ಆಳಂದ: ಯುವಕರು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಹಾಗೂ ಸಾಧನೆಗೆ ಪುಸ್ತಕಗಳು ಪ್ರೇರಕವಾಗಿದ್ದು, ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ನಿಂಬರ್ಗಾದ ಶಿವಲಿಂಗೇಶ್ವರ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ನಿಂಬರ್ಗಾ ಗ್ರಾಮದಲ್ಲಿ ಈಚೆಗೆ ಪೃಥ್ವಿ ಹೈದ್ರಾಬಾದ್ ಕರ್ನಾಟಕ ಶೋಷಿತ ಮಹಿಳೆಯರ ಅಭಿವೃದ್ಧಿ ಸಂಸ್ಥೆ, ನಿಂಬರ್ಗಾ ಸಹಯೋಗದಲ್ಲಿ ಸಾರ್ವಜನಿಕರಿಗಾಗಿ ತೆರೆದ ಶ್ರೀಬಸವ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದರು.
ಮೊಬೈಲ್, ವಾಟ್ಸಫ್, ವೇಸ್ ಬುಕ್ ಮತ್ತಿತರ ಆಕರ್ಷಣೆಗಳು ಸಮಸ್ಯೆ ಸೃಷ್ಟಿಸುತ್ತಿವೆ, ಅರ್ಥಪೂರ್ಣ ಓದು, ಸ್ಮರಣೆ ಹಾಗೂ ಮನರಂಜನೆಗಾಗಿ ಪುಸ್ತಕಗಳ ಓದು ಉಪಯುಕ್ತವಾದದು, ಗ್ರಾಮೀಣ ಜನರಿಗಾಗಿ ಬಸವ ಗ್ರಂಥಾಲಯ ಆರಂಭಿಸಿರುವ ಕಾರ್ಯ ಶ್ಲಾಘನೀಯವಾದದು ಎಂದರು.
ವಕೀಲ ಧರ್ಮಣಾ ಕೋಣಿಕ ಮಾತನಾಡಿ ಉತ್ತಮ ಸಂಸ್ಕಾರ,ಜೀವನದಲ್ಲಿ ಶಿಸ್ತು ರೂಪಗೊಳ್ಳಲು ಉತ್ತಮ ಹವ್ಯಾಸಗಳು ಅಗತ್ಯವಾಗಿವೆ. ಶ್ರೀ ಬಸವ ಗ್ರಂಥಾಲಯದಲ್ಲಿ ೩ ಸಾವಿರಕ್ಕೂ ಅಧಿಕ ಪುಸ್ತಕ, ಕತೆ, ಜೀವನ ಚರಿತ್ರೆ, ಕಾದಂಬರಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆಗಾಗಿ ವಿವಿಧ ಪುಸ್ತಕಗಳು, ಪತ್ರಿಕೆಗಳು ದೊರೆಯಲಿವೆ, ಗ್ರಾಮಸ್ಕರು ಇದರ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.
ಪ್ರಾಂಶುಪಾಲ ಸಂಜೀವಕುಮಾರ ನಿರ್ಮಲಕ ಅಧ್ಯಕ್ಷತೆವಹಿಸಿದರು, ಮುಖಂಡ ಗುರು ಕಾಮಣಗಳ, ಲತಾ ನಿರ್ಮಲಕ, ಸೂರ್ಯಕಾಂತ ಜಿಡಗೆ, ದತ್ತಪ್ಪ ಬೀದನಕರ್, ಪ್ರಕಾಶ ಸಿದ್ಧಾರ್ಥ, ವಿಜಯಕುಮಾರ ಜಿಲ್ಲೆಗೆ, ಶಾಮರಾಯ ಬಿದಿಗೆ, ಜೈಭೀಮ ಬೀದನಕ ಉಪಸ್ಥಿತರಿದ್ದರು.