ಕಲಬುರಗಿ ; 2024-25ನೇ ಸಾಲಿನಲ್ಲಿ ಶಿಶು ಅಭಿವೃದ್ಧಿ ಯೋಜನೆ, ಕಲಬುರಗಿ (ನಗರ) ಯೋಜನೆಯ ವತಿಯಿಂದ ಶಿವಾಜಿ ನಗರ (ಬಿ) ವಲಯದ ಫಿಲ್ಟರ್ ಬೆಡ್ ಅಂಗನವಾಡಿ ಕೇಂದ್ರದಲ್ಲಿ ರಾಷ್ಟ್ರೀಯ ಪೋಷಣ ಮಾಸಾಚರಣೆ ಕಾರ್ಯಕ್ರಮವನ್ನು ಮಹಾನಗರ ಪಾಲಿಕೆ ಸದಸ್ಯೆ ಅರುಣಾದೇವಿ ಅವರು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪೋಷಣ ಅಭಿಯಾನ ಯೋಜನೆ ಕುರಿತು ಮಾತನಾಡಿದ ಕಲಬುರಗಿ (ನಗರ) ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭೀಮರಾಯ ಕಣ್ಣೂರ ಅವರು, 0-6 ವರ್ಷದ ಮಕ್ಕಳು, ಕಿಶೋರಿಯರು, ಗರ್ಭಿಣಿಯರು ಹಾಗೂ ಬಾಣಂತಿಯರ ಪೌಷ್ಠಿಕ ಮಟ್ಟವನ್ನು ಸುಧಾರಣೆ ಮಾಡುವುದು, ಕಡಿಮೆ ತೂಕದ ಮಕ್ಕಳ ಜನನ ಪ್ರಮಾಣವನ್ನು ನಿಯಂತ್ರಿಸುವುದು, ಬಾಣಂತಿ ಹಾಗೂ ಮಕ್ಕಳಲ್ಲಿ ರಕ್ತ
ಹೀನತೆಯನ್ನು ತಡೆಗಟ್ಟುವುದು ಈ ಪೋಷಣ ಅಭಿಯಾನದ ಮುಖ್ಯ ಗುರಿಯಾಗಿದೆ ಎಂದು ಹೇಳಿದರು.
ಇದೇ ವೇಳೆ ಸುತ್ತಮುತ್ತಲಿನ ಸಾರ್ವಜನಿಕರು, ಮಹಿಳೆಯರು ಹಾಗೂ ಸಣ್ಣ ಮಕ್ಕಳನ್ನು ಕಾರ್ಯಕ್ರಮಕ್ಕೆ ಕರೆದು ಅಪೌಷ್ಠಿಕ ನಿವಾರಣೆ ಸಂಬಂಧ ಜಾಗೃತಿ ಮೂಡಿಸಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ಬಡಾವಣೆ ಮುಖಂಡರಾದ ಚೆನ್ನವೀರ ಲಿಂಗನವಾಡಿ ಅವರು ಮಾತನಾಡಿ, ಕಲಬುರಗಿ ನಗರ ಯೋಜನೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ
ಪೋಷಣ ಮಾಸಾಚರಣೆ ಕಾರ್ಯಕ್ರಮವನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಸಂಧ್ಯಾರಾಣಿ ಪುರಾಣಿಕ, ಯೋಜನೆಯ ಹಿರಿಯ ಮೇಲ್ವಿಚಾರಕಿ ಗೀತಾ ಚೌವ್ಹಾಣ್, ಶಿವಾಜಿನಗರ (ಬಿ) ವಲಯ ಮೇಲ್ವಿಚಾರಕಿ ಜ್ಯೋತಿ ಹಾಗೂ ಯೋಜನೆಯ ವಲಯ ಮೇಲ್ವಿಚಾರಕಿಯರು, ಅಂಗನವಾಡಿ ಕಾರ್ಯಕರ್ತೆಯರು, ಫಲಾನುಭವಿಗಳಾದ ಮಕ್ಕಳು ಮತ್ತು ತಾಯಂದಿರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.