ಮತದಾನದ ಪವಿತ್ರ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಿ

0
40

ಅದು ಒಂದು ಹಬ್ಬ, ಒಂದು ಪವಿತ್ರ ಕಾರ್ಯ, ಒಂದು ಅತ್ಯಮೂಲ್ಯ ಕಾಯಕ, ಒಂದು ಉಲ್ಲಾಸ, ಒಂದು ಸಂತೋಷ, ಒಂದು ಶಕ್ತಿ, ಒಂದು ಹಕ್ಕು ಹೀಗೆ ದೇಶದ ಚಿತ್ರಣ ಬದಲಿಸಲು ಹೊರಟ ಒಬ್ಬ ಯೋಧನ ಭಾಸ… ಅದುವೇ ಮತದಾನ. ಭಾವೈಕ್ಯತೆಯ ಸಂಗಮವಾದ ಭಾರತ ದೇಶದ ಬಹುದೊಡ್ಡ ಹಬ್ಬ. ನಮ್ಮ ಒಂದು ವೋಟು ದೇಶದ ಚಿತ್ರಣವನ್ನೇ ಬದಲಿಸಬಲ್ಲದು. ಅಷ್ಟೊಂದು ಅಘಾದ ಶಕ್ತಿ ಅದಕ್ಕಿದೆ. ಆದ್ದರಿಂದ ಎಲ್ಲರೂ ಬನ್ನಿ ಈ ಆನಂದದ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಿ. ಯಾವುದೇ ಮುಖ್ಯ ಕೆಲಸವಿದ್ದರೂ ಬಿಡುವು ಮಾಡಿಕೊಂಡು ಮತಗಟ್ಟೆಗೆ ಬಂದು ಹೆಮ್ಮೆಯಿಂದ ಹಕ್ಕನ್ನು ಚಲಾಯಿಸಿ ಮತದಾನ ಮಾಡಿ.

ದೇಶಕ್ಕಾಗಿ ಮತ ಚಲಾಯಿಸುವ ಶಕ್ತಿಯು ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಮುಖ ಭಾಗವಾಗಿದೆ. ಪ್ರತಿ ಚುನಾವಣೆಯಲ್ಲೂ ಮತದಾರರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತಿರುವುದು ಸಂತಸದ ವಿಷಯ. ಏಕೆಂದರೆ ಪ್ರತಿಯೊಂದು ಮತವೂ ನಮ್ಮ ದೇಶದ ಉತ್ತಮ ಭವಿಷ್ಯಕ್ಕಾಗಿ ಎಣಿಕೆಯಾಗುತ್ತದೆ. ದೇಶದ ಜನತೆಯ ಜನಾದೇಶದ ಶಕ್ತಿಯೇ ಅಂಥದ್ದು. ದೇಶವನ್ನು ಗೌರವಿಸುವುದರಲ್ಲಿ ಮತದಾನ ಮಾಡುವುದೂ ಒಂದಾಗಿದೆ.
ಭಾರತದ ಪ್ರಜಾಪ್ರಭುತ್ವದ ಆಧಾರವು ಚುನಾವಣಾ ಫಲಿತಾಂಶಗಳನ್ನು ಆಧರಿಸಿದೆ. ನಮ್ಮ ಶಾಸಕಾಂಗಗಳು ಮತ್ತು ಸಂಸತ್ತುಗಳು ಜನರಿಂದ, ಜನರಿಗಾಗಿ, ಜನರಿಗೋಸ್ಕರ ಕೆಲಸಮಾಡುತ್ತವೆ. ಆದ್ದರಿಂದ ಸಂವಿಧಾನಬದ್ಧವಾಗಿ ಮತದಾನ ಮಾಡುವ ಹಕ್ಕನ್ನು ಪಡೆದಿರುವುದು ನಮ್ಮ ಅದೃಷ್ಟ. ನಾವು ಅದನ್ನು ಲಘುವಾಗಿ ಪರಿಗಣಿಸದೇ, “ನಮ್ಮ ಮತದಾನ ನಮ್ಮ ಹಕ್ಕು” ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಮೂಡಬೇಕಾಗಿದೆ.

ನಾವು ನೀಡುವ ಒಂದು ಮತವು ಗಮನಾರ್ಹ ಬದಲಾವಣೆಯನ್ನು ಮಾಡುವ ಸಾಮಥ್ರ್ಯವನ್ನು ಹೊಂದಿದೆ. ಉತ್ತಮವಾಗಿ ಆಡಳಿತ ನೀಡುವ ಸರ್ಕಾರಕ್ಕೆ ಮತ ಹಾಕಬಹುದು. ಮತದಾನದ ಪ್ರಮಾಣವು ಶೇಕಡಾವಾರು ಹೆಚ್ಚಾದಷ್ಟು ಪ್ರಜಾಪ್ರಭುತ್ವ ಗಟ್ಟಿಗೊಳ್ಳುತ್ತಾ ಹೋಗುತ್ತದೆ.

Contact Your\'s Advertisement; 9902492681

ಮತದಾನ ಮಾಡಲು ಯಾವುದೇ ರೀತಿಯ ಅಸಡ್ಡೆ ತೋರಿಸದಿರಿ. ಜವಾಬ್ದಾರಿ ಪ್ರತಿಯೊಬ್ಬ ವ್ಯಕ್ತಿಯ ಮೇಲಿದೆ.
ನಮ್ಮ ಪ್ರತಿ ಮತವೂ ಗಣನೆಗೆ ಬರುತ್ತದೆ ಹಾಗೂ ಪ್ರತಿ ಮತವೂ ಮಹತ್ವದ್ದಾಗಿದೆ. “ನನ್ನ ಮತವು ವ್ಯತ್ಯಾಸವನ್ನುಂಟುಮಾಡುವುದಿಲ್ಲ” ಎಂದು ಯೋಚಿಸುವುದನ್ನು ಬಿಟ್ಟು, ರಾಷ್ಟ್ರೀಯ ಮನೋಭಾವ ಮೈಗೂಡಿಸಿಕೊಂಡಾಗ ಮತಪೆಟ್ಟಿಗೆಯಲ್ಲಿ ಹೆಚ್ಚೆಚ್ಚು ಮತಗಳು ಕಾಣಸಿಗಬಹುದು.

ಚುನಾವಣಾ ಆಯೋಗವು ಪರಿಚಯಿಸಿದ “ನೋಟಾ”À ಮತವು ಯಾವುದೇ ಅಭ್ಯರ್ಥಿಗಳಿಂದ ಅತೃಪ್ತರಾಗಿದ್ದರೂ ಸಹ ಮತ ಚಲಾಯಿಸಲು ಸಾಧ್ಯವಾಗಿಸಿದೆ. ನೋಟಾ ಎಂದರೆ ಮೇಲಿನ ಯಾವುದೂ ಅಲ್ಲ, ಮತ್ತು ಯಾವುದೇ ಅಭ್ಯರ್ಥಿಗಳೊಂದಿಗೆ ತೃಪ್ತರಾಗದ ವ್ಯಕ್ತಿಗಳಿಗೆ ಇದು ನಿರ್ಣಾಯಕ ಮತವಾಗಿದೆ. ನೋಟಾ ಮತದಾನ ಎಂದರೆ ಯಾವುದೇ ಅಭ್ಯರ್ಥಿಗಳು ಸೂಕ್ತರಲ್ಲ ಎಂದು. ನೋಟಾ ಮತಗಳನ್ನು ಎಣಿಸಲಾಗುತ್ತದೆ, ಆದರೆ ಬಹುಪಾಲು ಮತಗಳು ನೋಟಾ ಆಗಿದ್ದರೆ, ಮುಂದಿನ ಬಹುಮತದ ಪಕ್ಷವನ್ನು ಆಯ್ಕೆ ಮಾಡಲಾಗುತ್ತದೆ ಎಂಬುದು ನಮಗೆಲ್ಲ ತಿಳಿದಿರಲಿ.

ನಮ್ಮ ಪೂರ್ವಜರು ರಾಷ್ಟ್ರವನ್ನು ಸ್ವತಂತ್ರವಾಗಿಸಲು ತಮ್ಮ ಜೀವ ತೆತ್ತು ಹೋರಾಡಿದರು ಇದೇ ಕಾರಣದಿಂದಾಗಿ ನಾವು ಮತದಾನದ ಹಕ್ಕನ್ನು ಹೊಂದಿದ್ದೇವೆ. ಉತ್ತಮ ಭಾರತಕ್ಕಾಗಿ ಮತ ಚಲಾಯಿಸುವ ಮೂಲಕ ನಾವು ನಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವಿಸಿದಂತಾಗುತ್ತದೆ.

ಲೋಕಸಭೆಯ ಸದಸ್ಯರನ್ನು ಸಾರ್ವತ್ರಿಕ ಚುನಾವಣೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. ಈ ಚುನಾವಣೆಗಳು ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯುತ್ತವೆ. ಭಾರತದ ರಾಷ್ಟ್ರಪತಿಗಳಿಂದ ನಾಮನಿರ್ದೇಶನಗೊಳ್ಳುವ ಲೋಕಸಭೆಯ ಇಬ್ಬರು ಸದಸ್ಯರಿದ್ದಾರೆ. ಪ್ರಸ್ತುತ ಲೋಕಸಭೆಯು 545 ಸದಸ್ಯರನ್ನು ಹೊಂದಿದೆ. ಇಬ್ಬರು ಸದಸ್ಯರು ಆಂಗ್ಲೋ-ಇಂಡಿಯನ್ ಸಮುದಾಯವನ್ನು ಪ್ರತಿನಿಧಿಸಿದರೆ, ಇತರ 543 ಮಂದಿ ಐದು ವರ್ಷಗಳ ಅವಧಿಗೆ ಆಯ್ಕೆಯಾಗುತ್ತಾರೆ. ಹಾಗೆಯೇ ರಾಜ್ಯಸಭೆಯು 245 ಸದಸ್ಯರನ್ನು ಹೊಂದಿದ್ದು ಅದರಲ್ಲಿ 233 ಸದಸ್ಯರನ್ನು 6 ವರ್ಷಗಳ ಅವಧಿಗೆ ಆಯ್ಕೆ ಮಾಡಲಾಗುತ್ತದೆ.

ಅನೇಕ ಮತದಾರರು ಚುನಾವಣಾ ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸದಿರುವುದು, ಮತದಾನದ ಶಕ್ತಿಯ ಅರಿವು ಇಲ್ಲದಿರುವುದು ಮತ್ತು ಅದರೊಂದಿಗಿರುವ ಜವಾಬ್ದಾರಿಯನ್ನು ಅರ್ಥಮಾಡಿಕೊಳ್ಳದಿರುವುದು ಇತ್ತೀಚಿನ ದಿನಗಳಲ್ಲಿ ನಾವು ಕಾಣುತ್ತೇವೆ. ನಾವು ಮತದಾನದ ದಿನವನ್ನು ರಜಾದಿನವೆಂದು ಪರಿಗಣಿಸದೇ ಮತಗಟ್ಟೆಗೆ ತೆರಳಿ ಮತದಾನ ಮಾಡಬೇಕು. ಆಗಷ್ಟೇ ಸಧೃಡ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಮತದಾನ ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಬಹುಮುಖ್ಯವಾಗಿದ್ದು, ತಮ್ಮ ನಾಯಕರನ್ನು ಆಯ್ಕೆ ಮಾಡುವುದು ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿಯಾಗಿದೆ.

ಆದ್ದರಿಂದ, ಮತದಾನ ಪ್ರಕ್ರಿಯೆಯ ಮಹತ್ವವನ್ನು ಅರಿತುಕೊಳ್ಳಲು ಹಾಗೂ ಮತದಾರರ ಚಿಂತನೆಯ ಪ್ರಕ್ರಿಯೆಯಲ್ಲಿ ಮೂಲಭೂತ ಬದಲಾವಣೆಯಾಗಬೇಕು ಮತ್ತು ರಾಷ್ಟ್ರದ ಭವಿಷ್ಯವನ್ನು ನಿರ್ಧರಿಸುವಲ್ಲಿ ಪ್ರತಿ ಮತದ ಪ್ರಾಮುಖ್ಯತೆಯನ್ನು ನಾವು ಇಂದು ಅರಿತುಕೊಳ್ಳಬೇಕಾಗಿದೆ.
ಮತದಾನವೆಂದರೆ ಯಾವುದೇ ಜಾತಿ, ಮತ, ಪಂಥ, ಹೆಣ್ಣು-ಗಂಡು ಎನ್ನದೇ ಎಲ್ಲರಿಗೂ ಸಮಾನವಾಗಿ ಸಿಕ್ಕ ಮೂಲಭೂತ ಹಕ್ಕು. ಇದನ್ನು ನಾವು ಚಲಾಯಿಸದೆ ವ್ಯರ್ಥ ಮಾಡುವುದು ಬೇಡ. ಕೆಲ ಪಾಶ್ಚಾತ್ಯ ದೇಶಗಳಲ್ಲಿ ಮತದಾನ ಮಾಡುವುದು ಕಡ್ಡಾಯವಾಗಿದ್ದು, ಚಲಾಯಿಸದಿದ್ದರೆ ದಂಡ ಪಾವತಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿ ನಾವು ಭಾರತೀಯರು ತಂದುಕೊಳ್ಳದೇ ಎಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳೋಣ.
ಜವಾಬ್ದಾರಿಯುತವಾಗಿ ಮತ ಚಲಾಯಿಸುವ ಜವಾಬ್ದಾರಿಯು ಪ್ರಜಾಪ್ರಭುತ್ವದ ಮಹತ್ವಪೂರ್ಣ ಬುನಾದಿಯಾಗಿದೆ.

ಈ ಕರ್ತವ್ಯವನ್ನು ಸ್ವಯಂಪ್ರೇರಿತವಾಗಿ ನಿರ್ವಹಿಸುವುದು ದೇಶದ ಎಲ್ಲಾ ನಾಗರಿಕರ ಕರ್ತವ್ಯವಾಗಿದೆ. ಪ್ರತಿಯೊಂದು ಮತವು ಮಹತ್ವದ್ದಾಗಿರುತ್ತದೆ. ಹಾಗಾಗಿ ಪ್ರತಿಯೊಬ್ಬ ವ್ಯಕ್ತಿಯೂ ಮತ ಚಲಾಯಿಸಲು ಮುಂದಾಗಬೇಕೆಂದು ನನ್ನ ಕಳಕಳಿಯ ಮನವಿ.

ನಿಮ್ಮವರ ಜತೆ ನೀವೂ ಬನ್ನಿ… ಮತದಾನ ಮಾಡಿ…ಸಧೃಡ ರಾಷ್ಟ್ರ ನಿರ್ಮಾಣಕ್ಕೆ ಕೈ ಜೋಡಿಸಿ..

ಅಶೋಕ ಪಾಟೀಲ,
ಹವ್ಯಾಸಿ ವರದಿಗಾರರು, ಕಲಬುರಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here