇಕಿತ್ತು. ಆದರೆ ಅವರವರ ಮೂಗಿನ ನೇರದ ಎಡ – ಬಲ ಬಣಗಳ ಇತಿಹಾಸಕಾರರ ಕಾರಣದಿಂದ ಅದು ದಕ್ಕಿಲ್ಲ. ಆದರೆ ಆ ಎಲ್ಲ ನಮ್ಮ ಹೈ.ಕ. ಸ್ವಾತಂತ್ರ್ಯ ಚಳವಳಿಯ ಹುತಾತ್ಮರಿಗೆ ನನ್ನ ಶಿರ ಸಾಷ್ಟಾಂಗ ಸಾವಿರ ಸಾವಿರ ಸಲಾಮುಗಳು.