ಕಲಬುರಗಿ: ತೇವಾಂಶದ ಕೊರತೆಯಿಂದ ತೊಗರಿ ಬೆಳೆ ಒಣಗುತ್ತಿರುವುದರಿಂದ ನಷ್ಠ ಅನುಭವಿಸುತ್ತಿರುವ ಜಿಲ್ಲೆಯ ರೈತರಿಗೆ ವಿಶೇಷ ಪ್ಯಾಕೆಜ್ ಮೂಲಕ ಪರಿಹಾರ ಒದಗಿಸುವಂತೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸಲ್ಲಿಸಿದ ಮನವಿಗೆ ಮುಖ್ಯಮಂತ್ರಿಗಳು ಸ್ಪಂದಿಸಿದ್ದು, ಪರಿಶೀಲಿಸಿ ಕಡತ ಮಂಡಿಸುವಂತೆ ಷರಾ ಬರೆದು ಕೃಷಿ ಸಚಿವರಿಗೆ ಸೂಚಿಸಿದ್ದಾರೆ.
ರಾಜ್ಯದ ತೊಗರಿ ಕಣಜ ಎಂದು ಪ್ರಖ್ಯಾತಿ ಪಡೆದಿರುವ ಕಲಬುರಗಿ ಜಿಲ್ಲೆಯಲ್ಲಿ 2024-25 ಸಾಲಿನ ಮುಂಗಾರು ಹಂಗಾಮಿ ನಲ್ಲಿ ಮಳೆ ಬಂದಿದ್ದರಿಂದ ಒಳ್ಳೆಯ ಇಳುವರಿ ನಿರೀಕ್ಷಿಸಲಾಗಿತ್ತು. ಆದರೆ, ನವೆಂಬರ್ ತಿಂಗಳಿನಲ್ಲಿ ಶೇ 71 ರಷ್ಟು ಮಳೆ ಕೊರತೆಯಾದ ಹಿನ್ನೆಲೆಯಲ್ಲಿ ಭೂಮಿಯಲ್ಲಿ ತೇವಾಂಶದ ಕೊರತೆ ಕಂಡುಬಂದಿತ್ತು. ಆದ್ದರಿಂದ ಅಷ್ಟೊತ್ತಿಗಾಗಲೇ ಕಾಯಿಕಟ್ಟುವ ಹಾಗೂ ಕಾಳು ಬಲಿಯುವ ಹಂತದಲ್ಲಿದ್ದ ತೊಗರಿ ಬೆಳೆಒಣಗಲಾರಂಭಿಸಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ ಜಿಲ್ಲೆಯಲ್ಲಿ 80,000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಒಣಗುತ್ತಿರುವುದು ಕಂಡು ಬಂದಿರುತ್ತದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಸಂಬಂಧಿಸಿದ ಕೃಷಿ ಇಲಾಖೆಯ ಅಧಿಕಾರಿಗಳು ತೊಗರಿ ಬೆಳೆ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿರುತ್ತಾರೆ. ಅಲ್ಲದೇ, ಕೃಷಿ ಹಾಗೂ ಕಂದಾಯ ಇಲಾಖೆಗಳಿಂದ ಜಂಟಿ ಬೆಳೆ ಹಾನಿ ಸಮೀಕ್ಷೆ ನಡೆಸಲಾಗುತ್ತಿದ್ದು, ಪ್ರಗತಿಯಲ್ಲಿದೆ.
ತೊಗರಿ ಬೆಳೆ ಹಾನಿಗೆ ಸಂಬಂಧಿಸಿದಂತೆ, ಕಲಬುರಗಿ ಯ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳೊಂದಿಗೆ ಕೃಷಿ ಇಲಾಖೆಯ ಅಧಿಕಾರಿಗಳು ಕ್ಷೇತ್ರ ಭೇಟಿ ನೀಡಿದ್ದು, ಪ್ರಾಥಮಿಕ ವರದಿಯಂತೆ ತೇವಾಂಶದ ಕೊರತೆಯಿಂದಾಗಿ ‘ಮ್ಯಾಕ್ರೋಫೋಮಿನಾ ಫೆಜಿಯೊಲೈ’ ಶಿಲೀಂದ್ರದಿಂದ ಬರುವ ಒಣಬೇರು ಕೊಳೆ ರೋಗ ಹಾಗೂ ‘ ಫೈಟೋವ್ಹೋರಾ ಮಚ್ಚೆ ರೋಗ ‘ ಬಂದಿರುವುದರಿಂದ ತೊಗರಿ ಬೆಳೆ ಒಣಗಲಾರಂಭಿಸಿದೆ ಎಂದು ತಿಳಿಸಿರುತ್ತಾರೆ.
2022-23 ಸಾಲಿನಲ್ಲಿಯೂ ಜಿಲ್ಲೆಯಲ್ಲಿ 1.58 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ತೊಗರಿ ಬೆಳೆಗೆ ನೆಟೆರೋಗ ಬಾಧಿಸಿದಾಗ ರಾಜ್ಯ ಸರ್ಕಾರದಿಂದ ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಹಾರ ಘೋಷಿಸಿ ಜಿಲ್ಲೆಯ 1,78,354 ರೈತರಿಗೆ ರೂ 181.86 ಕೋಟಿ ಪರಿಹಾರ ವಿತರಿಸಲಾಗಿರುತ್ತದೆ. ಈ ಸಲವೂ ಕೂಡಾ ತೊಗರಿ ಬೆಳೆ ಒಣಗುತ್ತಿರುವುದರಿಂದ ಜಿಲ್ಲೆಯ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುತ್ತಾರೆ. ರಾಜ್ಯ ಸರ್ಕಾರ ರೈತರ ನೆರವಿಗೆ ಧಾವಿಸುವ ಅವಶ್ಯಕತೆ ಇದ್ದು, ಕಾರಣ, ಕಲಬುರಗಿ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಮೂಲಕ ಸರ್ಕಾರಿಂದ ತೊಗರಿ ಬೆಳೆ ಹಾನಿಗೆ ಪರಿಹಾರ ಘೋಷಣೆ ಮಾಡಬೇಕೆಂದು ಸಚಿವರು ಸವಿವರವಾದ ಮನವಿಯನ್ನು ಸಿಎಂ ಅವರಿಗೆ ಸಲ್ಲಿಸಿದ್ದರು.
ಸಚಿವರ ಮನವಿಗೆ ಸ್ಪಂದಿಸಿರುವ ಸಿಎಂ, ‘ ಪ್ರಸ್ತಾವದೊಡನೆ ಪರಿಶೀಲಿಸಿ ಕಡತ ಮಂಡಿಸಿ’ ಎಂದು ಮನವಿ ಪತ್ರದ ಮೇಲೆ ಷರಾ ಬರೆದು ಕೃಷಿ ಸಚಿವರಿಗೆ ಸೂಚಿಸಿದ್ದಾರೆ.