ಕಲಬುರಗಿ: ಲೋಕಸಭೆ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಧಾಕೃಷ್ಣ ದೊಡ್ಮನಿಯವರಿಗೆ, ಹಾಗೂ ಕರ್ನಾಟಕ ವಿಧಾನ ಪರಿಷತ್ತಿಗೆ ಈಶಾನ್ಯ ಕರ್ನಾಟಕ ಪದವಿಧರ ಕ್ಷೇತ್ರದಿಂದ ನಡೆದ ಚುನಾವಣೆಯಲ್ಲಿ ಅಭ್ಯರ್ಥಿ ಡಾ. ಚಂದ್ರಶೇಖರ ಪಾಟೀಲ ಅವರ ಅಭೂತಪೂರ್ವ ಗೆಲುವಿಗೆ ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಲ್ಲಂಪ್ರಭು ಪಾಟೀಲ್ ಅವರು ಹರ್ಷ ವ್ಯಕ್ತಪಡಿಸಿ ಮತದಾರರಿಗೆ ಧನ್ಯವಾದ ಸಮರ್ಪಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಶಾಸಕರು, ಕಲ್ಯಾಣ ಕರ್ನಾಟಕ ಭಾಗದ ಜನರು ಕಾಂಗ್ರೆಸ್ ಪಕ್ಷದ ಮೇಲೆ ಇಟ್ಟಿರುವ ನಂಬಿಕೆಯ ಪ್ರತೀಕವಾಗಿ ಈ ಫಲಿತಾಂಶಗಳು ಹೊರಬಿದ್ದಿವೆ. ಕಲಬುರಗಿ ಸೇರಿದಂತೆ ಈ ಭಾಗದ ಐದು ಲೋಕಸಭಾ ಕ್ಷೇತ್ರದಲ್ಲಿ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿದೆ. ಈಗ ಈಶಾನ್ಯ ಪದವಿಧರರ ಕ್ಷೇತ್ರದಿಂದ ವಿಧಾನಪರಿಷತ್ ಗೆ ನಡೆದ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಚಂದ್ರಶೇಖರ್ ಪಾಟೀಲ್ರಿಗೆ 4 ಸಾವಿರಕ್ಕೂ ಹೆಚ್ಚು ಮತಗಳಿಂದ ಆಶೀರ್ವಾದ ಮಾಡುವ ಮೂಲಕ ಮತದಾರರು ನಮ್ಮ ಪಕ್ಷಕ್ಕೆ ಬಲ ತುಂಬಿದ್ದಾರೆ. ಈ ಹಿನ್ನೆಲೆಯಲ್ಲಿ ನಾನು ಒಟ್ಟಾರೆ ಮತದಾರರಿಗೆ ಹೃದಯತುಂಬಿದ ಧನ್ಯವಾದ ಸಮರ್ಪಿಸುತ್ತೇನೆ ಎಂದು ಶಾಸಕರು ಹೇಳಿದ್ದಾರೆ.
ಸಂವಿಧಾನದ ಕಲಂ 371 ಜೆ ಈ ಬಾಗಕ್ಕೆ ಕೊಡುಗೆ ನೀಡಿರುವ ಈಗಿನ ಎಐಸಿಸಿ ಅದ್ಯಕ್ಷರಾದ ಡಾ. ಖರ್ಗೆಯವರ ಪ್ರಾಮಣಿಕ ಪ್ರಯತ್ನದ ಮೇಲೆ ಈ ಬಾಗದ ಜನ ಅಪಾರ ನಂಬಿಕೆ ಇಟ್ಟಿರೋದು ಇವೆರಡೂ ಫಲಿತಾಂಶದಿಂದ ಗೊತ್ತಾಗುತ್ತದೆ. ಖರ್ಗೆಯಜಿಯವರ ಅಭಿವೃದ್ಧಿ ಪರವಾದಂತಹ ಧೋರಣೆ, ಅವರು ಸದಾಕಾಲ ಜನಪರವಾಗಿರುವ ಚಿಂತನೆಗಳೊಂದಿಗೆ ಕೆಲಸ ಮಾಡುತ್ತಿರುವ ದೂರದೃಷ್ಟಿಯ ಯೋಜನೆಗಳು ಇಂದು ಚುನಾವಣೆಯಲ್ಲಿ ಕಲ್ಯಾಣದಲ್ಲಿ ಪಕ್ಷಕ್ಕೆ ಆನೆಬಲ ತುಂಬಿದೆ ಎಂದೂ ಪಾಟೀಲರು ಹೇಳಿದ್ದಾರೆ.
ಕಳೆದ ಅಸೆಂಬ್ಲಿ ಚುನಾವಣೆಯಿಂದ ಇಲ್ಲಿಯವರೆಗೂ ಈ ಭಾಗದ ಅಭಿವೃದ್ದಿಗೆ ಪಕ್ಷದಿಂದ ಆಯ್ಕೆಯಾದ ಶಾಸಕರು, ವಿಧಾನಪರಿಷತ್ ಸದಸ್ಯರು, ಲೋಕಸಭಾ ಸದಸ್ಯರು, ಹಾಗೂ ರಾಜ್ಯ ಸರ್ಕಾರದ ಭಾಗವಾಗಿರುವ ಸಚಿವರು ಸದಾ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ನಿಮ್ಮ ಬೆಂಬಲ ಇನ್ನೂ ಮುಂದೆಯೂ ಹೀಗೆಯೇ ಇರಲಿ ಎಂದು ಶಾಸಕರಾದ ಅಲ್ಲಂಪ್ರಭು ಪಾಟೀಲರು ಜನತೆಗೆ ಮನವಿ ಮಾಡಿದ್ದಾರೆ.