ಕಲಬುರಗಿ: ಕಲ್ಯಾಣದ ಸಮಗ್ರ ಅಭಿವೃದ್ಧಿಗೆ ಒತ್ತಾಯಿಸಿ ಹೋರಾಟ ಸಮಿತಿಯಿಂದ ಗಾಂಧಿ ಪ್ರತಿಮೆಯ ಬಳಿ ಸತ್ಯಾಗ್ರಹ

0
96

ಕಲಬುರಗಿ: ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯಿಂದ ಕಲಬುರಗಿಯ ಮಹಾತ್ಮಾ ಗಾಂಧಿ ಪ್ರತಿಮೆ ಸ್ಥಳದಲ್ಲಿ ಪರಿಣಿತ ತಜ್ಘರ ಚಿಂತಕರ ಹಾಗೂ ಆಯಾ ಕ್ಷೇತ್ರದ ಗಣ್ಯರಿಂದ ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಗೆ ಒತ್ತಾಯಿಸಿ ಸತ್ಯಾಗ್ರಹ ನಡೆಸಲಾಯಿತು.

ಸಂವಿಧಾನದ 371ನೇ(ಜೆ) ಕಲಂ ಪರಿಣಾಮಕಾರಿ ಅನುಷ್ಠಾನಕ್ಕೆ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದ ರಚನಾತ್ಮಕ ಪ್ರಗತಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ, ರಾಯಚೂರಿನಲ್ಲಿ ಏಮ್ಸ್ ಆಸ್ಪತ್ರೆ ಸ್ಥಾಪನೆ, ಕಲಬುರ್ಗಿಯಲ್ಲಿ ರೈಲೈ ವಿಭಾಗೀಯ ಕಚೇರಿ ಸ್ಥಾಪನೆ, 371ನೇ(ಜೆ)ಕಲಂ ಕಂಡಿಕೆ 12(ಎ)ನಿಯಮದ ಪ್ರಕಾರ 371ನೇ(ಜೆ)ಕಲಂ ಅಡಿ ಬರುವ ಸಮಸ್ಯೆಗಳ ಮತ್ತು ಅಪೀಲುಗಳ ನಿವಾರಣೆಗೆ ಕಲಬುರ್ಗಿಯಲ್ಲಿ ಪ್ರತ್ಯೇಕ ಟ್ರಿಬ್ಯೂನಲ್ ಸ್ಥಾಪನೆ, 371ನೇ(ಜೆ) ಕಲಂ ಕಂಡಿಕೆ 13(ಬಿ)(ಎ) ಮತ್ತು ಕಂಡಿಕೆ 13(ಬಿ)(ಬಿ) ಪ್ರಕಾರ ನೇಮಕಾತಿಗಳಲ್ಲಿ ವಯೋ ರಿಯಾಯಿತಿ ಮತ್ತು ಕೃಪಾಂಕ ನೀಡಬೇಕು, 371ನೇ(ಜೆ) ಕಲಂ ನೇಮಕಾತಿಯ ಪ್ರಕ್ರಿಯೆಗೆ ಮತ್ತು ಆಯ್ಕೆ ಪಟ್ಟಿಗೆ ಪದೆ ಪದೆ ನ್ಯಾಯಾಲಯಕ್ಕೆ ಹೋಗುವ ಮುಖಾಂತರ ನಮ್ಮ ಹಕ್ಕಿನ ನೌಕರಿಗಳಿಗೆ ಮತ್ತು ಮುಂಬಡ್ತಿಗಳಿಗೆ ಧಕ್ಕೆ ತರುತ್ತಿರುವ ನಿಯಮಗಳ ದೋಷ ನಿವಾರಣೆ ಮಾಡುವದು ಕಾಲಮಿತಿಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡುವುದು, ಕಲ್ಯಾಣ ಕರ್ನಾಟಕ ಸ್ವಾಯತ್ತ ಅಭಿವೃದ್ಧಿ ಮಂಡಳಿಯಿಂದ ದೂರ ದೃಷ್ಟಿಕೋನದ ಐದು ವರ್ಷಗಳ ವೈಜ್ಞಾನಿಕ ಕ್ರಿಯಾ ಯೋಜನೆ ರೂಪಿಸಿ ಕಾಲಮಿತಿಯಲ್ಲಿ ಅಭಿವೃದ್ದಿಗೆ ಕ್ರಮ ಕೈಗೊಳ್ಳಬೇಕು, ನಂಜುಂಡಪ್ಪ ವರದಿಯ ಮಾನದಂಡದಂತೆ ಕಲ್ಯಾಣ ಕರ್ನಾಟಕದ ಒಂದು ಗ್ರಾಮ ಪಂಚಾಯಿತಿ ಘಟಕ ಮಾಡಿಕೊಂಡು ವರದಿ ರಚಿಸಬೇಕು, ಕಲ್ಯಾಣ ಪಥ ಯೋಜನೆಯಡಿ ಹೆದ್ದಾರಿಗಳು ಕಾಲಮಿತಿಯಲ್ಲಿ ಪೂರ್ಣಗೊಳಿಸಲು, ಕಲಬುರಗಿ ಎರಡನೆ ವರ್ತುಲ ರಸ್ತೆ ನಿರ್ಮಾಣ ಸೇರಿದಂತೆ ಕಲ್ಯಾಣದ ಸರ್ವಾಂಗೀಣ ಅಭಿವೃದ್ಧಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿಶೇಷ ಆದ್ಯತೆ ನೀಡಲು ಸತ್ಯಾಗ್ರಹದ ಮೂಲಕ ಬೇಡಿಕೆಗಳ ಪತ್ರ ಜಿಲ್ಲಾಧಿಕಾರಿಗಳ ಮುಖಾಂತರ ಪ್ರಧಾನ ಮಂತ್ರಿಗಳಿಗೆ ಮತ್ತು ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

Contact Your\'s Advertisement; 9902492681

ಸತ್ಯಾಗ್ರಹವನ್ನು ಉದ್ದೇಶಿಸಿ ವಿಶ್ರಾಂತ ಕುಲಪತಿಗಳಾದ ಪ್ರೊ. ಪ್ರತಾಪಸಿಂಗ್ ತಿವಾರಿ ಇವರು ಮಾತನಾಡಿ ಪಕ್ಷಾತೀತವಾಗಿ ಮತ್ತು ಜಾತ್ಯಾತೀತವಾಗಿ ಮತ್ತು ನಮ್ಮ ಅಸ್ಮಿತೆಯ ಪ್ರತೀಕವಾದ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ವತಿಯಿಂದ ನಡೆಯುತ್ತಿರುವ ಈ ಹೋರಾಟಕ್ಕೆ ಸರಕಾರ ಸಕರಾತ್ಮಕವಾಗಿ ಸ್ಪಂದಿಸಿ ನ್ಯಾಯಯುತವಾದ ಬೇಡಿಕೆಯನ್ನು ಈಡೇರಿಸಲು ಆಗ್ರಹಿಸಿದರು. ಪ್ರೊ. ಆರ್.ಕೆ. ಹುಡಗಿಯವರು ಮಾತನಾಡಿ ಈ ಹೋರಾಟ ಸರಕಾರಗಳ ವಿರುದ್ಧ ಅಲ್ಲ, ನಮ್ಮ ಹಕ್ಕಿನ ನ್ಯಾಯಯುತವಾದ ಬೇಡಿಕೆಗಳು ಮತ್ತು ಕಲ್ಯಾಣದ ನಿರುದ್ಯೋಗಿ ಯುವಕರ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಹಾಗೂ ನಮ್ಮ ಸರ್ವಾಂಗೀಣ ಅಭಿವೃದ್ಧಿಗೆ ನಡೆಯುತ್ತಿರುವ ಗಾಂಧಿ ಮಾರ್ಗದ ಸೈದ್ಧಾಂತಿಕ ಹಿನ್ನಲೆಯ ಹೋರಾಟವಾಗಿದೆ, ಇದಕ್ಕೆ ಸರಕಾರ ಗಂಭೀರವಾಗಿ ಪರಿಗಣಿಸಬೇಕೆಂದರು.

ಈ ಸಂದರ್ಭದಲ್ಲಿ ಪ್ರೊ. ಬಸವರಾಜ ಕುಮನೂರವರು 371ನೇ(ಜೆ) ಕಲಮಿನಡಿ ಇರುವ ಸವಲತ್ತುಗಳ ಬಗ್ಗೆ ವಿವರಿಸಿದರು. ಡಾ. ಗುರುಬಸಪ್ಪ, ಪ್ರೊ. ಶಂಕ್ರೆಪ್ಪ ಹತ್ತಿ, ಡಾ. ಮಾಜಿದ್ ದಾಗಿ, ಲಿಂಗರಾಜ ಸಿರಗಾಪೂರ, ಶಿವಲಿಂಗಪ್ಪ ಬಂಡಕ, ರೌಫ್ ಖಾದರಿ, ರಾಜೇ ಶಿವಶರಣ, ಸಾಲೋಮನ ದಿವಾಕರ ಸೇರಿದಂತೆ ಅನೇಕರು ಮಾತನಾಡಿದರು.

ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರು ಮಾತನಾಡಿ ಮಹಾತ್ಮಾ ಗಾಂಧಿಯ ಪ್ರತಿಮೆಯ ಸ್ಥಳದಲ್ಲಿ ನಡೆಸುತ್ತಿರುವ ಈ ಅಹಿಂಸಾ ಮಾರ್ಗದ ಮೌನ ಸತ್ಯಾಗ್ರಹದ ಬಗ್ಗೆ ಮೌಖಿಕವಾಗಿ ಪೋಲಿಸ್ ಇಲಾಖೆ ಕೇಳಿರುವಂತೆ ಮೌಖಿಕವಾಗಿಯೇ 16.7.24 ರಂದು ಮೌನ ಸತ್ಯಾಗ್ರಹ ನಡೆಸುವ ಬಗ್ಗೆ ದಿನಾಂಕ : 15.7.24 ರಂದೆ ತಿಳಿಸಲಾಗಿದೆ. ಆದರೆ ಪೋಲಿಸ್ ಇಲಾಖೆ ನೋಟೀಸ್ ನೀಡಿರುವುದು ಬಹಳ ನೋವು ತಂದಿದೆ.

ಸುಮಾರು 4 ದಶಕಗಳ ತಮ್ಮ ಹೋರಾಟದ ಜೀವನದಲ್ಲಿ ಈ ರೀತಿ ಆಗಿರುವದಿಲ್ಲ. ಪೋಲಿಸ್ ಇಲಾಖೆ ನಿಯಮಾವಳಿಯಂತೆ ತಮ್ಮ ಕರ್ತವ್ಯ ನಿರ್ವಹಿಸಿದಕ್ಕೆ ನಮ್ಮ ತಕರಾರಿಲ್ಲ ಮತ್ತು ವಿರೋಧವೂ ಇಲ್ಲ. ಆದರೆ, ಕಲ್ಯಾಣ ಕರ್ನಾಟಕದ ಅಸ್ತಿತ್ವ ಮತ್ತು ವಿದ್ಯಾರ್ಥಿ, ಯುವಕರ ಭವಿಷ್ಯದ ಈ ರಚನಾತ್ಮಕ ಹೋರಾಟಕ್ಕೆ ಹಿರಿಯ ಪರಿಣಿತಚಿಂತಕರು ಆಯಾ ಕ್ಷೇತ್ರದ ಗಣ್ಯರು ಭಾಗವಹಿಸಿ,ಜನ ಸಂದಣಿ ಇಲ್ಲದ ಪ್ರದೇಶದಲ್ಲಿ ಮತ್ತು ಯಾರಿಗೂ ತೊಂದರೆ ನೀಡದೆ ನಡೆದಿರುವ ಮೌನ ಸತ್ಯಾಗ್ರಹ ನಡೆಸುವ ಸಂದರ್ಭದಲ್ಲಿ ದಿಢೀರನೆ ನೋಟಿಸ ನೀಡಿರುವುದಕ್ಕೆ ಆಶ್ಚರ್ಯವಾಗುತ್ತಿದೆ. ಇಂತಹ ಘಟನೆಗಳಿಂದ ಭವಿಷ್ಯದಲ್ಲಿ ಅಹಿಂಸಾ ಮಾರ್ಗದಿಂದ ಗಾಂಧಿ ಮತ್ತು ಅಂಬೇಡ್ಕರ ಸಿದ್ಧಾಂತದ ನೆಲೆಗಟ್ಟಿನ ಮೇಲೆ ಹೋರಾಟ ಮಾಡುವವರಿಗೆ ನಿರುತ್ಸಾಹವಾಗುತ್ತದೆ ಎಂದು ನೋವನ್ನು ತೋಡಿಕೊಂಡರು.

ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆದ ಈ ಸತ್ಯಾಗ್ರಹದಲ್ಲಿ ಪ್ರೊ.ಬಸವರಾಜ ಗುಲಶೆಟ್ಟಿ, ಮುಖಂಡರಾದ ಮನೀಷ್ ಜಾಜು, ಸಾಬಿರ್ ಅಲಿ, ಬಾಬುರಾವ್ ಗಂವಾರ್, ಬಸವರಾಜ ಕಲ್ಯಾಣಿ, ಬಾಬುರಾವ್ ಮದನಕರ್, ಸೈಯದ್ ಅಥರ್ ಅಲಿ, ಶರಣಬಸಪ್ಪ ಕುರಿಕೋಟಾ, ಕಲ್ಯಾಣರಾವ ಪಾಟೀಲ, ಕೈಲಾಸನಾಥ ದೀಕ್ಷಿತ್, ಅಬ್ದುಲ್ ರಹೀಂ,ರಾಜು ಜೈನ, ಮುತ್ತಣ್ಣ ನಡಗೇರಿ, ಅಮಿತ್, ಪರಮೇಶ್ವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here