ಬೀದರ್: ಮಹಾತ್ಮಾ ಗಾಂಧಿ ಹುಟ್ಟಿ ಇಲ್ಲಿಗೆ ೧೫೦ ವರ್ಷಗಳಾಗಿದ್ದು, ಅವರ ಜನ್ಮ ದಿನಾಚರಣೆಯನ್ನು ದೇಶಾದ್ಯಂತ ಸತ್ಯ ಅಹಿಂಸೆ ಹಾಗೂ ತಯಾಗದ ರೀತಿಯಲ್ಲಿ ಆಚರಿಸುತ್ತಿದ್ದು, ಇನ್ನು ಮುಂದಾದರೂ ನಾವೆಲ್ಲರೂ ಗಾಂಧೀಜಿ ಹಾಗೂ ಇನ್ನೀತರ ಮಹಾತ್ಮರ ತತ್ವಾದರ್ಶನಗಳನ್ನು ಬೆಳೆಸುವ ಮೂಲಕ ಒಳ್ಳೆಯ ಕೆಲಸ ಮಾಡೋಣ ಎಂದು ಸಂಸದ ಭಗವಂತ್ ಖೂಬಾ ಅವರು ಇಲ್ಲಿ ಹೇಳಿದರು.
ಬಿದ್ರಿ ಹ್ಯಾಂಡಿಕ್ರಾಫ್ಟ್ ಮತ್ತು ಆಲ್ ಇಂಡಿಯಾ ಮುಸ್ಲಿಂ ಸಂಘರ್ಷ ಸಮಿತಿ ಸಂಯುಕ್ತಾಶ್ರಯದಲ್ಲಿ ನಗರದ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ೧೦ ಮಹನೀಯರಿಗೆ ಗಾಂಧಿ ರಾಷ್ಟ್ರೀಯ ಪ್ರಶಸ್ತಿ -೨೦೧೯ ವಿತರಿಸಿ ಮಾತನಾಡಿದ ಅವರು, ಜಿಲ್ಲೆಯು ಇತಿಹಾಸದಲ್ಲಿ ಅನೇಕ ಪ್ರಥಮಗಳಿಗೆ ಹೆಸರುವಾಸಿಯಾಗಿದ್ದು, ಈ ರಾಷ್ಟ್ರೀಯ ಗಾಂಧಿ ಅವಾರ್ಡ್ ಸಹ ನಮ್ಮ ಜಿಲ್ಲೆಯಲ್ಲಿಯೇ ಆರಂಭವಾಗಿದ್ದು, ಹೆಮ್ಮೆಯ ವಿಷಯವಾಗಿದೆ. ಮುಂಬರುವ ದಿನಗಳಲ್ಲಿ ಈ ಪ್ರಶಸ್ತಿಯ ಘನತೆಯು ಇನ್ನು ಎತ್ತರಕ್ಕೇರಲಿ ಎಂದು ಶುಭ ಹಾರೈಸಿದರು.
ರಾಷ್ಟ್ರೀಯ ಪ್ರೇರಣಾ ಭಾಷಣಕಾರ ಡಾ. ಲಕ್ಕಿ ಪೃಥ್ವಿರಾಜ್ ಅವರು ಗಾಂಧೀಜಿ ಕುರಿತು ಉಪನ್ಯಾಸ ನೀಡಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಪಂಡಿತರಾವ್ ಚಿದ್ರಿ ಅವರು ಮಾತನಾಡಿ, ಜಿಲ್ಲೆಯು ಮೊದಲಿನಿಂದಲೂ ಹಿಂದೂ-ಮುಸ್ಲಿಂ ಸಹೋದರರ ಐಕ್ಯತೆಯ ಜಿಲ್ಲೆಯೆಂದೇ ಹೆಸರುವಾಸಿಯಾಗಿದ್ದು, ಈ ಹೊಸ ಪ್ರಶಸ್ತಿಯಿಂದ ಈ ಸಮುದಾಯಗಳ ಐಕ್ಯತೆ ಇನ್ನಷ್ಟು ಗಟ್ಟಿಗೊಳ್ಳಲಿ ಎಂದರು.
ರಾಷ್ಟ್ರೀಯ ಭಾವೈಕ್ಯತೆಗಾಗಿ ಹಿರಿಯ ನ್ಯಾಯವಾದಿ ವಿನೋದಕುಮಾರ್ ಎಂ. ಮದಾಳೆ, ಶಾಂತಿ ಮತ್ತು ಸಹೋರತೆಗಾಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಗೀತಾ ಪಂಡಿತ್ ಚಿದ್ರಿ, ಸಾರ್ವಜನಿಕ ಸೇವೆಗಾಗಿ ಎನ್‌ಎನ್‌ಎಸ್‌ಕೆ ಮಾಜಿ ನಿರ್ದೇಶಕ ಎಂ.ಡಿ. ಕಲಿಮುದ್ದೀನ್ ಪಟೇಲ್, ಶಿಕ್ಷಣ ಕ್ಷೇತ್ರದ ಸೇವೆಗಾಗಿ ಜಾಸ್ಮಿನ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್ ಅಧ್ಯಕ್ಷ ಅಜೀಜ್‌ಖಾನ್, ಸಾಮಾಜಿಕ ಕ್ಷೇತ್ರದ ಸೇವೆಗಾಗಿ ಕರ್ನಾಟಕ ಕಾಲೇಜಿನ ನಿವೃತ್ತ ಉಪನ್ಯಾಸಕ ಸಿರಿಲ್ ಜಾರ್ಜ್ ಸ್ಯಾಮುವೆಲ್, ವೈದ್ಯಕೀಯ ಕ್ಷೇತ್ರದ ಸೇವೆಗಾಗಿ ಮೈಲೂರಿನ ಡಾ. ಎನ್.ಎ. ಭಾಲ್ಕಿಕರ್, ಪತ್ರಿಕಾ ಕ್ಷೇತ್ರದ ಸೇವೆಗಾಗಿ ಹೈದ್ರಾಬಾದ್ ಕರ್ನಾಟಕ ಉರ್ದು ದಿನಪತ್ರಿಕೆಯ ಸಂಪಾದಕ ಅಬ್ದುಲ್ ಅಲಿ, ಪುಸ್ತಕ ವ್ಯಾಪಾರದ ಸೇವೆಗಾಗಿ ಹಿಮಾಲಯ್ ಬುಕ್ ಸೆಂಟರ್‌ದ ಎಂ.ಡಿ. ಯುನುಸ್, ಸಮುದಾಯ ಸೇವೆಗಾಗಿ ಗಾಂಧಿನಗರದ ಎಂ.ಡಿ. ಜಾಫರ್ ಮೀರ್, ಸಾಮಾಜಿಕ ನ್ಯಾಯ ಸೇವೆಗಾಗಿ ಸಮಾಜ ಸಏವಕ ಸಂಜೀವ್ ಮೇತ್ರೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಚಿದ್ರಿ ಕಲೆಯಲ್ಲಿ ಕೆತ್ತಲ್ಪಟ್ಟ ಗಾಂಧಿಜಿಯವರ ನೆನಪಿನ ಕಾಣಿಕೆ, ಪ್ರಶಸ್ತಿ ಪತ್ರ, ಶಾಲು ಮಾಲೆಗಳೊಂದಿಗೆ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯ ಮೇಲೆ ಶಾಸಕ ರಹೀಂಖಾನ್, ಜಿಲ್ಲಾ ಪಂಚಾಯಿತಿ ಸದಸ್ಯ ವಿಜಯಕುಮಾರ್ ಗಾದಗಿ, ಸಾಮಾಜಿಕ ಹೋರಾಟಗಾರ ಸುಧಾಕರ್ ಎಕಂಬೇಕರ್, ಪ್ರಕಾಶ್ ಟೊಣ್ಣೆ, ಎಂ.ಡಿ. ಅಸದ್, ಎಂ.ಡಿ. ಜಾಫರ್ ಮುಂತಾದವರು ಉಪಸ್ಥಿತರಿದ್ದರು. ಎಐಎಂಎಸ್‌ಎಸ್ ಸಂಸ್ಥಾಪಕ ಅಧ್ಯಕ್ಷ ಡಾ. ಎ.ಕೆ. ಖಾದ್ರಿ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.