ಕಲಬುರಗಿ: ಭವಾನಿ ತಾಯಿ ಜಾತ್ರಾ ಮಹೋತ್ಸವವು ೧೫ ದಿನಗಳ ಕಾಲ ಜರುಗಲಿರುವುದರಿಂದ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ತುಳಜಾಪೂರಕ್ಕೆ ಹೆಚ್ಚಿನ ರೈಲುಗಳ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಜೈ ಕನ್ನಡಿಗರ ಸೇನೆಯ ಕಾರ್ಯಕರ್ತರು ಮಂಗಳವಾರ ನಗರದ ರೈಲು ನಿಲ್ದಾಣದ ಮುಂದೆ ಪ್ರತಿಭಟನಾ ಪ್ರದರ್ಶನ ನಡೆಸಿದರು.
ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ದತ್ತು ಎಚ್. ಭಾಸಗಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನಗರ ಅಧ್ಯಕ್ಷ ರಾಮಾ ಪೂಜಾರಿ, ಸಾಗರ್ ಸಿಂಗೆ, ಅಮರ್, ನಾಗು, ಈಶು, ಪರಮೇಶ್ವರ್, ಸುನೀಲ್ ಪವಾರ್, ಶಿವರಾಜ್, ಆನಂದ್, ವಿಜಯಕುಮಾರ್, ನಿಂಗರಾಜ್, ವಿಠಲರಾವ್ ಸುಗಂಧಿ, ಪ್ರಶಾಂತ್ ಬಾಪುನರ್, ಶಮಶೀರ್, ಸಂಜೀವಕುಮಾರ್, ವಿಜು ಎಂ.ಜಿ., ಅಭಿಷೇಕ್, ರಾಕೇಶ್, ಪಿಂಟು, ಉಮೇಶ್, ಪ್ರವೀಣ್ ಮುಂತಾದವರು ಪಾಲ್ಗೊಂಡಿದ್ದರು.
ಪ್ರತಿಭಟನೆಕಾರರು ನಂತರ ರೈಲ್ವೆ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ೧೫ ದಿನಗಳ ಕಾಲ ಜರುಗುವ ಭವಾನಿ ಮಾತೆಯ ಜಾತ್ರಾ ಮಹೋತ್ಸವಕ್ಕೆ ದಿನನಿತ್ಯ ಸಾವಿರಾರು ಭಕ್ತರು ತುಳಜಾಪೂರಕ್ಕೆ ನಗರದ ರೈಲು ನಿಲ್ದಾಣದಿಂದ ಹೋಗುತ್ತಾರೆ. ಆದಾಗ್ಯೂ, ಅವರಿಗೆ ಸಮರ್ಪಕ ರೈಲಿನ ಸೌಲಭ್ಯ ದೊರೆಯುತ್ತಿಲ್ಲ. ಆದ್ದರಿಂದ ಹೆಚ್ಚಿನ ರೈಲುಗಳನ್ನು ಓಡಿಸುವುದು ಹಾಗೂ ಎಲ್ಲ ರೈಲುಗಳಿಗೆ ಹೆಚ್ಚುವರಿ ಭೋಗಿಗಳನ್ನು ಅಳವಡಿಸುವಂತೆ ಒತ್ತಾಯಿಸಿದರು.