ಕಲಬುರಗಿ: ಪರಿಸರ ವ್ಯವಸ್ಥೆಯ ಸರಪಣಿ ಇದ್ದ ಹಾಗೆ. ಅದರಲ್ಲಿ ಒಂದು ಕೊಂಡಿ ಕಳಚಿದರೆ ಇಡಿ ಸರಪಣಿಯೇ ಬೇರ್ಪಡುತ್ತದೆ. ಹಾಗೆಯೆ ಪರಿಸರದಲ್ಲಿನ ಯಾವುದೇ ಜೀವಿಯ ಸಂತತಿ ನಾಶವಾದರೆ ಅದರ ಪರಿಣಾಮದ ಪರಿಸರದ ಮೇಲಾಗುತ್ತದೆ. ಆದರೆ ಮಾನವ ಪರಿಸರದ ಮೇಲೆ ದಬ್ಬಾಳಿಕೆ ಮಾಡಿ, ಅನೇಕ ವನ್ಯ ಜೀವಿಗಳನ್ನು ನಾಶ ಮಾಡುವ ಮೂಲಕ ಪರಿಸರದ ಅಸಮತೋಲನಕ್ಕೆ ಕಾರಣವಾಗಿದ್ದಾನೆ. ಆದ್ದರಿಂದ ವನ್ಯ ಜೀವಿಗಳ ಸಂರಕ್ಷಣೆ ತುಂಬಾ ಅವಶ್ಯಕವಾಗಿದೆಯೆಂದು ಉಪನ್ಯಾಸಕ, ಚಿಂತಕ ಪ್ರೊ.ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.
ಅವರು ನಗರದ ನೆಹರು ಗಂಜ್‌ನಲ್ಲಿರುವ ’ಶಾರದಾ ಪದವಿ ಕಾಲೇಜ್’ನಲ್ಲಿ, ಇಲ್ಲಿನ ’ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ’ವಿಶ್ವ ವನ್ಯಜೀವಿಗಳ ಸಂರಕ್ಷಣಾ ದಿನಾಚರಣೆ’ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಮಾನವ ತನ್ನ ಸ್ವಾರ್ಥಕ್ಕಾಗಿ ಅರಣ್ಯವನ್ನು ನಾಶಮಾಡಿ ಅಲ್ಲಿನ ಅನೇಕ ಜೀವಿಗಳನ್ನು ಬೇಟೆಯಾಡಿ ನಾಶಮಾಡುತ್ತಿದ್ದಾನೆ. ಇದರಿಂದ ಕೆಲವು ಸಂತತಿ ನಾಶಹೊಂದಿದ್ದು, ಮತ್ತೆ ಕೆಲವು ಅಳಿವುನಂಚಿನಲ್ಲಿವೆ. ಪ್ರಾಣಿ ಸಂಕುಲನದ ಉಳಿವು ಅಗತ. ವನ್ಯ ಜೀವಿ ಸಂರಕ್ಷಣೆ ಅಧ್ಯಯನದ ವಿಷಯವಾಗಬೇಕಾಗಿದೆ.
ಮಕ್ಕಳಿಗೆ ಶೈಕ್ಷಣಿಕ ವಿಷಯವಾಗಿ ವನ್ಯಜೀವಿ ಕುರಿತು ಪಾಠಗಳಿರಬೇಕು. ವನ್ಯ ಜೀವಿಗಳ ಚರ್ಮ,ಗರಿ,ಕೊಂಬು ಮುಂತಾದವುಗಳಿಂದ ಮಾಡಿದ ವಸ್ತುಗಳನ್ನು ಪ್ರೋತ್ಸಾಹಿಸಬಾರದು. ಅಭಯಾರಣ್ಯಗಳನ್ನು ನಿರ್ಮಿಸಬೇಕು. ಪಕ್ಷಿ ವೀಕ್ಷಣೆ, ವನ್ಯ ಜೀವಿಗಳಿಗೆ ಸಂಬಂಧಿಸಿದ ಅಂಚೆ ಚೀಟಿ ಸಂಗ್ರಹ ಮೊದಲಾದ ಹವ್ಯಾಸ ಬೆಳೆಸಬೇಕು. ಪ್ರಕೃತಿಯಲ್ಲಿನ ಒಲವು ಹೆಚ್ಚಿದಂತೆಲ್ಲ ಸಂರಕ್ಷಣೆ ತಾನಾಗಿಯೇ ಆಗುವದರ ಜೊತೆಗೆ, ಪರಿಸರವು ಹತೋಟಿಯಲ್ಲಿರುತ್ತದೆಯೆಂದು ಅನೇಕ ಸಲಹೆಗಳನ್ನು ನೀಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್.ಕೆ.ಕಲ್ಯಾಣರಾವ ಮಾತನಾಡಿ, ಕಳ್ಳದಂಧೆಗಾಗಿ ಹಿಂದೆ ಹೆಚ್ಚಾಗಿ ಬೇಟೆಯಾಗುತ್ತಿದ್ದದ್ದು ಹುಲಿ, ಚಿರತೆ, ನೀರು ನಾಯಿಗಳ ಚರ್ಮ ಮತ್ತು ಅವುಗಳ ಮೂಳೆ, ಹಲ್ಲು, ಮೀಸೆ, ಉಗುರುಗಳಿಗಾಗಿ. ಆದರೆ ಇತ್ತೀಚಿನ ಬೆಳವಣಿಗೆಯಲ್ಲಿ ವಿನಾಶದ ಅಂಚಿನಲ್ಲಿರುವ ವನ್ಯಜೀವಿ ಪ್ರಭೇದಗಳೊಂದಿಗೆ ಕೆಲವು ಸಾಮಾನ್ಯವಾಗಿ ಕಂಡು ಬರುವ ಪ್ರಭೇದಗಳನ್ನು ಸಹಾ ವಾಣಿಜ್ಯೋದ್ದೇಶಕ್ಕಾಗಿ ಬೇಟೆಯಾಡುತ್ತಿರುವುದು ಅಘಾತಕಾರಿ. ಗೂಬೆ, ಎರಡು ತಲೆ ಹಾವು, ಮೃದುಚಿಪ್ಪಿನ ಆಮೆ, ಚಿಪ್ಪು ಹಂದಿ, ಇನ್ನಿತರ ವನ್ಯಜೀವಿಗಳ ವ್ಯಾಪಕ ಮಾರಾಟ ದಂಧೆಯಿಂದಾಗಿ ಅಮೂಲ್ಯ ಪ್ರಾಣಿಗಳು ನಾಶವಾಗುತ್ತಿವೆ. ಕಠಿಣ ಕಾನೂನು ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆಯೆಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಬಸವರಾಜ, ಅಮರ, ಸಿದ್ಧಾರೂಡ ವಿ.ಬುಕ್ಕಾ, ಸಿದ್ರಾಮಪ್ಪ ಹುಲಿ, ದತ್ತಾ ನರೋಣಾ, ಕುಪ್ಪಣ್ಣ ಯರಬಾಗ್, ಮಹಾದೇವ ಕಟ್ಟಿಮನಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.