ರಾಯಚೂರು ಲೋಕಸಭಾ ಚುನಾವಣಾ ಕಣ: ಗೆಲುವಿಗಾಗಿ ಅಭ್ಯರ್ಥಿಗಳ ರಣತಂತ್ರ!

0
52

ರಾಯಚೂರು: ರಾಜ್ಯದ ಅತ್ಯಂತ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಯ ರಾಯಚೂರು ಲೋಕಸಭಾ ಚುನಾವಣೆ ಈ ಬಾರಿಯ ಬಿಸಿಲು ಎಷ್ಟು ಖಡಕ್ ಆಗಿದೆಯೋ ಅಷ್ಟೇ ಪ್ರಮಾಣದಲ್ಲಿ ಚುನಾವಣೆಯ ಕಾವು ಕೂಡ ಹೆಚ್ಚಾಗುತ್ತಿದೆ. ಕೆಂಡದುಂಡೆಗಳನ್ನು ಉಗುಳುವ ಸುಡು ಬಿಸಿಲಲ್ಲೂ ಆಯಾ ಪಕ್ಷಗಳ ನಾಯಕರು ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಸಭೆ-ಸಮಾರಂಭಗಳನ್ನು ನಡೆಸುವ ಮೂಲಕ ಮತದಾರರ ಮತ ಸೆಳೆಯುವಲ್ಲಿ ನಿರತರಾಗಿದ್ದಾರೆ.

ಲಿಂಗಸೂಗೂರು, ದೇವದುರ್ಗ, ಮಾನ್ವಿ, ಮಸ್ಕಿ, ಸಿಂಧನೂರ, ಶಹಾಪುರ, ಸುರಪುರ ಹಾಗೂ ಯಾದಗಿರಿ ಸೇರಿದಂತೆ ಒಟ್ಟು 8 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿ ಹೊಂದಿರುವ ರಾಯಚೂರು ಲೋಕಸಭಾ ಕ್ಷೇತ್ರ ಎಸ್.ಟಿ. ಮೀಸಲು ಕ್ಷೇತ್ರವಾಗಿದ್ದು, ಒಟ್ಟು 19,93,755 ಮತದಾರರಿದ್ದಾರೆ.

Contact Your\'s Advertisement; 9902492681

ಅದರಲ್ಲಿ 9,85,675 ಪುರುಷ ಮತದಾರರಿದ್ದರೆ, 10,05,242 ಮಹಿಳಾ ಮತದಾರರಿದ್ದಾರೆ. ಸುರಪುರ ಮತಕ್ಷೇತ್ರ ಹೊರತುಪಡಿಸಿದರೆ ಉಳಿದ 7 ಕ್ಷೇತ್ರಗಳಲ್ಲಿ ಮಹಿಳಾ ಮತದಾರರೇ ಹೆಚ್ಚಾಗಿದ್ದಾರೆ. ಹೀಗಾಗಿ ಈ ಬಾರಿಯೂ ಮಹಿಳಾ ಮತದಾರರೇ ನಿರ್ಣಾಯಕ ಪಾತ್ರ ವಹಿಸುತ್ತಾರೆ.

ಬಿಜೆಪಿಯಿಂದ ಮಾಜಿ ಸಂಸದ ರಾಜಾ ಅಮರೇಶ್ವರ ನಾಯಕ ಸ್ಪರ್ಧಿಸಿದ್ದರೆ, ಕಾಂಗ್ರೆಸ್ ಪಕ್ಷದಿಂದ ನಿವೃತ್ತ ಐಎಎಸ್ ಅಧಿಕಾರಿ ಜಿ. ಕುಮಾರ ನಾಯಕ ಸ್ಪರ್ಧಿಸಿದ್ದಾರೆ. ಹೀಗಾಗಿ ಇವರಿಬ್ಬರ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.

ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ ನಾಯಕ ಅವರು ಮೋದಿ ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ಮತ ಯಾಚನೆ ಮಾಡುತ್ತಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಜಿ. ಕುಮಾರ ನಾಯಕ ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿರುವ ಐದು ಗ್ಯಾರಂಟಿಗಳ ಪ್ರಯೋಜನ ಕುರಿತು ಜನರಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ. ತಮ್ಮ ಗೆಲುವಿಗಾಗಿ ಪರಸ್ಪರ ಚುನಾವಣಾ ರಣತಂತ್ರ ಹೆಣಯುತ್ತಿದ್ದಾರೆ.ಚುನಾವಣಾ ರಣತಂತ್ರ ಹೆಣೆಯುತ್ತಿದ್ದಾರೆ. ಆದರೆ ಮತದಾರ ಪ್ರಭು ಮಾತ್ರ ಇನ್ನೂ ಏನೂ ತೀರ್ಮಾನ ಕೈಗೊಂಡಂತೆ ಕಾಣುತ್ತಿಲ್ಲ.

ಸಂಸದ ಬಿ.ವಿ. ನಾಯಕ ಅವರು 2019ರಲ್ಲಿ ಬಿಜೆಪಿಯಿಂದ ಗೆಲುವು ಸಾಧಿಸಿದ್ದರಿಂದ ಈ ಬಾರಿ ಮತ್ತೆ ಅವರಿಗೆ ಟಿಕೆಟ್ ಸಿಗುತ್ತದೆ ಎಂಬ ಗ್ಯಾರಂಟಿ ಸುಳ್ಳಾಗಿ ಮಾಜಿ ಸಂಸದ ರಾಜಾ ಅಮರೇಶ ನಾಯಕ ಅವರಿಗೆ ಟಿಕೆಟ್ ಸಿಕ್ಕಿದೆ. ಇದರಿಂದಾಗಿ ಬಿ.ವಿ. ನಾಯಕ ಅವರಿಗೆ ಸಹಜವಾಗಿ ಅಸಮಾಧಾನವಾಗಿದೆ. ಚುನಾವಣೆಯ ಆರಂಭದಲ್ಲಿ ಬಿಜೆಪಿ ಅಲೆ ಜಾಸ್ತಿ ಇರುವುದು ಕಂಡುಬಂದಿತ್ತು. ಆದರೆ ಇದೀಗ ಕಾಂಗ್ರೆಸ್ ಹವಾ ಜಾಸ್ತಿಯಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇದು ಕಾಂಗ್ರೆಸ್ ಪಕ್ಷದ ಹುರಿಯಾಳು ಜಿ. ಕುಮಾರ ನಾಯಕ ಅವರಿಗೆ ವರದಾನವಾಗಲಿದೆ ಎಂದು ಹೇಳಲಾಗುತ್ತಿದೆ. ಆದರೂ ಇದಮಿತ್ಥಂ ಎಂದು ಈಗಲೇ ಹೇಳಲಾಗುವುದಿಲ್ಲ.

ಮಹಿಳಾ ಸ್ಪರ್ಧೆಗೆ ಇಲ್ಲಿ ಅವಕಾಶವೇ ಇಲ್ಲ!.
1958 ರಿಂದ 2024ರವರೆಗೆ ನಡೆದ 18ನೇ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮಹಿಳೆಯರ ಸ್ಪರ್ಧೆಗೆ ಈ ಕ್ಷೇತ್ರದಲ್ಲಿ ಅವಕಾಶವೇ ಸಿಕ್ಕಿಲ್ಲ. 1998ರಲ್ಲಿ ಸಿಪಿಐಎಂಎಲ್ ಪಕ್ಷದಿಂದ ಲಕ್ಷ್ಮೀದೇವಿ ಎಂಬುವವರು ಒಮ್ಮೆ ಮಾತ್ರ ಸ್ಪರ್ಧಿಸಿರುವುದು ಹೊರತುಪಡಿಸಿದರೆ ಈವರೆಗೆ ಯಾವೊಬ್ಬ ಮಹಿಳೆಯೂ ಚುನಾವಣೆಗೆ ಸ್ಪರ್ಧಿಸಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ಮಹಿಳಾ ಮತದಾರರಿಗೆ ಮಣೆ ಹಾಕುವ ರಾಜಕಾರಣಿಗಳು ಈವರೆಗೆ ಒಬ್ಬ ಮಹಿಳಾ ನಾಯಕಿಯನ್ನು ಕೂಡ ಬೆಳೆಸಿಲ್ಲ. ಹೀಗಾಗಿ ಮಹಿಳಾ ಮತದಾರರು ಇಲ್ಲಿ ಕೇವಲ ಕಾರ್ಯಕರ್ತರಾಗಿ ದುಡಿಯುವ ಪರಿಸ್ಥಿತಿ ಬಂದಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here