ಕಾಳಗಿ : ಕಲ್ಯಾಣ ಕರ್ನಾಟಕದ ತಿರುಪತಿ ಎಂದೇ ಪ್ರಸಿದ್ಧಿ ಪಡೆದಿರುವ ಸುವರ್ಣ ಗಿರಿ ಕಾಳಗಿ ತಾಲೂಕಿನ ಸೂಗೂರ (ಕೆ ) ಗ್ರಾಮದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇಂದಿನಿಂದ ಅಕ್ಟೋಬರ್ 15ರವರೆಗೆ 9 ದಿನಗಳವರೆಗೆ ನಡೆಯುವ ನವರಾತ್ರಿ ಬ್ರಹ್ಮೋತ್ಸವ ಅದ್ದೂರಿಯಾಗಿ ನಡೆಯುತ್ತದೆ ಎಂದು ದೇವಸ್ಥಾನದ ಪ್ರಧಾನ ಸಂಚಾಲಕರಾದ ಶ್ರೀ ಸನ್ನತದಾಸ ಮಹಾರಾಜರು ತಿಳಿಸಿದರು.
ನವರಾತ್ರಿ ಬ್ರಹ್ಮೋತ್ಸವದ ನಿಮಿತ್ಯವಾಗಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇಂದಿನಿಂದ ಅಕ್ಟೋಬರ್ 15ರವರೆಗೆ ಪ್ರತಿನಿತ್ಯ ಅಭಿಷೇಕ,ಹೋಮ,ಹವನ, ಶಯನ ಸೇವೆ, ನಡೆಯುತ್ತದೆ. ಯೋಗಶಾಲಾ ಪ್ರವೇಶ, ಕಲಶ ಸ್ಥಾಪನೆ, ಅಗ್ನಿ ಪ್ರತಿಷ್ಠಾಪನೆ ಧ್ವಜಾರೋಹಣ, ಅಂಕುರಾರ್ಪಣ, ವಾಸ್ತು ಪೂಜೆ, ಶ್ರೀನಿವಾಸ ಕಲ್ಯಾಣೋತ್ಸವ, ಬನ್ನಿ ಪೂಜೆ, ಪುಷ್ಪೋತ್ಸವ, ತುಳಸಿ ಅರ್ಚನೆ, ಪಲ್ಲಕ್ಕಿ ಸೇವೆ,ಚಕ್ರ ಸ್ನಾನ ಹೀಗೆ ಪ್ರತಿನಿತ್ಯವು ಒಂದೊಂದು ವಿಶಿಷ್ಟ ಆಚರಣೆಗಳು ನಡೆಯಲಿವೆ.
ಗರುಡ ವಾಹನ, ಶೇಷ ವಾಹನ, ಹನುಮ ವಾಹನ,ಸಿಂಹ ವಾಹನ, ಸೂರ್ಯಪ್ರಭ ವಾಹನ, ಚಂದ್ರ ಪ್ರಭು ವಾಹನ, ಹಂಸ ವಾಹನ ಗಳನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಿ ಪ್ರತಿನಿತ್ಯ ಒಂದೊಂದು ವಾಹನಗಳಲ್ಲಿ ವೆಂಕಟೇಶ್ವರ ಸ್ವಾಮಿ ಉತ್ಸವ ಮೂರ್ತಿಯ ನಿಟ್ಟು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ.
ಈ ವೈಭವದ ಕಾರ್ಯಕ್ರಮದ ನೇತೃತ್ವವನ್ನು ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಸೂಗುರ(ಕೆ ) ವೆಂಕಟೇಶ್ವರ ದೇವಸ್ಥಾನದ ಸಂಚಾಲಕರಾದ ಶ್ರೀ ಸನ್ನತದಾಸ ಮಹಾರಾಜರು ವಹಿಸಿಕೊಳ್ಳಲಿದ್ದು, ಶ್ರೀ ಮಹಾಂತ ಓಂ ಪ್ರಕಾಶ್ ದಾಸ್ ಮಹಾರಾಜ ಶ್ರೀ ಸ್ವಾಮಿ ಹಾಥಿರಾಮ್ ಜಿ ಮಠ ತಿರುಪತಿ ಹಾಗೂ ಉಪ ಜಿಲ್ಲಾಧಿಕಾರಿಗಳಾದ ಕೆ. ಎಸ್. ರಾಮರಾವ್ ಆಗಮಿಸಲಿದ್ದಾರೆಂದು ತಿಳಿಸಿದ್ದಾರೆ.
ಈ ವರ್ಷ ವಿಶೇಷವಾಗಿ ಕುಸ್ತಿ ಸ್ಪರ್ಧೆ ಏರ್ಪಡಿಸಲಾಗುತ್ತಿದ್ದು ಕುಸ್ತಿ ಸ್ಪರ್ಧೆಯಲ್ಲಿ ಅಂತಿಮ ವಿಜೇತ ರಿಗೆ ವಿಶೇಷವಾದಂತಹ ಬೆಳ್ಳಿಯ ಚಕ್ರವನ್ನು ಬಹುಮಾನವಾಗಿ ವಿತರಿಸಲಾಗುವುದೆಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಪರಮೇಶ್ವರ್ ಪಾಟೀಲ್, ಅಶೋಕ್ ರಮಣಿ, ಹನುಮಂತರಾವ್ ಮುಚ್ಚೆಟ್ಟಿ, ಅಣ್ಣಾರ ಗಡ್ಡಿ, ನೂರಂದಪ್ಪ ಭದ್ರ, ಶಿವರಾಜ್ ಪೂಜಾರಿ, ಸಿದ್ದಯ್ಯ ಗುತ್ತೇದಾರ್, ಶರಣು ಗಾರಂಪಳ್ಳಿ, ಜಗಪ್ಪ ಕೊಳ್ಳಿ, ನಾಗೇಂದ್ರ ಅರಣಕಲ್,ಗ್ರಾಮ ಪಂ ಶಿವು ಕಲಶೆಟ್ಟಿ, ದಾವೂದ್ ಮುಜಾಫರ, ಅನಿಲ್ ಚೌವ್ಹಾಣ ಗ್ರಾಮದ ಅನೇಕ ಮುಖಂಡರು ಇದ್ದರು.
ಜಿಲ್ಲೆ ಕಾಳಗಿ ತಾಲೂಕಿನ ಸೂಗೂರ(ಕೆ ) ಗ್ರಾಮದಲ್ಲಿ ಗುಡ್ಡದ ಮೇಲೊಂದು ವಿಸ್ಮಯ ಭತ್ತದ ಬೆಳೆ 200 ಅಡಿ ಉದ್ದ 70 ಅಡಿ ಕ್ಷೇತ್ರದಲ್ಲಿ ಬೀಜ ಬಿತ್ತದೆ ಮತ್ತು ಉಳಿಮೆ ಮಾಡದೆ ವಿಸ್ಮಯ ರೀತಿಯಲ್ಲಿ ಭತ್ತ ಬೆಳೆಯುತ್ತದೆ. ಪೂರ್ವಜರು ಹೇಳುವ ಪ್ರಕಾರ ಈ ಸ್ಥಳದಲ್ಲಿ ಋಷಿ ಮುನಿಗಳು ಅನುಷ್ಠಾನ ಮಾಡಿ ಅವರ ಭೋಜನಕ್ಕಾಗಿ ಬೆಳೆದ ಬೆಳೆ ಎಂದು ಹೇಳಲಾಗುತ್ತದೆ.
ನಂತರ ಎಲ್ಲಾ ಸಾಧು ಸಂತರು ಸೇವಿಸುತ್ತಿದ್ದರೆಂಬ ಪ್ರತಿತಿಯಿದೆ. ಈ ಭತ್ತದ ಬೆಳೆಯ ವಿಶೇಷವೆಂದರೆ ಈ ಬೀಜವನ್ನು ಎಲ್ಲೇ ಬಿತ್ತಿದರೂ ನಾಟುವುದಿಲ್ಲ ಈ ಬೆಳೆಯನ್ನು ವೀಕ್ಷಿಸಬೇಕಾದರೆ ಜೂನ್ ತಿಂಗಳಿಂದ ಅಕ್ಟೋಬರ್ ತಿಂಗಳವರೆಗೆ ಮಾತ್ರ ಸಾಧ್ಯ.