ಸಿಎಂ ಸಿದ್ದರಾಮಯ್ಯ ಅವರ ತೇಜೋವಧೆ ಖಂಡಿಸಿ 27ರಂದು ರಾಜ್ಯ ಭವನ ಚಲೋ

0
44

ಕಲಬುರಗಿ: ಸಿಎಂ ಸಿದ್ದರಾಮಯ್ಯ ಅವರ ತೇಜೋವಧೆ ಖಂಡಿಸಿ 27ರಂದು ರಾಜ್ಯ ಭವನ ಚಲೋ ಹಮ್ಮಿಕೊಳ್ಳಾಗಿದೆ ಎಂದು ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟ ಸಂಚಾಲಕರಾದ ಅನಂತ ನಾಯಕ್ ತಿಳಿಸಿದ್ದಾರೆ.

ಶನಿವಾರ ಕಲಬುರಗಿ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು ಕರ್ನಾಟಕದ ರಾಜ್ಯಪಾಲರಾದ ತಾವರೆ ಚಂದ ಗೆಹೊಟ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಪ್ರಾಸಿಕ್ಯೂಷನ್ನಿಗೆ ಅನುಮತಿ ಕೊಡುವಾಗ ಸಂವಿಧಾನದ ಮೂಲ ತತ್ವಗಳನ್ನು ಹಾಗೂ ಪ್ರಜಾಪ್ರಭುತ್ವದ ಆಶಯಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿದ್ದಾರೆ. ರಾಜಭವನವನ್ನು ಕೋಮುವಾದಿ ರಾಜಕಾರಣ ಮಾಡುತ್ತಿರುವ ಬಿಜೆಪಿ ಮತ್ತು ಪೂಡಲ್‌ವಾದಿ ರಾಜಕಾರಣ ಮಾಡುತ್ತಿರುವ ಜೆಡಿಎಸ್ ಪಕ್ಷಗಳ ಕಛೇರಿಯನ್ನಾಗಿ ಪರಿವರ್ತಿಸಿಕೊಂಡಿದ್ದಾರೆ ಎಂದು ದೂರಿದರು.

Contact Your\'s Advertisement; 9902492681

ರಾಜ್ಯಪಾಲರು ಬಿಜೆಪಿ-ಜೆಡಿಎಸ್ ಪಕ್ಷಗಳ ತಾಳಕ್ಕೆ ಕುಣಿಯುತ್ತಿರುವುದಷ್ಟೆ ಅಲ್ಲ ತೀವು ಪಕ್ಷಪಾತಿ ಧೋರಣೆಯನ್ನು ತಾಳಿದ್ದಾರೆ. ಜನರಿಂದ ಆಯ್ಕೆಯಾದ ಸರ್ಕಾರದ ಮುಖ್ಯಸ್ಥರಾಗಿರುವ ಮುಖ್ಯಮಂತ್ರಿಗಳ ವಿರುದ್ಧ ನಡೆಯುತ್ತಿರುವ ಪಿತೂರಿ- ಷಡ್ಯಂತ್ರಗಳ ಭಾಗವಾಗಿದ್ದಾರೆ. ಆ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನವನ್ನು ದುಷ್ಟರು, ಭ್ರಷ್ಟರೂ ಆದ ಬಿಜೆಪಿ-ಜೆಡಿಎಸ್ ಪಕ್ಷಗಳ ಹಿತಾಸಕ್ತಿಗೆ ಅಡ ಇಟ್ಟಿದ್ದಾರೆ ಎಂದು ತಿಳಿಸಿದರು.

ಕರ್ನಾಟಕ ಲೋಕಾಯುಕ್ತ, ಎಸ್‌ಐಟಿ ಮುಂತಾದ ತನಿಖಾ ಸಂಸ್ಥೆಗಳೂ ಪ್ರಾಥಮಿಕ ತನಿಖೆಯಲ್ಲಿ ತಪ್ಪಿತಸ್ಥರು ಎಂದು ಸಾಬೀತಾದ ಪ್ರಮುಖ ಕುಮಾರಸ್ವಾಮಿಯವರ ಗಣಿ ಹಗರಣ, ಶಶಿಕಲಾ ಜೊಲ್ಲೆಯವರ ಮೊಟ್ಟೆ ಹಗರಣ, ಜನಾರ್ಧನ ರೆಡ್ಡಿಯವರ ಭೀಕರ ಆಸ್ತಿ ಗಳಿಕೆ, ನಿರಾಣಿಯವರ ಭ್ರಷ್ಟಾಚಾರಗಳ ಕುರಿತು ಪ್ರಾಸಿಕ್ಯೂಷನ್ನಿಗೆ ಅನುಮತಿ ಕೊಡಿ ಎಂದು ರಾಜಭವನಕ್ಕೆ ಕೋರಿಕೆ ಸಲ್ಲಿಸಿ ವರ್ಷಗಳಾದರೂ ಈ ರಾಜ್ಯಪಾಲರು ಈ ಕೋರಿಕೆಗಳನ್ನು ಕಸದ ಬುಟ್ಟಿಗೆ ಎಸೆದು ಪಕ್ಷಪಾತ ಮಾಡಿದ್ದಾರೆ. ಇದುವರೆಗೆ ಒಬ್ಬರ ಮೇಲೂ ವಿಚಾರಣೆಗೆ ಅನುಮತಿ ನೀಡಿಲ್ಲ ಎಂದರು.

ಆದರೆ ಬ್ಲಾಕ್‌ ಮೇಲರುಗಳು, ಕ್ರಿಮಿನಲ್ ಕೇಸುಗಳು ಬಾಕಿ ಇರುವ ಆರೋಪಿಗಳು ಕೊಟ್ಟ ದೂರು-ಅರ್ಜಿಗಳನ್ನು ಸರಿಯಾಗಿ ಪರಿಶೀಲನೆ ಕೂಡ ಮಾಡದೆ ದೂರರ್ಜಿ ಸ್ವೀಕರಿಸಿದ ದಿನವೇ ಕೆಲವೇ ಗಂಟೆಗಳಲ್ಲಿ ಮುಖ್ಯಮಂತ್ರಿಗಳಿಗೆ ಕಾರಣ ಕೇಳುವ ನೋಟೀಸು ನೀಡಿರುತ್ತಾರೆ. ದೂರದಾರರ ಅರ್ಜಿ ಬರೀ ಸುಳ್ಳುಗಳಿಂದ ಕೂಡಿದೆ. ರಾಜ್ಯಪಾಲರು ನೀಡಿರುವ ನೋಟಿಸ್ ದೋಷಪೂರಿತ ಎಂದು ಇಡೀ ಸಚಿವ ಸಂಪುಟ ಚರ್ಚೆ ಮಾಡಿ ನೋಟೀಸನ್ನು ಕೂಡಲೆ ವಿತ್‌ ಡ್ರಾ ಮಾಡುವಂತೆ ನಿರ್ಣಯ ಮಾಡಿ ರಾಜಭವನಕ್ಕೆ ಕಳುಹಿಸಿ ಕೊಟ್ಟಿದ್ದಾರೆ. ಮುಖ್ಯಮಂತ್ರಿಗಳು ಸಹ ದೀರ್ಘವಾದ ಪ್ರತಿಕ್ರಿಯೆಯನ್ನು ಕಳುಹಿಸಿ ಕೊಟ್ಟಿದ್ದಾರೆ. ಇದ್ಯಾವುದನ್ನೂ ಪರಿಗಣಿಸದ ಈ ರಾಜ್ಯಪಾಲರು ಮುಖ್ಯಮಂತ್ರಿ ಶ್ರೀಯುತ ಸಿದ್ದರಾಮಯ್ಯನವರಿಗೆ ಕಿರುಕುಳ ನೀಡಬೇಕೆಂದು ತೀರ್ಮಾನಿಸಿದ್ದಾರೆ.

ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮುಡಾ ವಿಚಾರದಲ್ಲಿ ಒಂದು ಸೂಜಿಮೊನೆಯಷ್ಟೂ ತಪ್ಪು ಮಾಡಿಲ್ಲವೆಂದು ಇಡೀ ರಾಜ್ಯದ ಜನ ಹೇಳುತ್ತಿದ್ದಾರೆ ಹಾಗು ಸರ್ಕಾರಿ ದಾಖಲೆಗಳೂ ಹೇಳುತ್ತಿವೆ. ಆದರೆ ರಾಜಕೀಯ ದುರುದ್ದೇಶದಿಂದ ಬಿಜೆಪಿ-ಜೆಡಿಎಸ್‌ಗಳು ಸಿದ್ದರಾಮಯ್ಯನವರನ್ನು ತೇಜೋವಧೆ ಮಾಡುತ್ತಲೇ ಹೊರಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇತ್ತೀಚೆಗೆ ಪ್ರಕರಣದ ವಿಚಾರಣೆಯಾಗಿ ಹೈ ಕೋರ್ಟಿನ ನ್ಯಾಯಾಧೀಶರು, ಮುಖ್ಯಮಂತ್ರಿಗಳು ತಪ್ಪು ಮಾಡಿದ್ದಾರಾ? ಯಾವುದಾದರೂ ದಾಖಲೆಗಳು ಇವೆಯಾ? ಎಂದು ಕೇಳಿದಾಗ ವಿರೋಧಿಗಳ ಬಳಿ ಉತ್ತರವೇ ಇರಲಿಲ್ಲ.
ಉಚ್ಚ ನ್ಯಾಯಾಲಯವು ನೀಡಿರುವ ಮಧ್ಯಂತರ ತೀರ್ಪಿನಲ್ಲಿ ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್‌ಗೆ ಅನುಮತಿಯು “Impugned sanction” ಎಂದು ನಮೂದಿಸಲಾಗಿದೆ. ಅಷ್ಟರ ಮಟ್ಟಿಗೆ ರಾಜ್ಯಪಾಲರಿಗೆ ಮುಖಭಂಗವಾಗಿದೆ ಅಲ್ಲವೇ?ಬಿಜೆಪಿ-ಜೆಡಿಎಸ್ ಮತ್ತು ಕೋಮುವಾದಿ, ಜಾತಿವಾದಿ ದುರುಳರೆಲ್ಲಾ ಸೇರಿಕೊಂಡು ಶೋಷಿತ ಸಮುದಾಯಗಳ ಚೈತನ್ಯವನ್ನು ತುಳಿದು ಹಾಕಬೇಕೆಂದು ನಿರ್ಧಾರ ಮಾಡಿವೆ. ಇವರು ಬಡವರ ಪರ ಗ್ಯಾರಂಟಿ ಯೋಜನೆಗಳ ವಿರುದ್ಧ ಇದ್ದಾರೆ. ಆಪರೇಷನ್ ಕಮಲ ಮಾಡಲು ಪ್ರಯತ್ನಿಸಿ ಸೋತು ಹಿಂಬಾಗಿಲ ಮೂಲಕ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದ್ದಾರೆ. ಅದರ ಭಾಗವಾಗಿಯೆ ನಮ್ಮ ಮುಖ್ಯಮಂತ್ರಿಗಳ ಮೇಲೆ ದಾಳಿ ಪ್ರಾರಂಭಿಸಿದ್ದಾರೆ ಎಂದರು.

ಕೇಂದ್ರ ಸರ್ಕಾರ ರಾಜಭವನವನ್ನು ದುರ್ಬಳಕೆ ಮಾಡಿ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸವನ್ನು ಈ ತಕ್ಷಣವೇ ನಿಲ್ಲಿಸಬೇಕು. ಸಂವಿಧಾನ ಮತ್ತು ಒಕ್ಕೂಟ ತತ್ವದ ವಿರೋಧಿಯಾದ ರಾಜ್ಯಪಾಲರನ್ನು ಮೋದಿ ಸರ್ಕಾರ ಕೂಡಲೆ ವಾಪಸ್ಸು ಕರೆಸಿಕೊಳ್ಳಬೇಕು. ಸಿದ್ದರಾಮಯ್ಯ ರವರ ಪ್ರಾಸಿಕ್ಯೂಷನ್ ಅನುಮತಿ ಹಿಂಪಡೆಯಬೇಕು, ಪ್ರಜಾಪ್ರಭುತ್ವ ಒಕ್ಕೂಟದ ವ್ಯವಸ್ಥೆ ಮತ್ತು ರಾಜ್ಯ ಸರ್ಕಾರದ ಸಾರ್ವಭೌಮತೆಯನ್ನು ಸಂರಕ್ಷಿಸಬೇಕು. ಕನ್ನಡ ನಾಡಿನ ಘನತೆಯನ್ನು ಕಾಪಾಡಬೇಕೆಂದು ಆಗ್ರಹಿಸಿ ದಿನಾಂಕ:27-08-2024, ಬೆಳಿಗ್ಗೆ 11:00 ಗಂಟೆಗೆ ರಾಜ ಭವನ ಚಲೋ ಬೃಹತ್ ಪ್ರತಿಭಟನೆಯನ್ನು ಆಯೋಜಿಸಲಾಗಿದೆ. ಈ ಪ್ರತಿಭಟನಾ ಕಾರ್ಯಕ್ರಮದಲ್ಲಿ ನಾಡಿನ ಪ್ರಜ್ಞಾವಂತರು, ಪ್ರಗತಿಪರರು, ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಗಳ ಬಂಧುಗಳು, ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಾಗವಹಿಸಿ ಈ ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಮಹಾಂತೇಶ ಕೌಲಗಿ, ಸುನೀಲ ಮಾರುತಿ ಮಾನಪಡೆ, ಆದರ್ಶ ಯಲ್ಲಪ್ಪ, ನಾಗೇಂದ್ರ ಜವಳಿ, ಅರ್ಜುನ ಗೊಬ್ಬುರ, ಬಿ. ಹೆಚ್ ಮಂಜುನಾಥ್, ದಿನೇಶ ದೊಡ್ಡಮನಿ, ಶಿವರಾಜ ಸುಬೇದಾರ್, ಮೈಭೂಬ್ ಶಾಹ್ ದರವೇಶಿ ಹಲವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here