ಕಲಬುರಗಿ: ಬಿಸಿಯೂಟ ನೌಕರರ ವೇತನ ಮತ್ತು ಸಾದಿಲ್ವಾರು ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ನೇತೃತ್ವದಲ್ಲಿ ಬಿಸಿಯೂಟ ನೌಕರರು ಗುರುವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ ಮುಂದೆ ಬೃಹತ್ ಪ್ರತಿಭಟನಾ ಧರಣಿ ಹಮ್ಮಿಕೊಂಡಿದ್ದರು.
ಸಂಘದ ಜಿಲ್ಲಾಧ್ಯಕ್ಷೆ ಶ್ರೀಮತಿ ರೇಖಾ ಸುತಾರ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಗೌರಮ್ಮ ಪಾಟೀಲ್, ವಿಜಯಲಕ್ಷ್ಮೀ ಹಿರೇಮಠ್, ಸಿದ್ದಮ್ಮ ಭೈರಾಮಡಗಿ, ಸಂಗೀತಾ ಗುತ್ತೇದಾರ್, ರೇಖಾ ರಂಗನ್, ಸುಲೋಚನಾ ಸನಬಾಳ್, ನಾಗಮ್ಮ ಜೇವರ್ಗಿ, ಸಾವಿತ್ರಿ ಚಿಂಚೋಳಿ, ಸಂಪತ್‌ಕುಮಾರಿ ಶಹಾಬಾದ್, ಕವಿತಾ, ಸಿದ್ದಮ್ಮ ಸೇಡಂ ಸೇರಿದಂತೆ ಸಾವಿರಾರು ನೌಕರರು ಪಾಲ್ಗೊಂಡಿದ್ದರು.
ಪ್ರತಿಭಟನೆಕಾರರು ನಂತರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆಯ ಸಚಿವರಿಗೆ ಮನವಿ ಪತ್ರ ಸಲ್ಲಿಸಿ, ಮಾನವ ಸಂಪನ್ಮೂಲ ಇಲಾಖೆಯಲ್ಲಿ ಅಕ್ಷರ ದಾಸೋಹ ಯೋಜನೆ ಕಳೆದ ೨೦೦೧-೨೦೦೨ರಿಂದ ಆರಂಭಗೊಂಡಿದೆ. ಸರ್ಕಾರಗಳು ಅಕ್ಕಿ ಅನ್ನ ಆಗಬೇಕು, ಅನ್ನ ಬೇಯಿಸಲು ತಗಲುವ ವೆಚ್ಚ ಮಾತ್ರ ನಮಗೆ ಸಂಬಂಧಿಸಿದ್ದು. ಅದರಲ್ಲಿರುವ ಉದ್ಯೋಗಿಗಳು ಲೆಕ್ಕಕ್ಕಿಲ್ಲ ಎನ್ನುವ ರೀತಿಯಲ್ಲಿ ಪರಿಗಣಿಸುತ್ತಿವೆ. ಕಳೆದ ೧೭ ವರ್ಷಗಳಿಂದಲೂ ನೌಕರರಿಗೆ ಸೂಕ್ತ ವೇತನ, ಪಿಂಚಣಿ ಹಾಗೂ ಇತರೆ ಯಾವುದೇ ಸೌಲಭ್ಯಗಳನ್ನು ಕೊಡದೇ ವಂಚಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಕ್ಕಳ ಅಪೌಷ್ಠಿಕತೆಯನ್ನು ಹೋಗಲಾಡಿಸಲು ದುಡಿಯುವ ಮಹಿಳೆಯರಿಗೆ ಕೇವಲ ೨೬೦೦ರೂ.ಗಳಿಂದ ೨೭೦೦ರೂ.ಗಳ ತಿಂಗಳ ವೇತನ ಬಿಟ್ಟರೆ ಬೇರೆ ಯಾವುದೇ ಸೌಲತ್ತುಗಳಿಲ್ಲ. ಈಗಾಗಲೇ ಬಡ ಮಹಿಳೆಯರು ನಿವೃತ್ತಿಯ ಅಂಚಿನಲ್ಲಿದ್ದಾರೆ. ರಾಜ್ಯದಲ್ಲಿ ೧,೧೮೦೦೦ ಮಹಿಳೆಯರು ಯೋಜನೆಯಡಿ ದುಡಿಯುತ್ತಿದ್ದಾರೆ. ಪಿಂಚಣಿ ಕುರಿತು ಮೌಖಿಕ ಒಪ್ಪಿಗೆ ಮಾತ್ರ ಸಿಕ್ಕಿದೆ. ಅದು ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ ಎಂದು ಅವರು ಆರೋಪಿಸಿದರು.
ಪ್ರಧಾನಮಂತ್ರಿ ಶ್ರಮಯೋಗಿ ಮಾನ್‌ಧನ್ ಪಿಂಚಣಿ ಯೋಜನೆಗೆ ಶಾಲಾ ಬಿಸಿಯೂಟ ನೌಕರರನ್ನು ಒಳಪಡಿಸುವ ಆದೇಶವನ್ನು ಹೊರಡಿಸಲಾಗಿದೆ. ಆದೇಶದಿಂದ ನೌಕರರಿಗೆ ದೊಡ್ಡ ಆಘಾತವಾಗಿದೆ. ಕೂಡಲೇ ಆದೇಶವನ್ನು ಹಿಂಪಡೆಯಬೇಕು ಎಂದು ಅವರು ಒತ್ತಾಯಿಸಿದರು.
ಕಳೆದ ಜನವರಿಯಿಂದ ಸೆಪ್ಟೆಂಬರ್‌ವರೆಗೆ ಇರುವ ವೇತನ ಹಾಗೂ ಕಳೆದ ಫೆಬ್ರವರಿಯಿಂದ ಸೆಪ್ಟೆಂಬರ್‌ವರೆಗೆ ಬಾಕಿ ಇರುವ ಸಾದಿಲ್ವಾರು ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದರು.