ಕಲಬುರಗಿ: ಡೆತ್ ನೋಟ್ ಬರೆದಿಟ್ಟು ಸಚಿನ್ ಆತ್ಮಹತ್ಯೆ ಮಾಡಿಕೊಂಡ ಎಂದು ಹೇಳಲಾಗುವ ಪ್ರಕರಣ ಕುರಿತು ಸಿ.ಐ.ಡಿ. ತನಿಖೆಗೆ ಒಪ್ಪಿಸುವಂತೆ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಅಧ್ಯಕ್ಷ ವಿಠ್ಠಲ ದೊಡ್ಡಮನಿ ಸರ್ಕಾರಕ್ಕೆ ಒತ್ತಾಯಿಸಿದರು.
ಖಾಸಗಿ ಕಂಪನಿಯೊಂದರಲ್ಲಿ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದ ಸಚಿನ್ ಪಂಚಾಳ ಅವರು ಟೆಂಡರ್
ವಿಷಯದಲ್ಲಿ ನನಗೆ ಕಿರುಕುಳ ನೀಡಿದ್ದಾರೆಂದು 8 ಜನರನ್ನು ಹೆಸರಿಸಿ ಡೆತ್ ನೋಟ್ ಬರೆದು ಫೇಸ್‌ಬುಕ್ ಗೆ ಅಪ್ಲೋಡ್ ಮಾಡಿ ರೇಲ್ವೆ ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು ಅತ್ಯಂತ ದುಃಖಕರ ಸಂಗತಿಯಾಗಿದ್ದು, ಈ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಸಚಿನ್ ಪಂಚಾಳ ಅವರು ತಮ್ಮ ಫೆಸ್‌ಬುಕ್ ಖಾತೆಯಲ್ಲಿ ಡೆತ್ ನೋಟ್ ಅಪ್ಲೋಡ್ ಮಾಡಿದ್ದನ್ನು ಕಾಂಗ್ರೆಸ್ ಮುಖಂಡ ರಾಜಕುಮಾರ ಕಪನೂರ ಅವರು ನೋಡಿ ಯಾವುದೇ ಅನಾಹುತ ಆಗದಂತೆ ತಪ್ಪಿಸಲು ಮುಂಜಾಗ್ರತಾ ಕ್ರಮವಾಗಿ ಕಲಬುರಗಿ ನಗರ ಸಬ್ ಅರ್ಬನ್ ಪೊಲೀಸ ಠಾಣೆಯಲ್ಲಿ ದಿನಾಂಕ:25-5-2024ರಂದು ದೂರು ನೀಡಿದ್ದಾರೆ. ಬಿಜೆಪಿಯವರು ಸಾವಿನ ಪ್ರಕರಣವನ್ನು ರಾಜಕೀಯಕ್ಕೆ ಬಳಸುತ್ತಿರುವುದು ಖೇದಕರ ಸಂಗತಿಯಾಗಿದೆ ಎಂದು ದೂರಿದರು.
ಮಾಜಿ ಕಾರ್ಪೊರೆಟರ್ ಆಗಿರುವ ರಾಜಕುಮಾರ ಕಪನೂರ ಇವರು ಮಹಾನಗರ ಪಾಲಿಕೆ ಚುನಾವಣೆ, ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪ್ರಚಾರ ಮಾಡಿ ಆ ಅಭ್ಯರ್ಥಿಗಳ ವಿಜಯ ಸಾಧಿಸುವಲ್ಲಿ ಯಶಸ್ವಿ ಪ್ರಯತ್ನ ಮಾಡಿದ್ದು, ಸೋಲುಂಡ ಬಿಜೆಪಿ ವಿಧಾನಸಭಾ ಅಭ್ಯರ್ಥಿ ಚಂದು ಪಾಟೀಲ, ಸಚಿನ್ ಪಂಚಾಳ ಅವರು ಬರೆದ ಡೆತ್ ನೋಟಿನಲ್ಲಿ ಫಿರ್ಯಾದುದಾರ 1) ಚಂದು ಪಾಟೀಲ, 2)ಆಂದೋಲಾ ಸ್ವಾಮಿ 3) ಮಣಿಕಂಠ ರಾಠೋಡ, 4) ಎಂ.ಎಲ್.ಎ. ಬಸವರಾಜ ಮತ್ತಿಮೂಡ ಇವರುಗಳಿಗೆ ಕೊಲೆ ಮಾಡುವುದಕ್ಕಾಗಿ ಸುಪಾರಿ ನೀಡಿರುತ್ತಾರೆಂದು ಆಪಾದಿಸಿ ದಿನಾಂಕ: 28-12-2024 ರಂದು ಸ್ಟೇಶನ್ ಬಜಾರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಅಪರಾಧ ಸಂಖ್ಯೆ 0166/2024ಬಿ.ಎನ್.ಎಸ್. 2023ರ ಕಾಯ್ದೆ ಕಲಂ 351 (2) ರಡಿಯಲ್ಲಿ ಪ್ರಕರಣ ದಾಖಲಿಸಿರುತ್ತಾರೆ ಎಂದು ವಿವರಿಸಿದರು.
ಸತ್ಯಾಸತ್ಯತೆಯನ್ನುಅರಿಯದ ಬಿಜೆಪಿ ಮುಖಂಡರು ಆರೋಪಿತರನ್ನು ಬಂಧಿಸಬೇಕು ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆಯವರು ರಾಜೀನಾಮೆ ಕೊಡಬೇಕೆಂದು ಒತ್ತಾಯಿಸುತ್ತಿರುವುದು ಎಷ್ಟು ಸರಿ?ಆರ್.ಡಬ್ಲ್ಯೂ.ಎಸ್.ಎಸ್.ಡಿ, ಏರ್‌ಪೋರಟ್, ಝೂ ಅಥಾರ್ಟಿ ಆಫ್ ಕರ್ನಾಟಕ ಕಲಬುರಗಿ, ಕೆ.ಐ.ಎ.ಡಿ.ಬಿ., ಕೆ.ಆರ್.ಐ.ಡಿ.ಎಲ್.ಗೆ ಟೆಂಡರ್‌ಗಳಿಗೆ ಅಪಾರ ಹಣವನ್ನು ರಾಜಕುಮಾರ ಕಪನೂರರಿಗೆ ಕೊಟ್ಟಿರುತ್ತೇನೆಂದು ಡೆತ್ ನೋಟಲ್ಲಿ ಸಚಿನ್ ಪಂಚಾಳ ಆಪಾದಿಸಿದ್ದಾರೆ. ಆದರೆ ರಾಜಕುಮಾರ ಕಪನೂರ ಅವರ ಸಹೋದರರು ನೀಡಿದ ಮಾಹಿತಿಯಂತೆ ರಾಜಕುಮಾರ ಕಪನೂರ ಅವರು ಅವರ ಪಾಟನರ್ಸ್ ಗಳಾದ ಈ ಕೆಳಗೆ ಹೆಸರಿಸಿದವರ ಖಾತೆಯಿಂದ ಸಚಿನ್ ಮೋನಪ್ಪ ಪಂಚಾಳರರಿಗೆ ಹಣ ಸಂದಾಯ ಆಗಿರುತ್ತದೆ ಎಂದು ಮಾಹಿತಿ ನೀಡಿದರು.
1) ದಿನಾಂಕ: 31-1-2024 ರಂದು ಬ್ಯಾಂಕ್ ಆಫ್ ಇಂಡಿಯಾ ಖಾತೆ ಹೊಂದಿರುವ ಪ್ರತಾಪ ಮಾರುತಿ ಧರೆ ಇವರಿಗೆ ರೂ. 11,25,000=00,2) ದಿನಾಂಕ: 31-I-2024 ರಂದು ಆಕ್ಸಿಸ್ ಬ್ಯಾಂಕ್ ಖಾತೆ ಹೊಂದಿರುವ ಮನೋಜ್ ಸೆಡವಾಲ್ ಇವರ ಖಾತೆಗೆ ರೂ. 11,25,000=00, 3) ದಿನಾಂಕ: 08-02-2024 ರಂದು ಆಕ್ಸಿಸ್ ಬ್ಯಾಂಕ್ ಖಾತೆ ಹೊಂದಿರುವ ಮನೋಜ್ ಸೆಜೆವಾ ಇವರಿಗೆ ರೂ. 11,25,000=00,
4) ದಿನಾಂಕ: 22-02-2024 ರಂದು ಬ್ಯಾಂಕ್ ಆಫ್ ಮಹಾರಾಷ್ಟ್ರ ಬ್ಯಾಂಕ್ ಖಾತೆ ಹೊಂದಿರುವ ಸಿದ್ಧಾರ್ಥ ಪಲ್ಲಾದ ಶಾಕ್ಯಮುನಿ (ಮನೋಜ ಸೆಜೆವಾ) ಇವರಿಗೆ ರೂ. 5,00,000=005) ದಿನಾಂಕ: 22-02-2024 ರಂದು ಬ್ಯಾಂಕ್ ಆಫ್ ಮಹಾರಾಷ್ಟ್ರ ಖಾತೆ ಹೊಂದಿರುವ ಸಿದ್ಧಾರ್ಥ ಶಾಖ್ಯ ಮುನಿ (ಮನೋಜ ಸೆಜೆವಾ) ರೂ. 5,00,000=00,6) ದಿನಾಂಕ: 19-12-2023 ರಂದು ಆಕ್ಸಿಸ್ ಬ್ಯಾಂಕ್ ಖಾತೆ ಹೊಂದಿರುವ ಕೆ.ಎಸ್.ಪಿ. ಕನ್ಸಟ್ರಕ್ಷನ್ಸ್(ಪೇಟ) ರೂ. 15,00,000=00 ಹೀಗೆ ಒಟ್ಟು 58,77,000=00 ರೂ.ಗಳನ್ನು ಸಚಿನ್ ಪಂಚಾಳರವರಿಗೆ ಸಂದಾಯ ಮಾಡಿರುತ್ತಾರೆ ಎಂದರು.
ಸಚಿನ್ ಪಂಚಾಳ ಇವರ ಡೆತ್ ನೋಟನಲ್ಲಿ ಎಲ್ಲಿಯೂ ಕೂಡ ನಾನು ಗುತ್ತಿಗೆದಾರ ಎಂದು ಹೇಳಿಕೊಂಡಿರುವುದಿಲ್ಲ. ಬೇರೆಯವರ ಲೈಸನ್ಸ್ ನಿಂದ ಟೆಂಡರ್ ಹಾಕುತ್ತೇನೆ ಎಂದು ಹಣ ಪಡೆದಿರುತ್ತಾನೆ. ಟೆಂಡರ್ ಫೇಕ್ ಇರುವುದರಿಂದ ನಾವು ನೀಡಿದ ಹಣವನ್ನು ಸಚಿನಗೆ ರಾಜಕುಮಾರ ಕಪನೂರ ಅವರು ಬೀದರನಲ್ಲಿರುವ ಸಚಿನನ ಮನೆಗೆ ತೆರಳಿ ಹಣ ವಾಪಸ್ ಕೊಡುವಂತೆ ಕೇಳಿಕೊಂಡಿರುತ್ತಾರೆ. ಇಂತಹ ವಿಷಯಗಳನ್ನು ಬಿಜೆಪಿ ಮುಖಂಡರು ಸತ್ಯವನ್ನು ಅರಿಯದೆ ರಾಜಕೀಯ ಮಾಡುತ್ತಿರುವುದು ಖೇದಕರ ಸಂಗತಿಯಾಗಿದೆ. ಯಾವುದಕ್ಕೂ ಸಿ.ಐ.ಡಿ.ತನಿಖೆ ನಡೆದರೆ ಎಲ್ಲಾ ಸತ್ಯಾಸತ್ಯತೆಗಳು ಹೊರ ಬೀಳಲಿವೆ. ಈ ಆತ್ಮಹತ್ಯೆ ಹಿಂದಿರುವ ಕಾಣದ ಕೈಗಳು ಯಾರು ಎಂಬುದನ್ನು ಪತ್ತೆ ಹಚ್ಚಿ ತಪ್ಪಿತಸ್ತರಿಗೆ ಶಿಕ್ಷೆ ಆಗಬೇಕೆಂಬುವುದು ನಮ್ಮ ಉದ್ದೇಶವಾಗಿದೆ ಎಂದು ತಿಳಿಸಿದರು.
ಸಚಿನ್ ಆತ್ಮಹತ್ಯೆಯೋ? ಕೊಲೆಯೋ? ತನಿಖೆಯಾಗಲಿ: ಇಷ್ಟಕ್ಕೂ ಸಚಿನ್ ಬರೆದಿಟ್ಟ ಎನ್ನಲಾದ ಡೆತ್ ನೋಟ್ ಅವರದ್ದಾ? ಎಂಬ ಅನುಮಾನವಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಯಬೇಕು ಎಂದು ರೇಣುಕಾ ಸಿಂಗೆ ಆ ಗ್ರಹಿಸಿದರು.
ಅರ್ಜುನ ಭದ್ರೆ, ಎ.ಬಿ. ಹೊಸಮನಿ, ಪ್ರಕಾಶ ಮೂಲಭಾರತಿ, ಶಾಂತಪ್ಪ ಕೂಡ್ಲಗಿ, ಮಲ್ಲಪ್ಪ ಹೊಸಮನಿ, ದಿನೇಶ ದೊಡ್ಮನಿ, ಹಣಮಂತರಾವ ದೊಡ್ಡಮನಿ ಇತರರು ಇದ್ದರು.