ಶಹಾಬಾದ: ನಗರಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿ ಗುರುವಾರ ನಗರದ ಎಸ್.ಯು.ಸಿ.ಐ(ಸಿ)ಸ್ಥಳೀಯ ಸಮಿತಿಯ ಕಾರ್ಯದರ್ಶಿ ಕಾಮ್ರೇಡ್ ಗಣಪತರಾವ.ಕೆ.ಮಾನೆ ಅವರ ನೇತೃತ್ವದ ನಿಯೋಗವು ನಗರಸಭೆಯ ನೂತನ ಅಧ್ಯಕ್ಷರಿಗೆ ಹಾಗೂ ಪೌರಾಯುಕ್ತರಿಗೆ ಭೇಟಿ ಮಾಡಿ ನಗರದ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಮನವಿಪತ್ರ ಸಲ್ಲಿಸಿದರು.
ಕಲಬುರಗಿ ಜಿಲ್ಲೆಯಲ್ಲಿಯೇ ಅತಿ ದೊಡ್ಡ ನಗರವಾದ ಶಹಾಬಾದನಲ್ಲಿ ಹೆಚ್ಚಾಗಿ ಕಾರ್ಮಿಕರು ಹಾಗೂ ಮಧ್ಯಮ ವರ್ಗದವರು ವಾಸಿಸುತ್ತಾರೆ. ಹೆಚ್ಚು ಜನಸಂಖ್ಯೆ ಹೊಂದಿರುವ ಕಾರಣ ಶಹಾಬಾದ ಪುರಸಭೆಯು ನಗರಸಭೆಯಾಗಿ ಮೂರು ದಶಕಗಳೆ ಕಳೆದಿವೆ. ಆದರೆ ಇಲ್ಲಿನ ಜನಸಾಮಾನ್ಯರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ನಗರಸಭೆಯು ಸಂಪೂರ್ಣವಾಗಿ ವಿಫಲವಾಗಿದೆ. ಆದ್ದರಿಂದ ಶಹಾಬಾದ ನಗರದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹಾರಿಸಬೇಕೆಂಬುದು ಒತ್ತಾಯವಾಗಿದೆ.
ಈ ಮೂಲಭೂತ ಬೇಡಿಕೆಗಳನ್ನು ಆದಷ್ಟು ಬೇಗನೆ ಈಡೇರಿಸದಿದ್ದರೆ ಅನಿವಾರ್ಯವಾಗಿ ಜನರನ್ನು ಸಂಘಟಿಸಿ ನಗರಸಭೆಯ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರಲ್ಲದೇ ನಗರದ ಬಸವೇಶ್ವರ ವೃತ್ತದಿಂದ ನೆಹರುಚೌಕ್ ವರೆಗೆ ಹಾಗೂ ವಿ.ಪಿ ಚೌಕ್ ದಿಂದರೈಲ್ವೆ ಸ್ಟೇಷನ್ ವರೆಗಿನ ಮುಖ್ಯರಸ್ತೆ ಹಾಗೂ ಎರಡು ಬದಿಗಳಲ್ಲಿ ಚರಂಡಿಗಳನ್ನು ನಿರ್ಮಿಸಬೇಕು. ನಗರದಎಲ್ಲಾ ಬಡಾವಣೆಗಳಲ್ಲಿ ವ್ಯವಸ್ಥಿತವಾದ ರಸ್ತೆ ಹಾಗೂ ಒಳಚರಂಡಿಗಳನ್ನು ಈ ಕೂಡಲೇ ನಿರ್ಮಿಸಬೇಕು.ಜನರಿಗೆ ನಿರಂತರವಾಗಿ ಶುದ್ಧವಾದ ಕುಡಿಯುವ ನೀರನ್ನು ಉಚಿತವಾಗಿ ಒದಗಿಸಬೇಕು.
ನಗರದ ಪ್ರಮುಖರಸ್ತೆ ಹಾಗೂ ಬಡಾವಣೆಗಳಲ್ಲಿ ಸಮರ್ಪಕವಾದ ಬೀದಿದೀಪಗಳನ್ನು ಅಳವಡಿಸಬೇಕು. ಸಾರ್ವಜನಿಕರಿಗೆ ಪ್ರಮುಖ ಸ್ಥಳಗಳಲ್ಲಿ ಶೌಚಾಲಯ ಹಾಗೂ ಮೂತ್ರಾಲಯಗಳನ್ನು ನಿರ್ಮಿಸಬೇಕು. ನಗರದ ಎಲ್ಲಾ ಬಡಾವಣೆಗಳಲ್ಲಿ ಉದ್ಯಾನವನದ ಸ್ಥಳಗಳನ್ನು ಗುರುತಿಸಿ, ಉದ್ಯಾನವನಗಳನ್ನು ನಿರ್ಮಿಸಬೇಕು.ನಗರದ ಎಲ್ಲಾ ಮುಖ್ಯ ರಸ್ತೆಗಳಲ್ಲಿ ಪಾದಚಾರಿ ರಸ್ತೆಗಳನ್ನು ನಿರ್ಮಿಸಬೇಕು.
ಬೀದಿನಾಯಿಗಳ ಹಾವಳಿಯನ್ನು ತಪ್ಪಿಸಲು ಶಾಶ್ವತ ಪರಿಹಾರವನ್ನು ಕಲ್ಪಿಸಬೇಕು.ವ್ಯವಸ್ಥಿತವಾದ ಆಧುನಿಕ ಡಿಜಿಟಲ್ ಗ್ರಂಥಾಲಯವನ್ನು ನಿರ್ಮಿಸಬೇಕು.ನಗರದಲ್ಲಿ ಬಸ್ ನಿಲುಗಡೆ ಇರುವ ಸ್ಥಳಗಳಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ತಂಗುದಾಣಗಳನ್ನು ನಿರ್ಮಿಸಬೇಕು.ಕಳ್ಳತನವನ್ನು ತಡೆಗಟ್ಟಲು ನಗರದಾದ್ಯಂತ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಬೇಕೆಂದು ಆಗ್ರಹಿಸಿದರು.
ನಿಯೋಗದಲ್ಲಿ ಕಾಮ್ರೇಡ್ ರಾಘವೇಂದ್ರ.ಎಮ್.ಜಿ. ಗುಂಡಮ್ಮ ಮಡಿವಾಳ, ರಾಜೇಂದ್ರ ಆತ್ನೂರ್, ನೀಲಕಂಠ ಹುಲಿ, ಅಂಬಿಕಾ ಗುರಜಾಲಕರ್, ಸಿದ್ದು ಚೌಧರಿ, ಬಾಬು ಪವಾರ, ತಿಮ್ಮಣ್ಣ ಮಾನೆ ಮುಂತಾದವರು ಉಪಸ್ಥಿತರಿದ್ದರು.