ಸುರಪುರ: ತಾಲ್ಲೂಕಿನ ದೇವಿಕೇರಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗು ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ ಯಾದಗಿರಿ ವತಿಯಿಂದ ಶಿಕ್ಷಕರ ದಿನಾಚರಣೆ ಹಾಗು ಇಂಜಿನಿಯರರ ದಿನಾಚರಣೆ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮವನ್ನು ಶಾಲೆಯ ಮುಖ್ಯಗುರು ಅಮರೇಶ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ,ವಿದ್ಯೆಯೆ ಬಾಳಿನ ಬೆಳಕಾಗಿದೆ.ವಿದ್ಯೆ ಇಲ್ಲದವನ ಮುಖವು ಹಾಳೂರ ಹದ್ದಿನಂತೆ ಎಂದು ವಚನಕಾರರು ಹೇಳುವಂತೆ ಇಂದು ಎಲ್ಲರಿಗೂ ವಿದ್ಯೆ ಎಂಬುದು ಅವಶ್ಯಕವಾಗಿದೆ ಎಂದರು.ಅಲ್ಲದೆ ಇಂದು ವಿಜ್ಞಾನ ಜಗತ್ತಿನ ಅವಿಭಾಜ್ಯ ಅಂಗವಾಗಿದೆ.ಪ್ರತಿಯೊಂದು ಸಂಗತಿಯನ್ನು ಇಂದು ವಿಜ್ಞಾನ ಕಂಡುಹಿಡಯುತ್ತಿದೆ,ಆ ನಿಟ್ಟಿನಲ್ಲಿ ಭಾರತೀಯರ ಸಾಧನೆ ದೊಡ್ಡದು.ಅಲ್ಲದೆ ಬಡತನದ ಕುಟುಂಬದಲ್ಲಿ ಜನಸಿದ ಸರ್.ಎಂ.ವಿಶ್ವೇಶ್ವರಯ್ಯನವರು ಕಷ್ಟಪಟ್ಟು ಓದಿ ಜಗತ್ಪ್ರಸಿದ್ದ ಇಂಜಿಯರರಾದರು.ಅವರ ನೆನಪಿನಲ್ಲಿ ಇಂದು ಇಂಜಿನಿಯರರ ದಿನವನ್ನು ಆಚರಿಸಲಾಗುತ್ತಿದೆ ಎಂದರು.
ನಂತರ ಸೂರ್ಯ ಗ್ರಹಣ,ಚಂದ್ರ ಗ್ರಹಣ,ನ್ಯೂಟನ್‌ನ ಚಲನೆಯ ನಿಯಮ, ಕಾಲಗಳು, ಅಮವಾಸ್ಯೆ, ಹುಣ್ಣಿಮೆ, ಸಸ್ಯಗಳು, ಇಂಜಿನ್‌ನ ಚಲನೆಯ ವಿಧಾನ,ಮೈಕ್ರೋವೇವ್,ಮಾನವನ ದೇಹದ ರಚನೆ,ರಕ್ತ ಪರಿಚಲನೆ ಸೇರಿದಂತೆ ಸುಮಾರು ಅರವತ್ತು ರೀತಿಯ ವಿಜ್ಞಾನದ ಅವಿಷ್ಕಾರಗಳ ಬಗ್ಗೆ ಪ್ರದರ್ಶನ ನಡೆಸಿ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ದೇವಿಕೇರಾ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾದ್ಯಾಯ ಗಿರೀಶ,ಅಗಸ್ತ್ಯ ಪ್ರತಿಷ್ಠಾನದ ಮುಖ್ಯಸ್ಥ ಮಲ್ಲಿಕಾರ್ಜುನ ಸೇರಿದಂತೆ ಶಾಲೆಯ ಎಲ್ಲಾ ಶಿಕ್ಷಕರು ಮತ್ತು ಸಿಬ್ಬಂದಿಗಳು ಹಾಗು ವಿದ್ಯಾರ್ಥಿಗಳಿದ್ದರು.