ಸುರಪುರ: ಕಳೆದ ಎರಡು ತಿಂಗಳ ಹಿಂದೆ ರಾಜ್ಯ ಮತ್ತು ಮಹಾರಾಷ್ಟ್ರದಲ್ಲಿ ಸುರಿದ ಮಹಾ ಮಳೆಯಿಂದ ಹಾನಿಗೊಳಗಾಗಿ ಮನೆ ಮತ್ತು ಜಮೀನುಗಳ ಕಳೆದುಕೊಂಡ ನೆರೆ ಸಂತ್ರಸ್ತರ ಭೇಟಿಗಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗಮಿಸಿ ನೆರೆ ಸಂತ್ರಸ್ತರಿಗೆ ಸಾಂತ್ವಾನ ಹೇಳುವ ಮೂಲಕ ಧೈರ್ಯ ತುಂಬಿದರು.
ತಾಲ್ಲೂಕಿನ ತಿಂಥಣಿ ಗ್ರಾಮಕ್ಕೆ ಆಗಮಿಸಿ ಮೌನೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ,ನಂತರ ಅಲ್ಲಿಂದ ದೇವಾಪುರ‍್ಕಕೆ ಆಗಮಿಸಿ ಜಡಿಶಾಂತಲಿಂಗೇಶ್ವರ ಮಠಕ್ಕೆ ಭೇಟಿ ನೀಡಿದರು.ನಂತರ ದೇವಾಪುರ ಹಳ್ಳದ ಸೇತುವೆ ಮೇಲೆ ನಿಂತು ನೆರೆಯಿಂದ ಹಾಣಿಗೊಳಗಾದ ಜಮೀನುಗಳ ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಮಠ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮುಖ್ಯಮಂತ್ರಿಗಳಿಗೆ ಸನ್ಮಾನಿಸಿ ಗೌರವಿಸಿದರು.ಇದೇ ಸಂದರ್ಭದಲ್ಲಿ ಅನೇಕ ಸಂಘ ಸಂಸ್ಥೆಗಳ ಮುಖಂಡರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿಗಳನ್ನು ಸಲ್ಲಿಸಿದರು.
ಇದಕ್ಕೂ ಮುನ್ನ ರಾಜನಕೊಳೂರ ಗ್ರಾಮದಲ್ಲಿ ಶೋಷಿತರ ಪರ ಹೋರಾಟದ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ ನೇತೃತ್ವದಲ್ಲಿ ಮುಖ್ಯಮಂತ್ರಿಗೆ ಭೇಟಿ ಮಾಡಿ,ಎಸ್.ಸಿ.ಪಿ ಮತ್ತು ಟಿ.ಎಸ್.ಪಿ ಯೋಜನೆಯಡಿ ವಿಶೇಷ ಅನುದಾನ ನೀಡಬೇಕು.ನೆರೆ ಸಂತ್ರಸ್ತರಿಗೆ ಪರಿಹಾರ ನೀಡಬೇಕು,ಕೆ.ಬಿ.ಜೆ.ಎನ್.ಎಲ್ ವ್ಯಾಪ್ತಿಯ ಕಾಲುವೆಗಳು ದುರಸ್ಥಿಗೊಳಿಸಬೇಕು,ತಾಲ್ಲೂಕಿನಲ್ಲಿಯ ಬಡವರಿಗೆ ಮನೆಗಳ ನೀಡುವಂತೆ ಮನವಿ ಸಲ್ಲಿಸಿದರು.
ತಿಂಥಣಿಯಲ್ಲಿ ಗಂಗಾಧರ ನಾಯಕ ನೇತೃತ್ವದಲ್ಲಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ,ತಿಂಥಣಿ ಮೌನೇಶ್ವರ ದೇವಸ್ಥಾನ ಪ್ರಾಧಿಕಾರ ರಚಿಸಬೇಕು,ತಿಂಥಣಿ ಗ್ರಾಮಕ್ಕೆ ಜೂನಿಯರ್ ಕಾಲೇಜು ನೀಡಬೇಕು ಮತ್ತು ವಸತಿ ನಿಲಯ ಹಾಗು ಪ್ರಾಥಮಿಕ ಆರೋಗ್ಯ ಕೇಂದ್ರ ನೀಡಲು ಮನವಿ ಸಲ್ಲಿಸಲಾಯಿತು.
ದೇವಾಪುರ ಗ್ರಾಮದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ಜಿಲ್ಲಾಧ್ಯಕ್ಷ ಯಲ್ಲಪ್ಪ ಚಿನ್ನಾಕಾರ ನೇತೃತ್ವದಲ್ಲಿ ಮನವಿ ಸಲ್ಲಿಸಿ, ನೆರೆ ಮತ್ತು ಬರಕ್ಕೆ ತುತ್ತಾದ ಜಮೀನುಗಳ ಪ್ರತಿ ಎಕರೆಗೆ ೨೫ ಸಾವಿರ ಪರಿಹಾರ ನೀಡಬೇಕು.ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಿಕೊಳ್ಳಲು ಐದು ಲಕ್ಷ ರೂಪಾಯಿ ನೀಡಬೇಕು.ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕುಗಳಲ್ಲಿನ ಸಂಪೂರ್ಣ ಸಾಲ ಮನ್ನಾ ಮಾಡಬೇಕು.ಬೂದಿಹಾಳ ಪೀರಾಪುರ ಏತ ನೀರಾವರಿ ಯೋಜನೆಗೆ ಹಣ ಬಿಡುಗಡೆ ಮಾಡಬೇಕು. ೨೦೧೬-೧೭ನೇ ಸಾಲಿನಲ್ಲಿಯ ಅನಲಿಮಿಟೆಡ್ ಯೊಜನೆಯಡಿ ಅರ್ಜಿ ಹಾಕಿರುವ ಎಸ್.ಎಸ್ಟಿ ಸಮುದಾಯಗಳಿಗೆ ಮನೆಗಳ ನೀಡಬೇಕು.ಉದ್ಯೋಗ ಖಾತ್ರಿ ಯೋಜನೆಯಡಿ ದಿನಕ್ಕೆ ಆರು ನೂರು ರೂಪಾಯಿಗಳ ಕೂಲಿ ಹಾಗು ವರ್ಷಕ್ಕೆ ಎರಡು ನೂರು ದಿನಗಳ ಉದ್ಯೋಗ ನೀಡುವಂತೆ ಮನವಿ ಮೂಲಕ ಒತ್ತಾಯಿಸಿದರು.ದೇವಾಪುರ ಗ್ರಾಮಸ್ಥರು ಮಹಾಕವಿ ಲಕ್ಷ್ಮೀಶನ ಜನ್ಮಸ್ಥಳ ಸುರಪುರ ತಾಲ್ಲೂಕಿನ ದೇವಾಪುರ ಎಂದು ಸರಕಾರ ದಿಂದ ಅಧೀಕೃತವಾಗಿ ಘೋಷಿಸುವಂತೆ ಮನವಿ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ಮಾದಿಗ ದಂಡೋರ ತಾಲ್ಲೂಕು ಘಟಕ ಹಾಗು ತಾಲ್ಲೂಕು ಮಾದಿಗ ಸಾಮೂಹಿಕ ಸಂಘಟನೆಗಳ ವೇದಿಕೆ ಸುರಪುರ ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ,ಜಿಲ್ಲಾಧಿಕಾರಿ ಕೂರ್ಮರಾವ್,ಸುರಪುರ ಶಾಸಕ ನರಸಿಂಹ ನಾಯಕ(ರಾಜುಗೌಡ),ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ,ಸುರಪುರ ತಹಸೀಲ್ದಾರ ಸುರೇಶ ಅಂಕಲಗಿ ಹಾಗು ಮಾಜಿ ಶಾಸಕರಾದ ಶಹಾಪುರದ ಗುರುಪಾಟೀಲ ಶಿರವಾಳ,ಗುರುಮಿಠಕಲ್‌ನ ಬಾಬುರಾವ್ ಚಿಂಚನಸೂರ ಹಾಗು ಮಾಜಿ ಜಿ.ಪಂ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ(ತಾತಾ),ಬಸನಗೌಡ ಹಳ್ಳಿಕೋಟಿ,ನರಸಿಂಹಕಾಂತ ಪಂಚಮಗಿರಿ ಸೇರಿದಂತೆ ಅನೇಕರಿದ್ದರು.