ಸುರಪುರ: ಆಗಷ್ಟ್ 15 ರಂದು ನಡೆದ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಹುಣಸಗಿ ತಾಲೂಕಿನ ಕನ್ನೆಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಧ್ವಜಾರೋಹಣ ಮಾಡುವ ಸಂದರ್ಭದಲ್ಲಿ ಶಿಕ್ಷಕರೊಬ್ಬರು ಕಾಲಲ್ಲಿ ಬೂಟು ಧರಿಸಿ ಧ್ವಜಾರೋಹಣ ಮಾಡಿದ್ದು,ಕೂಡಲೇ ಆ ಶಿಕ್ಷಕನನ್ನು ಅಮಾನತು ಮಾಡಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣದ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಒತ್ತಾಯಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿ,ಇಡೀ ದೇಶದ ಜನರು ಗೌರವ ದಿಂದ ಆಚರಿಸುವ ಹಬ್ಬಗಳೆಂದರೆ ಅದು ಸ್ವಾತಂತ್ರ್ಯ ದಿನಾಚರಣೆ ಹಾಗೂ ಜನೆವರಿ 26ರ ಗಣರಾಜ್ಯೋತ್ಸವ,ಈ ದಿನಗಳಂದೆ ಧ್ವಜಾರೋಹಣ ಮಾಡುವ ಸುವರ್ಣ ಸಂದರ್ಭ ಇರಲಿದೆ.ಇಂತಹ ಧ್ವಜಾರೋಹಣ ಸಮಯದಲ್ಲಿ ಶಿಕ್ಷಕರಾದವರು ಬೂಟು ಧರಿಸಿ ಧ್ವಜಾರೋಹಣ ಮಾಡುವ ಮೂಲಕ ಅಗೌರವ ತೋರಿದ್ದಾರೆ.ಆದ್ದರಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೂಡಲೇ ಆ ಶಿಕ್ಷಕನನ್ನು ಅಮಾನತು ಮಾಡಬೇಕು.ಇಲ್ಲವಾದಲ್ಲಿ ನಮ್ಮ ಸಂಘಟನೆಯಿಂದ ಯಾವುದೇ ಮುನ್ಸೂಚನೆ ನೀಡದೆ, ಬಿಇಓ ಕಚೇರಿಗೆ ಮುಳ್ಳು ಬೇಲಿ ಹಚ್ಚಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.