ಈಶಾನ್ಯ ಕರ್ನಾಟಕ ಪದವೀಧರ ಚುನಾವಣೆ: ಮತದಾನಕ್ಕೆ 60 ತಂಡ ರಚನೆ

0
31

ಕಲಬುರಗಿ: ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರಕ್ಕೆ ಇದೇ ಜೂನ್ 3 ರಂದು ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆ ವರೆಗೆ ಮತದಾನ ನಡೆಯಲಿದ್ದು, ಶಾಂತಿಯುತ ಮತದಾನಕ್ಕೆ ಜಿಲ್ಲೆಯಾದ್ಯಂತ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮತದಾನಕ್ಕೆ ಪ್ರತಿ ಮತಗಟ್ಟೆಗೆ 6 ಜನರ ತಂಡದಂತೆ ಒಟ್ಟು 60 ತಂಡ ರಚಿಸಲಾಗಿದೆ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಮತ್ತು ಕಲಬುರಗಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹೇಳಿದರು.

ಶನಿವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರತಿ ಮತಗಟ್ಟೆಗೆ ಓರ್ವ ಪಿ.ಆರ್.ಓ, ಓರ್ವ ಎ.ಪಿ.ಆರ್.ಓ, ಇಬ್ಬರು ಪಿ.ಓ., ಮೈಕ್ರೋ ವೀಕ್ಷಕರು ಒಬ್ಬರು, ಓರ್ವ ಗ್ರೂಪ್ ‘ಡಿ’ ಸಿಬ್ಬಂದಿ ಸೇರಿ ಪ್ರತಿ ಮಗತಟ್ಟೆಗೆ 6 ಜನ ಸಿಬ್ಬಂದಿ ಇರಲಿದ್ದಾರೆ. 60 ತಂಡದಲ್ಲಿ 13 ಮೀಸಲು ತಂಡಗಳಾಗಿವೆ. ಇನ್ನು ಪ್ರತಿ ಮತಗಟ್ಟೆಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಸಹ ಭದ್ರತೆಗೆ ಇರಲಿದ್ದಾರೆ. ಪ್ರತಿ ಮತಗಟ್ಟೆಯಲ್ಲಿ ಕನಿಷ್ಠ ಮೂಲಸೌಕರ್ಯ ಕಲ್ಪಿಸಿದೆ. ಇನ್ನು ಮಸ್ಟ್ರಿಂಗ್ ಕಾರ್ಯ ಆಯಾ ತಾಲೂಕಾ ಕೇಂದ್ರದಲ್ಲಿ ರವಿವಾರ ನಡೆಯಲಿದ್ದು, ಸಂಜೆ ಹೊತ್ತಿಗೆ ಮತಗಟ್ಟೆಗೆ ಸಿಬ್ಬಂದಿಗಳು ತಲುಪಲಿದ್ದಾರೆ ಎಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ತಿಳಿಸಿದರು.

Contact Your\'s Advertisement; 9902492681

ಜಿಲ್ಲೆಯಲ್ಲಿ 22,688 ಪುರುಷರು, 15,826 ಮಹಿಳೆಯರು, ಇತರೆ 5 ಸೇರಿ ಒಟ್ಟು 38,519 ಜನ ಮತದಾರರು ಮತದಾನಕ್ಕೆ ಅರ್ಹತೆ ಪಡೆದಿದ್ದಾರೆ. ಜಿಲ್ಲೆಯಾದ್ಯಂತ 41 ಮುಖ್ಯ, 6 ಹೆಚ್ಚುವರಿ ಸೇರಿ 47 ಮತಗಟ್ಟೆಗಳು ಸ್ಥಾಪಿಸಿದೆ. ತಾಲೂಕುವಾರು ಮತಗಟ್ಟೆ ನೋಡಿದಾಗ, ಅಫಜಲಪೂರ-4, ಆಳಂದ-5, ಚಿಂಚೋಳಿ, ಚಿತ್ತಾಪುರ ಹಾಗೂ ಜೇವರ್ಗಿ ತಲಾ 3, ಶಹಾಬಾದ, ಕಾಳಗಿ ಹಾಗೂ ಯಡ್ರಾಮಿ ತಲಾ 1, ಕಲಬುರಗಿ ನಗರ-18, ಕಲಬುರಗಿ ಗ್ರಾಮೀಣ ಮತ್ತು ಕಮಲಾಪುರ ತಲಾ 2 ಹಾಗೂ ಸೇಡಂ ತಾಲೂಕಿನಲ್ಲಿ 4 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದರು.

ಮತ ಅಮಾನ್ಯವಾಗದಂತೆ ಎಚ್ಚರ ವಹಿಸಿ: ಈ ಬಾರಿ ಕಳೆದ ಬಾರಿಕ್ಕಿಂತ ಹೆಚ್ಚಿನ ಮತದಾರರು ಜಿಲ್ಲೆಯಲ್ಲಿ ನೊಂದಾಯಿಸಿಕೊಂಡಿದ್ದಾರೆ. ಈ ಚುನಾವಣೆಯಲ್ಲಿ ಪೋಸ್ಟಲ್ ಬ್ಯಾಲೆಟ್ ಮೂಲಕ ಪ್ರಾಶಸ್ತ್ಯದ ಮತ ನೀಡಲು ಅವಕಾಶವಿದ್ದು, ಸಾಮಾನ್ಯ ಚುನಾವಣೆಗ್ಗಿಂತ ಇದು ಭಿನ್ನವಾಗಿದೆ. ಮತದಾನ ಕೇಂದ್ರದಲ್ಲಿ ಚುನಾವಣಾ ಆಯೋಗವು ನೀಡುವ ನೇರಳೆ ಬಣ್ಣದ ಸ್ಕೆಚ್ ಪೆನ್ನಿನಿಂದ ಮಾತ್ರ ಆದ್ಯತಾ ಮತ ನಮೂದಿಸಬೇಕು. ಆದ್ಯತಾ ಸಂಖ್ಯೆ ನಮೂದಿಸುವಾಗ ಒಂದೇ ಭಾಷೆ ಬಳಸಬೇಕು. ಸ್ಕೆಚ್ ಪೆನ್ ಹೊರತುಪಡಿಸಿ ಇತರೆ ಪೆನ್ ಬಳಸಿ ಮತ ಚಲಾಯಿಸಿದಲ್ಲಿ ಅಂತಹ ಮತಗಳು ಅಸಿಂಧುಗೊಳ್ಳಲಿದೆ ಎಂದ ಅವರು ಮತದಾನ ಸರಿಯಾದ ಕ್ರಮ ಕುರಿತು ಮಾಹಿತಿ ನೀಡಲು ಪ್ರತಿ ಮತಗಟ್ಟೆಗೆ ಓರ್ವ ಅಧಿಕಾರಿಗಳನ್ನು ಸಹ ನಿಯೋಜಿಸಲಾಗುತ್ತದೆ ಎಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ತಿಳಿಸಿದರು.

144 ಜಾರಿ,ಮದ್ಯ ಮಾರಾಟ ನಿಷೇಧ: ಮತದಾನ ದಿನದಂದು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಮತಗಟ್ಟೆಯಿಂದ 200 ಮೀಟರ್ ವ್ಯಾಪ್ತಿಯಲ್ಲಿ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ-1973ರ ಕಲಂ 144 ರನ್ವಯ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಅಲ್ಲದೆ ಜೂನ್ 1ರ ಸಂಜೆ 4 ರಿಂದ ಜೂನ್ 3ರ ಮಧ್ಯರಾತ್ರಿ ವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದರು.

ಬಲಗೈ ತೋರು ಬೆರಳಿಗೆ ಶಾಹಿ: ಮತ ಚಲಾಯಿಸುವ ಮತದಾರರಿಗೆ ಅಳಿಸಲಾಗದ ಶಾಹಿಯನ್ನು (Indelible Ink)ನ್ನು ಬಲಗೈ ತೋರು ಬೆರಳಿಗೆ ಹಚ್ಚಲಾಗುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮಿತ್ ಪಾಟೀಲ, ಪ್ರೊಬೇಷನರ್ ಐ.ಎ.ಎಸ್. ಅಧಿಕಾರಿ ಮೀನಾಕ್ಷಿ ಆರ್ಯ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here