ಮತದಾರರಿಗೆ ಸ್ವಯಂ‌ ಸೇವಕರು ನೆರವಾಗಬೇಕು: ಮತಗಟ್ಟೆ ಮಟ್ಟದ ಸ್ವಯಂ ಸೇವಕರಿಗೆ ತರಬೇತಿ

0
32

ಕಲಬುರಗಿ: ಮೇ 7 ರಂದು ನಡೆಯುವ ಲೋಕಸಭೆ ಚುನಾವಣೆ ಮತದಾನ ದಿನದಂದು ಸ್ವಯಂ ಸೇವಕರಾಗಿರುವ ಶಾಲಾ-ಕಾಲೇಜು ಮಟ್ಟದ ಎಲೆಕ್ಟೋರಲ್ ಲಿಟರಸಿ ಕ್ಲಬ್ ಸದಸ್ಯರು ಬೆಳಿಗ್ಗೆ 6.30 ಗಂಟೆಗೆ ಹಾಜರಾಗಿ ಮತದಾನಕ್ಕೆ ಬರುವ ವಿಶೇಷ ಚೇತನರು, ಹಿರಿಯ ನಾಗರಿಕರಿಗೆ ನೆರವಾಗಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್ ಹೇಳಿದರು.

ಶುಕ್ರವಾರ ಇಲ್ಲಿನ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಭಾರತ‌ ಚುನಾವಣಾ ಆಯೋಗ, ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯಿಂದ ಆಯೋಜಿಸಿದ ಮತಗಟ್ಟೆ ಮಟ್ಟದ ಸ್ವಯಂ ಸೇವಕರಿಗೆ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

Contact Your\'s Advertisement; 9902492681

ಒಂದೊಂದು ಶಾಲೆಯಲ್ಲಿ ಎರಡ್ಮೂರು ಮತಗಟ್ಟೆಗಳು ಇರುತ್ತವೆ. ಮತದಾರರು ಬಂದು ತಮ್ಮ ಮತಗಟ್ಟೆ ಯಾವ ಕಡೆ ಬರುತ್ತೆ ಎಂದು ಅತ್ತಿತ್ತ ತಿರುಗಾಡುತ್ತಿರುತ್ತಾರೆ. ಅಂತವರಿಗೆ ನೀವು ನೆರವಾಗಬೇಕು. ಮತಗಟ್ಟೆಯಲ್ಲಿ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ರ‌್ಯಾಂಪ್ ವ್ಯವಸ್ಥೆ ಬಗ್ಗೆ ಮತದಾರರಿಗೆ ತಿಳಿಸಬೇಕು. ವಿಶೇಷವಾಗಿ ಮತದಾನಕ್ಕೆ ವೋಟರ್ ಐ.ಡಿ. ಇಲ್ಲದಿದ್ದಲ್ಲಿ ಇತರೆ 12 ಪರ್ಯಾಯ ದಾಖಲೆ ತೋರಿಸಿ ಮತದಾನ ಮಾಡಬಹುದೆಂದು ಅವರಿಗೆ ತಿಳಸುವುದರ ಜೊತೆಗೆ ದೇಶದ ಭಾವಿ ಪ್ರಜೆಗಳಾಗಿರುವ ತಾವು ಮತದಾನ ದಿನದ ಸಂಪೂರ್ಣ ಪ್ರಕ್ರಿಯೆ ವೀಕ್ಷಿಸಬೇಕು ಎಂದರು.

ಸ್ವಯಂ ಸೇವಕರ ಪಾತ್ರ ದೊಡ್ಡದು: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ಅವರು ಮಾತನಾಡಿ, ಮತದಾನ ದಿನದಂದು ಸ್ವಯಂ ಸೇವಕರ ಪಾತ್ರ ಬಹುಮುಖ್ಯವಾಗಿದೆ. ಎಲ್ಲಾ ಸ್ವಯಂ ಸೇವಕರಿಗೆ ಗುರುತಿನ‌ ಚೀಟಿ ನೀಡಲಾಗುತ್ತದೆ. ತಮ್ಮ‌ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಬೇಕು. ಹಂಚಿಕೆಯಾದ ಮತಗಟ್ಟೆಯಲ್ಲಿ ಅಂದು ಹಾಜರಿರಬೇಕು. ಸ್ವಯಂ ಸೇವಕರಿಗೆ ಸ್ವೀಪ್ ಸಮಿತಿಯಿಂದ ಪ್ರಮಾಣ ಪತ್ರ‌ ಸಹ ನೀಡಲಾಗುವುದೆಂದರು.

ಇದೇ ಸಂದರ್ಭದಲ್ಲಿ‌ ಮತದಾರರ ಜಾಗೃತಿ ಮತದ ಮಹತ್ವ ಸಾರುವ “ನಾ ಭಾರತ” ಗೀತೆ ಪ್ರದರ್ಶಿಸಲಾಯಿತು. ತಾಲೂಕ ಪಂಚಾಯತ್ ಇ.ಓ ಸೈಯದ್ ಪಟೇಲ್ ಅವರು ನೆರದ‌ ಸ್ವಯಂ ಸೇವಕರಿಗೆ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಿದರು.
ಮಾಸ್ಟರ್ ಟ್ರೇನರ್ ಡಾ.ಶಶಿಶೇಖರ ರೆಡ್ಡಿ ಅವರು ತರಬೇತಿ ಕಾರ್ಯಕ್ರಮ ನಡೆಸಿಕೊಟ್ಟರು.

ಕಲಬುರಗಿ ಸಹಾಯಕ ಆಯುಕ್ತೆ ರೂಪಿಂದರ್ ಸಿಂಗ್ ಕೌರ್, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ಮತ್ತು ಸ್ವೀಪ್ ನೋಡಲ್ ಅಧಿಕಾರಿ ಅಬ್ದುಲ್ ಅಜೀಮ್, ಡಿ.ಡಿ.ಪಿ.ಐ ಸಕ್ರೆಪ್ಪಗೌಡ ಬಿರಾದಾರ, ಎನ್.ಐ.ಸಿ. ಅಧಿಕಾರಿ ಪ್ರಮೋದ, ಕಲಬುರಗಿ ತಹಶೀಲ್ದಾರ ಮಧುರಾಜ, ಮಹಾನಗರ ಪಾಲಿಕೆಯ ಸಭಾ ಕಾರ್ಯದರ್ಶಿ ಮಹೆಬೂಬ್ ಜಿಲಾನಿ, ಐ.ಟಿ. ನೋಡಲ್ ಅಧಿಕಾರಿ ಮಹಾಂತೇಶ ಇದ್ದರು. ತರಬೇತಿಗೆ ನೂರಾರು ಸಂಖ್ಯೆಯಲ್ಲಿ ಮಕ್ಕಳು‌ ಭಾಗವಹಿಸಿದ್ದರು.

ಜಿಲ್ಲಾ‌ ಪಂಚಾಯತಿಯ ಎಸ್.ಬಿ.ಎಮ್. ಸಂಯೋಜಕಿ ಗುರುಬಾಯಿ ಅವರು ಸ್ವಾಗತಿಸಿದರು. ಉಪನಿರ್ದೇಶಕಿ ಮಧುಮತಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here