ಕಲಬುರಗಿ: ಜಗದ್ಗುರು ರೇವಣಸಿದ್ಧರು ಶ್ರೇಷ್ಠ ಶಿವನ ಭಕ್ತರು, ಶೈವ ಧರ್ಮದ ಪ್ರಮುಖ ನಾಯಕ ಅಲ್ಲಮ, ತಮ್ಮ ಪುತ್ರ ರುದ್ರಮುನಿಯ ಜೊತೆ ಕೊಲ್ಲಿಪಾಕ, ಮಾಸನೂರ, ಕಲ್ಯಾಣ, ಮಂಗಳವೇಡ, ಲಂಕೆ, ಸೊಲ್ಲಾಪುರ ಸುತ್ತಾಡಿ ಸಹಸ್ರಾರು ಜನರಿಗೆ ಶಿವದೀಕ್ಷೆ ನೀಡಿದ್ದರು ಎಂದು ಪತ್ರಕರ್ತ-ಲೇಖಕ ಡಾ. ಶಿವರಂಜನ ಸತ್ಯಂಪೇಟೆ ತಿಳಿಸಿದರು.
ನಗರದ ಬ್ರಹ್ಮಪುರದ ಧನಗರಗಲ್ಲಿಯ ಸೋಮವಾರ ಸಂಜೆ ರೇವಣಸಿದ್ಧೇಶ್ವರ ಕೋರಿ ಮಠ ತರುಣ ಸಂಘ ಹಾಗೂ ವಿದ್ಯಾವರ್ಧಕ ಸಂಘದ ವತಿಯಿಂದ ಹಾಲುಮತ ಧರ್ಮಗುರು ರೇವಣಸಿದ್ಧೇಶ್ವ ಪುರಾಣ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ವ್ಯೋಮಕಾಯ ಅಲ್ಲಮಪ್ರಭುಗಳ ಸಮಕಾಲೀನರು ಹಾಗೂ ಬಸವಣ್ಣನವರಿಗಿಂತ ಹಿರಿಯರಾಗಿದ್ದ ರೇವಣಸಿದ್ಧರು ಸಾಕ್ಷಾತ್ ಶೈವ ಪ್ರಭೆಯಾಗಿದ್ದರು ಎಂದು ಬಣ್ಣಿಸಿದರು.
ಕುರುಬ ಸಮುದಾಯದವರು ತಯಾರಿಸುವ ಕಂಬಳಿ ಕೂಡ ಕೇವಲ ವಸ್ತು ಅಲ್ಲ. ಕೆಲವೊಂದು ಸಂದರ್ಭದಲ್ಲಿ ಸರ್ವ ಜನಾಂಗದ ಸಾಂಸ್ಕೃತಿಕ ಆಚರಣೆಯ ಒಂದು ಭಾಗ. ಕುರುಬ ಅಂದರೆ ಜಾತಿಯಲ್ಲ. ಕಾಯಕದ ಸಂಕೇತ. ಶ್ರದ್ಧೆ ಶ್ರಮದ ಧ್ಯೋತಕ. ಕುರುಬರ ಇತಿಹಾಸವೆಂದರೆ ಮನು ಕುಲದ ಇತಿಹಾಸ ಎಂದು ಹೇಳಿದರು.
ಚವದಾಪುರಿ ಹಿರೇಮಠದ ಡಾ. ರಾಜಶೇಖರ ಶಿವಾಚಾರ್ಯರು ಆಶೀರ್ವಚನ ನೀಡಿ, ಹಾಲುಮತ ಮತ್ತು ವೀರಶೈವ ಮತ ಬೇರೆ ಅಲ್ಲ. ಭಕ್ತಾದಿಗಳು ಧಾರ್ಮಿಕ ಕಾರ್ಯಗಳಲ್ಲಿ ಎಲ್ಲರೂ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡು ಪುನೀತರಾಗಬೇಕೆಂದು ಕರೆ ನೀಡಿದರು.
ತಿಂಥಣಿ ಬ್ರಿಡ್ಜ್ ಕನಕ ಗುರುಪೀಠದ ದಾಸೋಹಮೂರ್ತಿ ಲಿಂಗ ಬೀರದೇವರು ಸಾನ್ನಿಧ್ಯ ವಹಿಸಿದ್ದರು. ಗುಬ್ಬೆವಾಡದ ಕನ್ಹಯ್ಯ ಮಹಾರಾಜರು ಪುರಾಣ ನಡೆಸಿಕೊಟ್ಟರು.
ಬೀರಲಿಂಗ ಭೀಮಶ್ಯಾ ರೋಜಾ, ಸಂಸ್ಕಾರ ಪ್ರತಿಷ್ಠಾನದ ವಿಠ್ಠಲ್ ಚಿಕಣಿ, ಕೋರಿಮಠ ತರುಣ ಸಂಘದ ಅಧ್ಯಕ್ಷ ರವಿಗೊಂಡ ಜಿ. ಕಟ್ಟಮನಿ, ಶಿವಯೋಗಿ ಬನಸೋಡೆ, ಜಗನ್ನಾಥ ನಗನೂರ ಇತರರು ಇದ್ದರು.