ಎಸ್‍ಯುಸಿಐ ಪಕ್ಷದ ಸಂಸ್ಥಾಪನಾ ದಿನಾಚರಣೆ: ಆತ್ಮವಿಮರ್ಶೆ ಕೈಬಿಟ್ಟವರು ಕಮ್ಯುನಿಸ್ಟರಲ್ಲ

0
40

ವಾಡಿ: ವ್ಯವಸ್ಥೆಯ ಮೂಲಭೂತ ಬದಲಾವಣೆ ಬಯಸುವ ಮಾಕ್ರ್ಸ್‍ವಾದಿ ಚಿಂತಕರನ್ನು ಕಮ್ಯುನಿಸ್ಟರು ಎಂದು ಕರೆಯಲಾಗುತ್ತದೆ. ಪಕ್ಷದ ಧ್ಯೇಯ ಗುರಿಯೊಂದಿಗೆ ಕ್ರಾಂತಿಕಾರಿ ಚಳುವಳಿ ಮುನ್ನಡೆಸುವವರು ಟೀಕೆ, ಸೈದ್ಧಾಂತಿಕ ವಿಮರ್ಶೆ ಮತ್ತು ಆತ್ಮವಿಮರ್ಶೆ ತತ್ವಗಳನ್ನು ಕೈಬಿಟ್ಟರೆ ಅವರು ಕಮ್ಯುನಿಸ್ಟರಾಗಿ ಉಳಿಯಲಾರರು ಎಂದು ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‍ಯುಸಿಐ) ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ನಾಯಕ ಕಾಮ್ರೇಡ್ ವೀರಭದ್ರಪ್ಪ ಆರ್.ಕೆ ಹೇಳಿದರು.

ಬುಧವಾರ ಪಟ್ಟಣದಲ್ಲಿ ಏರ್ಪಡಿಸಲಾಗಿದ್ದ ಎಸ್‍ಯುಸಿಐ (ಕಮ್ಯುನಿಸ್ಟ್) ಪಕ್ಷದ 76ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು. ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿ ಎಸ್‍ಯುಸಿಐ ಪಕ್ಷದ ಮೂಲ ಧ್ಯೇಯವಾಗಿದೆ. ಬಡತನ, ಹಸಿವು, ನಿರುದ್ಯೋಗ, ಶೋಷಣೆ, ಭ್ರಷ್ಟಾಚಾರ, ಬೆಲೆ ಏರಿಕೆ ಎಂಬುದು ಸ್ವಾತಂತ್ರ್ಯದ ಬಳಿಕವೂ ಭಾರತೀಯರನ್ನು ಕಾಡುತ್ತಲೇ ಬರುತ್ತಿರುವ ಬಹುದೊಡ್ಡ ಸಂಕಷ್ಟಗಳಾಗಿವೆ. ದೇಶವನ್ನಾಳಿದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಈ ಗಂಭೀರ ಸಮಸ್ಯೆಗಳನ್ನು ಬಗೆಹರಿಸುವ ಬದಲು ಪೋಷಿಸಿಕೊಂಡು ಬಂದಿವೆ. ಬಡತನ ಮುಕ್ತ ದೇಶದ ಕನಸು ಕಟ್ಟುತ್ತಲೇ ಎಲ್ಲಾ ಯೋಜನೆಗಳು ದೇಶದ ಶೋಷಕ ವರ್ಗವಾಗಿರುವ ಟಾಟಾ, ಬಿರ್ಲಾ, ಅಂಬಾನಿ, ಅದಾನಿಯಂತಹ ಬಂಡವಾಳಿಗರ ಪರವಾಗಿ ಜಾರಿಗೆ ತಂದಿವೆ. ಈ ಎರಡೂ ಪಕ್ಷಗಳು ಎಂದೇ ಮುಖದ ಎರಡು ನಾಣ್ಯಗಳಿದ್ದಂತೆ. ಇಂಥಹ ಭ್ರಷ್ಟ ಶೋಷಕ ರಾಜಕೀಯ ಪಕ್ಷಗಳಿಂದ ದೇಶಕ್ಕೆ ಯಾವುದೇ ಭವಿಷ್ಯವಿಲ್ಲ ಎಂದು ದೂರಿದರು.

Contact Your\'s Advertisement; 9902492681

ದೇಶದಲ್ಲಿ ಸಮಾಜವಾದಿ ಕ್ರಾಂತಿ ಸಂಘಟಿಸುವ ಧ್ಯೇಯದೊಂದಿಗೆ ಹುಟ್ಟಿಕೊಂಡ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ) ಹಾಗೂ ಸಿಪಿಐ(ಎಂ) ನಾಮಾಂಕಿತ ಕಮ್ಯುನಿಸ್ಟ್ ಪಕ್ಷಗಳು, ಪಕ್ಷದ ತತ್ವ ಸಿದ್ಧಾಂತಗಳಿಗೆ ತಿಲಾಂಜಲಿಯಿಟ್ಟು ಮಾಕ್ರ್ಸ್‍ವಾದಿ ಚಿಂತನೆಗಳಿಗೆ ದ್ರೋಹ ಬಗೆದಿವೆ. ಪಕ್ಷದಲ್ಲಿ ಜೀವಂತವಾಗಿರಬೇಕಿದ್ದ ವಿಮರ್ಶೆ ಮತ್ತು ಆತ್ಮವಿಮರ್ಶೆ ಪ್ರಕ್ರಿಯೆ ಕೈಬಿಟ್ಟಿವೆ. ಲೋಕಸಭೆ ಚುನಾವಣೆಯಲ್ಲಿ ಒಂದು ಬಂಡವಾಳಶಾಹಿ ಪಕ್ಷವನ್ನು ಸೋಲಿಸಲು ಇನ್ನೊಂದು ಬಂಡವಾಳಶಾಹಿ ಪಕ್ಷದೊಂದಿಗೆ ಕೈಜೋಡಿಸಿವೆ. ಇದು ಆ ಪಕ್ಷಗಳ ಸೈದ್ಧಾಂತಿಕ ದಿವಾಳಿತನವನ್ನು ಎತ್ತಿ ತೋರಿಸುತ್ತದೆ. ನಮ್ಮ ಶತ್ರು ಯಾರೆಂಬುದನ್ನು ಗುರುತಿಸುವಲ್ಲಿ ಎಡವಿರುವ ಈ ಪಕ್ಷಗಳು, ಸಮಾಜವಾದಿ ಕ್ರಾಂತಿಯ ಗುರಿಯಿಂದ ವಿಮುಖವಾಗಿವೆ ಎಂದು ಸಿಪಿಐ ಮತ್ತು ಸಿಪಿಐಎಂ ಪಕ್ಷಗಳ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಪಕ್ಷದ ಕಾರ್ಯಕರ್ತರಾದ ಗೌತಮ ಪರ್ತೂರಕರ, ಮಲ್ಲಿನಾಥ ಹುಂಡೇಕಲ್, ಶರಣು ಹೇರೂರ, ವೆಂಕಟೇಶ ದೇವದುರ್ಗ, ರಾಜು ಒಡೆಯರಾಜ್, ರಮೇಶ ಮಾಶಾಳ, ಶರಣುಕುಮಾರ ದೋಶೆಟ್ಟಿ, ಗೋವಿಂದ ಯಳವಾರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

“1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಿದ್ದು ಬಡವರಿಗಲ್ಲ. ಈ ದೇಶದ ಶ್ರೀಮಂತ ಶೋಷಕ ವರ್ಗಕ್ಕೆ ಎಂದರಿತ ಮಾಕ್ರ್ಸ್‍ವಾದಿ ನಾಯಕ ಕಾಮ್ರೇಡ್ ಶಿವದಾಸ್ ಘೋಷ್ ಅವರು 1948ರಲ್ಲೇ ಎಸ್‍ಯುಸಿಐ ಕಮ್ಯುನಿಸ್ಟ್ ಪಕ್ಷವನ್ನು ಪಶ್ಚಿಮ ಬಂಗಾಳದಲ್ಲಿ ಸ್ಥಾಪಿಸಿದರು.

ಅದಾಗಲೇ ದೇಶದಲ್ಲಿ ಕಮ್ಯಿನಿಸ್ಟ್ ಪಕ್ಷವಾಗಿ ಗುರುತಿಸಿಕೊಂಡಿದ್ದ ಸಿಪಿಐ, ಕಮ್ಯುನಿಸ್ಟ್ ಚಿಂತನೆಗಳನ್ನು ಮೈಗೂಡಿಸಿಕೊಂಡಿರಲಿಲ್ಲ. ಆ ಪಕ್ಷದ ನಾಯಕರಲ್ಲೂ ಕಮ್ಯುನಿಸ್ಟ್ ಜೀವನಶೈಲಿ ಜೀವಂತವಾಗಿರಲಿಲ್ಲ. ಈ ನಾಮಾಂಕಿತ ಕಮ್ಯುನಿಸ್ಟ್ ಪಕ್ಷದಿಂದ ದೇಶದಲ್ಲಿ ಸಮಾಜವಾದಿ ಕ್ರಾಂತಿ ಸಂಘಟಿಸಲು ಸಾಧ್ಯವಿಲ್ಲ ಎಂದು ಶಿವದಾಸ್ ಘೋಷ್ ಬಲವಾಗಿ ನಂಬಿದ್ದರು. ಕೇವಲ ಬೆರಳೆಣಿಕೆಯಷ್ಟು ಸಂಗಾತಿಗಳ ಸಹಕಾರದಡಿ ಎಸ್‍ಯುಸಿಐ ಪಕ್ಷವನ್ನು ಸ್ಥಾಪಿಸಿ ಸಂಧಾನತೀತ ಹೋರಾಟವನ್ನು ಮುನ್ನಡೆಸಿದರು.

ದೇಶದ ಪ್ರತಿಯೊಂದು ರಾಜ್ಯದಲ್ಲೂ ಎಸ್‍ಯುಸಿಐ ಪಕ್ಷ ಕಾರ್ಯನಿರ್ವಹಿಸುತ್ತಿದೆ. ಪಕ್ಷದ ಕಾರ್ಯಕರ್ತರು ಹಾಗೂ ನಾಯಕರು ಬೀದಿಗಳಲ್ಲಿ ನಿಂತು ಜನರಿಂದ ಹಣ ಸಂಗ್ರಹಿಸುವ ಮೂಲಕ ಪಕ್ಷವನ್ನು ಕಟ್ಟುತ್ತಿದ್ದಾರೆ. ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿಯನ್ನು ನೆರವೇರಿಸಲು ಕೆಂಪು ಬಾವುಟದಡಿ ಚಳುವಳಿಗಳನ್ನು ಸಂಘಟಿಸುತ್ತಿದ್ದಾರೆ. ಈಗ ಭಾರತದ ಏಕೈಕ ಅಕೃತಿಮ ಕಮ್ಯುನಿಸ್ಟ್ ಪಕ್ಷ ಎಂದರೆ ಅದು ಎಸ್‍ಯುಸಿಐ (ಸಿ) ಮಾತ್ರ” -ವೀರಭದ್ರಪ್ಪ ಆರ್.ಕೆ. ಎಸ್‍ಯುಸಿಐ (ಕಮ್ಯುನಿಸ್ಟ್) ನಾಯಕ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here