ಅಂಬೇಡ್ಕರ್ ಅವಮಾನಕಾರರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಯಡಿಯೂರಪ್ಪ ಅಧಿಕಾರಕ್ಕೆ ಕುತ್ತು: ಕೋರಣೇಶ್ವರ್ ಸ್ವಾಮೀಜಿ

0
448

ಆಳಂದ: ಶಿಕ್ಷಣ ಇಲಾಖೆಯು ಹೊರತಂದ ಕೈಪಿಡಿಯಲ್ಲಿ ಸಂವಿಧಾನವನ್ನು ಡಾ. ಬಾಬಾಸಾಹೇಬ್ ಬಿ.ಆರ್. ಅಂಬೇಡ್ಕರ್ ಅವರು ಬರೆದಿಲ್ಲ ಎಂದು ದಾಖಲಿಸಿ ಅಪಪ್ರಚಾರ ಹಾಗೂ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳದೇ ಹೋದಲ್ಲಿ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಧಿಕಾರಕ್ಕೆ ಕುತ್ತು ಬರಲಿದೆ ಎಂದು ರಾಷ್ಟ್ರೀಯ ಲಿಂಗಾಯತ ಮೋರ್ಚಾ ಅಧ್ಯಕ್ಷ, ಉಸ್ತುರಿ, ಧೋತ್ತರಗಾಂವ್, ಆಳಂದ್ ತೋಂಟದಾರ್ಯ ಅನುಭವ ಮಂಟಪದ ಶ್ರೀ ವಿಶ್ವನಾಥ್ ಕೋರಣೇಶ್ವರ್ ಮಹಾಸ್ವಾಮೀಜಿ ಇಲ್ಲಿ ಹೇಳಿದರು.

ಪಟ್ಟಣದಲ್ಲಿ ಜಗದ್ಗುರು ತೋಂಟದಾರ್ಯ ಅನುಭವ ಮಂಟಪದಿಂದ ಭಾನುವಾರ ಸುಕ್ಷೇತ್ರ ಯಡಿಯೂರು ಸಿದ್ಧಲಿಂಗೇಶ್ವರ್ ಕರ್ತೃ ಗದ್ದುಗೆಯಿಂದ ಶರಣ ಸಂದೇಶ ಜ್ಯೋತಿ ಯಾತ್ರೆಯಲ್ಲಿ ಪಾಲ್ಗೊಳ್ಳಲು ತೆರಳುವ ಮುನ್ನ ಮಾತನಾಡಿದ ಅವರು, ಬಿಜೆಪಿ, ಸಂಘ ಪರಿವಾರದವರು ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ತಮ್ಮದೇ ಆದ ಗುಪ್ತ ಕಾರ್ಯಸೂಚಿಯನ್ನು ಹೊಂದಿದ್ದು, ಅದರ ಅಂಗವಾಗಿಯೇ ಇಂತಹ ಅಪಚಾರ ಎಸಗುವಂತಹ ಕೆಲಸ ಸರ್ಕಾರಿ ಇಲಾಖೆಗಳ ಮೂಲಕ ನಡೆಯುತ್ತಿದೆ ಎಂದರು.

Contact Your\'s Advertisement; 9902492681

ಡಾ| ಅಂಬೇಡ್ಕರ್ ಅವರನ್ನು ಸಂವಿಧಾನ ಶಿಲ್ಪಿ ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ಆದಾಗ್ಯೂ, ಶಿಕ್ಷಣ ಇಲಾಖೆಯ ಕೈಪಿಡಿಯಲ್ಲಿ ಅಂಬೇಡ್ಕರ್ ಅವರು ಸಂವಿಧಾನ ಬರೆದಿಲ್ಲ ಎಂಬ ದಾಖಲೆಯನ್ನು ನೀಡಿದ್ದು ಇತಿಹಾಸಕ್ಕೆ ಅಪಚಾರ ಎಸಗಿದಂತಾಗಿದೆ. ಈ ಶಡ್ಯಂತ್ರದ ಹಿಂದೆ ಬಿ.ಎಸ್. ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಹುನ್ನಾರವೂ ಅಡಗಿದೆ ಎಂದು ಅವರು ಹೇಳಿದರು.

ಈ ಹಿಂದೆ ಕೇಂದ್ರ ಸಚಿವರಾಗಿದ್ದ ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ಅವರು ಸಂವಿಧಾನ ಬದಲಾಯಿಸಲು ನಾವು ಬಂದಿದ್ದೇವೆ ಎಂಬ ಬಹಿರಂಗ ಹೇಳಿಕೆ ನೀಡಿದ್ದರು. ಈಗ ಒಂದು ಸಂವಿಧಾನ ಮತ್ತು ಒಂದು ದೇಶ ಹೆಸರಿನಲ್ಲಿ ಅಂಬೇಡ್ಕರ್ ಅವರ ಭಾವಚಿತ್ರದ ಸ್ಥಳದಲ್ಲಿ ಶಾಮ್ ಪ್ರಸಾದ್ ಮುಖರ್ಜಿ ಅವರ ಭಾವಚಿತ್ರ ಹಾಕಲಾಗಿದೆ. ಇದು ಹಿಂದೂ ರಾಷ್ಟ್ರದ ಪರಿಕಲ್ಪನೆಗೆ ಸಾಕ್ಷಿಯಾಗಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಭಾವಚಿತ್ರವನ್ನೂ ಹಾಕಲಾಗಿತ್ತು. ಇದರಿಂದ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಶಾಮಪ್ರಸಾದ್ ಮುಖರ್ಜಿ ಅವರ ಭಾವಚಿತ್ರ ತೆಗೆದು ಅಂಬೇಡ್ಕರ್ ಅವರ ಭಾವಚಿತ್ರ ಹಾಕಲಾಯಿತು. ಇಂತಹ ಸಂಗತಿಗಳನ್ನು ಮುಖ್ಯಮಂತ್ರಿಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ತಿಳಿಸಿದರು.

ಅಂಬೇಡ್ಕರ್ ಅವರ ಅಪಪ್ರಚಾರವು ಶಿಕ್ಷಣ ಇಲಾಖೆಯಿಂದ ಆಗಿರುವುದರಿಂದ ಸಂಬಂಧಿಸಿದ ಸಚಿವರು ಹೊಣೆಯಾಗುವರು. ಹಾಗೂ ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಆಯುಕ್ತರು ಮುಂತಾದ ಅಧಿಕಾರಿಗಳೂ ಸಹ ಜವಾಬ್ದಾರಿ ಆಗುವರು. ಒಟ್ಟಿನಲ್ಲಿ ಅಪಚಾರ ಎಸಗಿದ ಎಲ್ಲರ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ಸಮರ್ಥವಾಗಿ ಆಡಳಿತ ನಡೆಸುತ್ತಾರೆ. ಆದಾಗ್ಯೂ, ಅವರಿಗೆ ಬಿಜೆಪಿ ವರಿಷ್ಠರು ಸೂಕ್ತ ಸಹಕಾರ ಕೊಡುತ್ತಿಲ್ಲ. ಇದೇ ರೀತಿ ಅಸಹಕಾರ ಹಾಗೂ ಅಪಪ್ರಚಾರ ಮುಂದುವರೆದರೆ ಯಡಿಯೂರಪ್ಪ ಅವರು ಅಧಿಕಾರ ಕಳೆದುಕೊಳ್ಳುವುದರಲ್ಲಿ ಯಾವುದೇ ರೀತಿಯ ಸಂದೇಹವಿಲ್ಲ ಎಂದು ಅವರು ಎಚ್ಚರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here