ಮಾಡಬೂಳದಲ್ಲಿ ವನಮಹೋತ್ಸವಕ್ಕೆ ಪ್ರಿಯಾಂಕ್ ಖರ್ಗೆ ಚಾಲನೆ
ಕಲಬುರಗಿ: ವನಮಹೋತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್.. ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾಡಬೂಳನಲ್ಲಿ ನಿರ್ಮಿಸಲಾಗುತ್ತಿರುವ ಪ್ರಾಣಿ ಸಂಗ್ರಹಾಲಯದಲ್ಲಿ ಸಸಿ ನೆಟ್ಟು ವನಮಹೋತ್ಸವಕ್ಕೆ ಚಾಲನೆ ನೀಡಿದರು.
ಸೋಮವಾರ ತಮ್ಮ ಸ್ವಕ್ಷೇತ್ರ ಚಿತ್ತಾಪುರ ತಾಲೂಕಿನ ಮಾಡಬೂಳನಲ್ಲಿ ಅರಣ್ಯ ಇಲಾಖೆಯಿಂದ ಅಯೋಜಿಸಿದ ಕಾರ್ಯಕ್ರಮದಲ್ಲಿ ಅರಳಿ ಮತ್ತು ಸಾವಿರ ವರ್ಷ ಆಯಸ್ಸಿನ ಬೌಬೌ ಸಸಿ ನೆಟ್ಟು ನೀರುಣಿಸಿದರು. ನಂತರ ಮಾತನಾಡಿದ ಸಚಿವರು, ಮಳೆಗಾಲ ಸಮಯ ಇದಾಗಿದ್ದರಿಂದ ಎಲ್ಲೆಡೆ ಹೆಚ್ಚಿನ ಸಂಖ್ಯೆಯಲ್ಲಿ ಸಸಿ ನೆಟ್ಟು ಹಸಿರು ಕಲಬುರಗಿ ಮಾಡಬೇಕು ಎಂದು ಅರಣ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇದೇ ಸಂದರ್ಭದಲ್ಲಿ ಅಂದಾಜು 50 ಕೋಟಿ ರೂ. ವೆಚ್ಚದಲ್ಲಿ ಸುಮಾರು 43 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿರುವ ಪ್ರಾಣಿ ಸಂಗ್ರಹಾಲಯ ಕಾಮಗಾರಿಯನ್ನು ಸ್ವತ ಸುತ್ತಾಡಿ ವೀಕ್ಷಿಸಿದ ಸಚಿವರು ಕಾಮಗಾರಿ ಪ್ರಗತಿ ಕುರಿತು ಡಿ.ಸಿ.ಎಫ್ ಸುಮಿತ್ ಪಾಟೀಲ ಅವರಿಂದ ಮಾಹಿತಿ ಪಡೆದರು. ಹುಲಿ, ಸಿಂಹ ಸೇರಿದಂತೆ ಬಹುತೇಕ ಪ್ರಾಣಿ, ಪಕ್ಷಿಗಳ ಸಂಗ್ರಹಾಲಯಕ್ಕೆ ಇಲ್ಲಿ ಪೂರಕವಾದ ವಾತಾವರಣ ನಿರ್ಮಿಸಲಾಗುತ್ತಿದೆ ಎಂದು ಸುಮಿತ್ ಪಾಟೀಲ ಅವರು ಸಚಿವರಿಗೆ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಎಸ್.ಪಿ. ಅಕ್ಷಯ್ ಹಾಕೈ, ಕಲಬುರಗಿ ಸರ್ಕಲ್ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಸುನೀಲ ಕುಮಾರ ಪನ್ವಾರ, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ, ಕಾಳಗಿ ತಹಶೀಲ್ದಾರ ಘಮಾವತಿ ರಾಠೋಡ ಇದ್ದರು.