ಗುರುಮಠಕಲ್: ಲೋಕಸಭೆಯ ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾಧವ್ ಗುರುಮಠಕಲ್ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕೈಗೊಂಡು ಮತದಾರರ ಓಲೈಕೆಗಾಗಿ ಮುಂದಾಗಿದ್ದಾರೆ.
ಗುರುಮಠಕಲ್ ಕ್ಷೇತ್ರದಲ್ಲಿ ಶನಿವಾರ ರಾತ್ರಿಯಿಂದ ಭಾನುವಾರದವರೆಗೆ ಸತತವಾಗಿ ಪ್ರಮುಖರನ್ನು ಹಾಗೂ ವಿವಿಧ ತಾಂಡಾಗಳಿಗೆ ಭೇಟಿ ಮಾಡಿ ಮತಯಾಚಿಸುತ್ತಿದ್ದಾರೆ. ಬೋರಬಂಡ, ಬಳಿ ಚಕ್ರ, ಸೈದಾಪುರ ಮುಂತಾದೆಡೆಗಳಿಗೆ ತೆರಳಿ ಹಿರಿಯರ ಆಶೀರ್ವಾದ ಪಡೆಯುವುದಲ್ಲದೆ ತಾಂಡಾಗಳಿಗೆ ತೆರಳಿ ಸಮುದಾಯದವರ ಆಶೀರ್ವಾದವನ್ನು ಪಡೆದರು.
ತಾಂಡಾಗಳ ಹಿರಿಯರು ಸಮುದಾಯದ ಮಗನೊಬ್ಬ ಲೋಕಸಭಾ ಚುನಾವಣೆಗೆ ನಿಂತಿರುವ ಸಂತಸದಲ್ಲಿ ಹಣೆಗೆ ಕುಂಕುಮ ಹಚ್ಚಿ, ಶಾಲು ಸನ್ಮಾನ ಮಾಡಿ ಸಾಂಪ್ರದಾಯಿಕ ಸ್ವಾಗತ ನೀಡಿ ಪುರಸ್ಕರಿಸುತ್ತಿರುವುದು ಸಾಮಾನ್ಯವಾಗಿತ್ತು. ಲಂಬಾಣಿ ಸಮುದಾಯದ ಹಿರಿಯರು ಜಾಧವ್ ಅವರ ತಲೆಯ ಮೇಲೆ ಎರಡು ಕೈಗಳನ್ನು ಇಟ್ಟು ಆಶೀರ್ವದಿಸುತ್ತ “ಗೆದ್ದು ಬಾ ,ರಾಮ್ ರಾಮೀ” ಎಂದು ಹರಸಿ ಬೀಳ್ಕೊಡುತ್ತಿದ್ದರು. ಮಹಿಳೆಯರು ಮಕ್ಕಳು ತುಂಬು ಉತ್ಸಾಹದಿಂದ ತಾಂಡಾಗಳ ಮನೆಮನೆಗೂ ಜಾಧವ್ ಹಿಂದೆ ನಡೆದುಕೊಂಡು ಹೋಗಿ ಎಲ್ಲರನ್ನೂ ಪರಿಚಯಿಸುತ್ತಾ ಕೈ ಕುಲುಕುತ್ತಾ ಮನೆಗೆ ಬಂದ ಅತಿಥಿಗೆ ಪಾನಿಯ ನೀಡಿ ಸತ್ಕರಿಸುವುದು ಕಂಡುಬಂತು. ಹಿರಿಯರ ಕಾಲಮಟ್ಟಿ ನಮಸ್ಕಾರ ಮಾಡುತ್ತಾ ಎರಡು ಕೈಗಳನ್ನು ಮುಗಿದುಕೊಂಡು ಜಾಧವ್ ಜನರ ಪ್ರೀತಿಗೆ ಕೃತಜ್ಞತೆ ವ್ಯಕ್ತಪಡಿಸಿದರು.
ಈ ಬಾರಿ ಮುಂಜಾನೆ ಎದ್ದು ಮನೆಯ ದೇವರಿಗೆ ಪೂಜೆ ಸಲ್ಲಿಸಿ ಮೋದಿಯವರನ್ನು ಗೆಲ್ಲಿಸಲು ಪ್ರಾರ್ಥನೆ ಮಾಡಿ ಮತಗಟ್ಟೆಗೆ ತೆರಳಿ ಮತದಾನ ಯಂತ್ರದಲ್ಲಿ ಮೊದಲ ಸಂಖ್ಯೆಯ ಡಾ. ಉಮೇಶ್ ಜಾಧವ್ ಹೆಸರಿನ ಮುಂದಿರುವ ಕಮಲದ ಗುರುತಿನ ಬಟನ್ ಒತ್ತುವುದರ ಮೂಲಕ ಬಿಜೆಪಿಗೆ ಮತ ನೀಡಬೇಕು ಎಂದು ವಿವರಿಸುತ್ತಾ ಜಾಧವ್ ಮುನ್ನಡೆದರು. ಅತಿ ಉತ್ಸಾಹದಲ್ಲಿದ್ದ ಯುವಕರು ತರುಣರು ಹಾಗೂ ಗ್ರಾಮಸ್ಥರು “ಫಿರ್ ಏಕ್ ಬಾರ್ ಮೋದಿ ಸರ್ಕಾರ್” ಎಂಬ ಘೋಷಣೆಯಂತೆ “ಫಿರ್ ಏಕ್ ಬಾರ್ ಜಾಧವ್ ಜಿ ಕೋ ಜೀತ್ ಕರೋ”ಈ ದ ಘೋಷಣೆ ಮೊಳಗಿಸಿ ಜಯಕಾರ ಹಾಕಿದರು.
ಬಳಿಚಕ್ರ ಕ್ರಾಸಿನಲ್ಲಿ ಅಭಿಮಾನಿಗಳು ಜಾಧವ್ ಅವರನ್ನು ಕಾರಿನಿಂದ ಇಳಿಸಿ ಸುಡು ಮದ್ದುಗಳ ಭವ್ಯ ಸ್ವಾಗತವನ್ನು ಕೋರಿದರು. ನಂತರ ಹಲಿಗೆ ಮೇಳದೊಂದಿಗೆ ಮಹಿಳೆಯರೇ ಅತ್ಯಧಿಕ ಸಂಖ್ಯೆಯಲ್ಲಿದ್ದ ನೂರಾರು ಸಂಖ್ಯೆಯ ಅಭಿಮಾನಿಗಳು 45 ಡಿಗ್ರಿ ಉರಿ ಬಿಸಿಲಿನಲ್ಲಿ ಕೂಡ ಮೆರವಣಿಗೆಯಲ್ಲಿ ಕರೆದುಕೊಂಡು ಹೋಗಿ ಗ್ರಾಮ ದೇವತೆ ಮಶ್ಯಮ್ಮಾ ದೇವಿಯ ಗುಡಿಯಲ್ಲಿ ವಿಶೇಷ ಪೂಜೆ ನೆರವೇರಿಸಿ ಪ್ರಸಾದ ನೀಡಿ ಕುಂಕುಮ ಹಚ್ಚಿ ಬಹಿರಂಗ ಸಭೆಗೆ ಬೀಳ್ಕೊಟ್ಟರು.