ಕಲಬುರಗಿ: ಇಂದಿನ ಯುವ ಪೀಳಿಗೆಯಲ್ಲಿ ಕಾವ್ಯ ಪರಂಪರೆ ಬೆಳೆಸಲು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಜೂನ್ 16 ರಂದು ಬೆಳಗ್ಗೆ 10.30 ಕ್ಕೆ ಒಂದು ದಿನದ ಕಾವ್ಯ ಕಮ್ಮಟ-2024 ವನ್ನು ನಗರದ ಕನ್ನಡ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.
ಪರಿಷತ್ತು ಇಂಥ ಕಮ್ಮಟಗಳು ಆಗಾಗ ಆಯೋಜಿಸುವ ಮೂಲಕ ಒಳ್ಳೆಯ ವಿಚಾರಗಳನ್ನು ಪ್ರಸಾರಿಸಿ ಜನರ ಮನಸ್ಸನ್ನು ಸಂಸ್ಕಾರಗೊಳಿಸುವ ಉದ್ದೇಶ ಹೊಂದಲಾಗಿದೆ. ಯಾವುದೇ ಒಂದು ಬರಹವು ಒಳ್ಳೆಯ ಸಮಾಜ ನಿರ್ಮಾಣದ ಆಶಯವನ್ನು ಇರಿಸಿಕೊಂಡಿರುತ್ತದೆ. ಕಾವ್ಯದಲ್ಲಿ ಉತ್ತಮ ಸಮಾಜವನ್ನು ಸೃಷ್ಠಿಸುವ ಶಕ್ತಿ ಹೊಂದಿರುವ ಇಂದಿನ ಹೊಸ ಪೀಳಿಗೆಯನ್ನು ಕಾವ್ಯ ಕ್ಷೇತ್ರದಲ್ಲಿ ತೆಗೆದುಕೊಂಡೊಯ್ಯಲು ಈ ಕಮ್ಮಟವನ್ನು ರೂಪಿಸಲಾಗಿದೆ.
ಕನ್ನಡ ಕಾವ್ಯದ ಸ್ವರೂಪ ವೈವಿಧ್ಯ, ಕನ್ನಡ ಭಾಷೆ ಮತ್ತು ಶೈಲಿ, ಕಾವ್ಯ ರಚನೆಯ ಹೊಸ ಸವಾಲುಗಳು, ಕಾವ್ಯಾಭಿವ್ಯಕ್ತಿಯ ವಿಭಿನ್ನ ಮಾದರಿಗಳು ಇವುಗಳ ಕುರಿತು ಅನುಭವಿ ಸಂಪನ್ಮೂಲ ವ್ಯಕ್ತಿಗಳಿಂದ ವಿಚಾರ ಮಂಡನೆ, ಸಂವಾದ, ಚರ್ಚೆಗಳು ಈ ಕಾವ್ಯ ಕಮ್ಮಟದ ಮುಖ್ಯ ಭಾಗವಾಗಿರುತ್ತವೆ.
ಚಿಂತಕ ಬಿ.ವ್ಹಿ.ಚಕ್ರವರ್ತಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಪಂ ನ ಮಾಜಿ ಸದಸ್ಯ ರಾಮಲಿಂಗರೆಡ್ಡಿ ದೇಶಮುಖ ಕೋಡ್ಲಿ, ಜಿಲ್ಲಾ ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಬಿ.ಎಸ್. ದೇಸಾಯಿ, ನ್ಯಾಯವಾದಿ ಸುರೇಶ ಪಾಟೀಲ ಜೋಗೂರ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಅನುಭವಿ ಸಂಪನ್ಮೂಲ ವ್ಯಕ್ತಿಗಳಾದ ಡಾ. ಲಿಂಗಣ್ಣ ಗೋನಾಲ, ಜಗನ್ನಾಥ ಎಲ್ ತರನಳ್ಳಿ, ಡಾ. ಶಿವರಂಜನ್ ಸತ್ಯಂಪೇಟೆ, ಡಾ. ಚಂದ್ರಕಲಾ ಬಿದರಿ ಅವರು ವಿವಿಧ ವಿಷಯಗಳ ಮೇಲೆ ವಿಚಾರ ಮಂಡನೆ ಮಾಡಲಿದ್ದಾರೆ.
ವಿವಿಧ ಗೋಷ್ಠಿಗಳಲ್ಲಿ ವಿವಿಧ ಕ್ಷೇತ್ರದ ಪ್ರಮುಖರಾದ ವಿದ್ಯಾಸಾಗರ ದೇಶಮುಖ, ವಿಶ್ವನಾಥರೆಡ್ಡಿ ಕಾಮರೆಡ್ಡಿ ಗೋಟೂರ, ದೇವೀಂದ್ರ ಮೇಲಕೇರಿ ಧಂಗಾಪೂರ, ನರಸಿಂಗರಾವ ಹೇಮನೂರ, ಶಿವಪುತ್ರ ಕರಣಿಕ್, ಸಾಹೇಬಗೌಡ ಕಡ್ಲಿ ಅವರಾದ, ಪ್ರೊ. ಅಮರೇಸ ಹಾಲ್ವಿ, ಪರಮೇಶ್ವರ ಓಕಳಿ, ದೇವಯ್ಯಾ ಗುತ್ತೇದಾರ, ಪರಮೇಶ್ವರ ಮಡಿವಾಳ ಕಾಳಗಿ, ಗುರುಶಾಂತಪ್ಪ ಓಗಿ ತಾಜ್ ಸುಲ್ತಾನಪುರ, ಬಸವರಾಜ ಹೆಳವರ ಸೇರಿದಂತೆ ಅನೇಕರು ವೇದಿಕೆ ಮೇಲಿರುವರು ಎಂದು ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿ ಧರ್ಮಣ್ಣ ಎಚ್ ಧನ್ನಿ ತಿಳಿಸಿದ್ದಾರೆ.