ಶೇ.100ರಷ್ಟು ಅನುದಾನ ಬಳಕೆಗೆ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಸೂಚನೆ

0
103

ಎಸ್.ಸಿ.ಪಿ.-ಟಿ.ಎಸ್.ಪಿ ಪ್ರಗತಿ ಪರಿಶೀಲನಾ ಸಭೆ

ಕಲಬುರಗಿ: ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ಸಮುದಾಯದ ಕಲ್ಯಾಣಕ್ಕಾಗಿ ವಿವಿಧ ಇಲಾಖೆಗೆ ಎಸ್.ಸಿ.ಪಿ-ಟಿ.ಎಸ್.ಪಿ. ಯೋಜನೆಯಡಿ ಬಿಡುಗಡೆಯಾದ ಅನುದಾನವನ್ನು ಶೇ.100ರಷ್ಟು ಬಳಕೆಯಾಗಬೇಕು ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಶುಕ್ರವಾರ ಇಲ್ಲಿನ ಡಿ.ಸಿ.ಕಚೇರಿ ಸಭಾಂಗಣದಲ್ಲಿ ಅನುಸೂಚಿತ ಜಾತಿಗಳ ಉಪ ಯೋಜನೆ ಮತ್ತು ಬುಡಕಟ್ಟು ಉಪ ಯೋಜನೆ ಕಾರ್ಯಕ್ರಮಗಳ ಅನುಷ್ಠಾನದ ಜಿಲ್ಲಾ ಮಟ್ಟದ ಮೊದಲನೇ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಸಕ್ತ ತ್ರೈಮಾಸಿಕ ಅಂತ್ಯಕ್ಕೆ ಬಹುತೇಕ ಇಲಾಖೆಗಳು ಬಿಡುಗಡೆಯಾದ ಅನುದಾನಕ್ಕೆ ಆರ್ಥಿಕ ಪ್ರಗತಿ ಸಾಧಿಸದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಮುಂದಿನ ತ್ರೈಮಾಸಿಕ ಅಂತ್ಯದೊಳಗೆ ಎರಡು ತ್ರೈಮಾಸಿಕ ಪ್ರಗತಿ ಸಾಧಿಸಬೇಕೆಂದರು.

Contact Your\'s Advertisement; 9902492681

ಕಳೆದ 2023-24ನೇ ಸಾಲಿನಲ್ಲಿ ಶೇ.90ಕ್ಕಿಂತ ಕಡಿಮೆ ಪ್ರಗತಿ ಸಾಧಿಸಿದ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಎಸ್.ಸಿ.ಪಿ-ಟಿ.ಎಸ್.ಪಿ ಕಾರ್ಯಕ್ರಮಗಳ ಜೊತೆಗೆ ಇಲಾಖಾ ಕಾರ್ಯಕ್ರಮದಲ್ಲಿಯೂ ಪ್ರಗತಿ ಸಾಧಿಸಬೇಕೆಂದರು.

ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಬರುವ ಜುಲೈ 8 ಮತ್ತು 9 ರಂದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ ಸಿ.ಇ.ಓ ಗಳ ಕಾನ್ಫೆರೆನ್ಸ್ ನಡೆಯಲಿದ್ದು, ಕಳೆದ ಸೆಪ್ಟೆಂಬರ್ ಮಾಹೆಯಲ್ಲಿ ನಡೆದ ಸಭೆಯಲ್ಲಿನ ತೀರ್ಮಾನಕ್ಕೆ ಅನುಪಾಲನಾ ವರದಿಯನ್ನು ಕೂಡಲೆ ಈ ಕಚೇರಿಗೆ ಸಲ್ಲಿಸಬೇಕೆಂದು ತಿಳಿಸಿದ ಜಿಲ್ಲಾಧಿಕಾರಿಗಳು, ಎಸ್.ಸಿ.ಪಿ-ಟಿ.ಎಸ್.ಪಿ ಯೋಜನೆಗಳ ಭೌತಿಕ ಮತ್ತು ಆರ್ಥಿಕ ಪ್ರಗತಿ ಸಾಧಿಸುವುದರ ಜೊತೆಗೆ ತಂತ್ರಾಂಶದಲ್ಲಿ ನಿಖರವಾಗಿ ಅಪಡೇಟ್ ಸಹ ಮಾಡಬೇಕು ಎಂದರು.

ಸಮಾಜ ಕಲ್ಯಾಣ ಇಲಾಖೆಯ ಪ್ರಭಾರಿ ಜಂಟಿ ನಿರ್ದೇಶಕ ಮುನಾವರ ದೌಲಾ ಮಾತನಾಡಿ, ಜಿಲ್ಲೆಗೆ 2024-25ನೇ ಸಾಲಿನಲ್ಲಿ ವಿವಿಧ ಇಲಾಖೆಗಳಿಗೆ ಒಟ್ಟಾರೆ ಎಸ್.ಸಿ.ಪಿ. ಯೋಜನೆಯಡಿ 8,913.77 ಲಕ್ಷ ರೂ. ಹಂಚಿಕೆಯಾಗಿ 922.41 ಲಕ್ಷ ರೂ. ಬಿಡುಗಡೆಯಾಗಿದ್ದು, ಇದರಲ್ಲಿ 372.37 ಲಕ್ಷ ರೂ. ಖರ್ಚು ಮಾಡಲಾಗಿದೆ. ಅದೇ ರೀತಿ ಟಿ.ಎಸ್.ಪಿ. ಯೋಜನೆಯಡಿ 1,940.46 ಲಕ್ಷ ರೂ. ಹಂಚಿಕೆ ಪೈಕಿ 257.10 ಲಕ್ಷ ರೂ. ಬಿಡುಗಡೆಯಾಗಿದ್ದು, ಇದರಲ್ಲಿ 39.63 ಲಕ್ಷ ರೂ. ಖರ್ಚು ಮಾಡಲಾಗಿದೆ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here