ಸುಕ್ಷೇತ್ರ ಅಭಿವೃದ್ಧಿಗೆ ವಿಶ್ವನಾಥ್ ಕೋರಣೇಶ್ವರ್ ಸ್ವಾಮೀಜಿ ಸಲಹೆ

0
47

ಆಳಂದ: ರಾಷ್ಟ್ರೀಯ ಲಿಂಗಾಯತ ಮೋರ್ಚಾ ಅಧ್ಯಕ್ಷರೂ ಆದ ಉಸ್ತುರಿ, ಧೋತ್ತರಗಾಂವ್, ಆಳಂದ್ ತೋಂಟದಾರ್ಯ ಮಠದ ಪೀಠಾಧಿಪತಿ ವಿಶ್ವನಾಥ್ ಕೋರಣೇಶ್ವರ್ ಮಹಾಸ್ವಾಮೀಜಿ ಅವರ ನೇತೃತ್ವದಲ್ಲಿ ಸುಕ್ಷೇತ್ರ ಯಡಿಯೂರು ಸಿದ್ಧಲಿಂಗೇಶ್ವರ ಕರ್ತೃ ಗದ್ದುಗೆಯಿಂದ ಆಳಂದ್‌ವರೆಗೆ ಜರುಗಲಿರುವ ಶರಣ ಸಂದೇಶ ಜ್ಯೋತಿ ಯಾತ್ರೆಯು ಭಾನುವಾರ ಬೆಳಿಗ್ಗೆ ನೆರೆಯ ಯಾದಗಿರಿ ಜಿಲ್ಲೆಯ ಸುರಪುರ್ ತಾಲ್ಲೂಕಿನ ತಿಂಥಣಿ ಶ್ರೀ ಮೌನೇಶ್ವರ್ ದೇವಸ್ಥಾನಕ್ಕೆ ಆಗಮಿಸಿತು.

ಪೂಜ್ಯ ವಿಶ್ವನಾಥ್ ಕೋರಣೇಶ್ವರ್ ಸ್ವಾಮೀಜಿ ಅವರ ನೇತೃತ್ವದಲ್ಲಿನ ಶರಣ ಸಂದೇಶ ಜ್ಯೋತಿ ಯಾತ್ರೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭೆಯ ಆಳಂದ್ ತಾಲ್ಲೂಕು ಅಧ್ಯಕ್ಷ ರಮೇಶ್ ಲೋಹಾರ್, ಕೃಷಿಕ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಗುರುಶರಣ್ ಪಾಟೀಲ್ ಕೊರಳ್ಳಿ, ಜಯ ಕರ್ನಾಟಕ ಸಂಘಟನೆಯ ಆಳಂದ್ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ್ ಕೊರಳ್ಳಿ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಮಾಜಿ ಅಧ್ಯಕ್ಷ ಎಸ್.ಬಿ. ಪಾಟೀಲ್, ಆರೋಗ್ಯ ಇಲಾಖೆಯ ನಿವೃತ್ತ ಅಧಿಕಾರಿ ಸುಭಾಷ್ ಪಾಟೀಲ್ ಗ್ರಾಮ ಪಂಚಾಯಮಿತಿ ಅಭಿವೃದ್ಧಿ ಅಧಿಕಾರಿ ಬಾಬುರಾವ್ ರಾಯ್, ಖಜೂರಿಯ ಸಿದ್ಧೇಶ್ವರ್ ಭಜನಾ ಸಂಘದ ಅಧ್ಯಕ್ಷ ಸಂತೋಷ್ ವಾಣೇಗಾಂವ್, ಶ್ರೀಮಂತ್ ಸುಲ್ತಾನಪೂರೆ, ಶ್ರೀಶೈಲ್ ಚೆಂಗಳೆ, ಅಕ್ಕನ ಬಳಗದ ಸುನಂದಾ ರಾಯ್, ಮಂದಾಕಿನಿ ಖಜೂರಿ, ಪಾರ್ವತಿ ಧಂಗಾಪೂರ್, ಸಿದ್ಧರಾಮ್ ಹಡಪದ್, ಪತ್ರಕರ್ತ ಬಸವರಾಜ್ ಚಿನಿವಾರ್ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿಶ್ವನಾಥ್ ಕೋರಣೇಶ್ವರ್ ಮಹಾಸ್ವಾಮೀಜಿ ಮಾತನಾಡಿ, ತಿಂಥಣಿಯ ಮೌನೇಶ್ವರರು ೧೬ನೇ ಶತಮಾನದವರು. ಸಮಾಜದಲ್ಲಿ ಅಸಮಾನತೆ, ಅಸ್ಪೃಶ್ಯತೆ, ಮೂಢನಂಬಿಕೆ, ಕಂದಾಚಾರಗಳನ್ನು ಬದಿಗೊತ್ತುವಂತಹ ವಚನಗಳನ್ನು ಮೌನೇಶ್ವರರು ಬರೆಯುವ ಮೂಲಕ ಹಿಂದೂ, ಮುಸ್ಲಿಂ ಸಮುದಾಯದ ಸಾಮರಸ್ಯ ಮೂಡಿಸುವಲ್ಲಿ ಅವರ ಪಾತ್ರ ಬಹಳ ಮುಖ್ಯವಾಗಿದೆ. ಸಾಮರಸ್ಯದ ನಡೆಯಿಂದ ಅವರು ಎಲ್ಲರಿಗೂ ಆಕರ್ಷಿತರಾದರು. ಹಲವಾರು ಜಾತಿ ವಿನಾಶ ಕುರಿತು ಸಾಕಷ್ಟು ವಚನಗಳನ್ನು ಬರೆದಿದ್ದಾರೆ ಎಂದರು.

Contact Your\'s Advertisement; 9902492681

ಕಲ್ಯಾಣದ ಶಿವಶರಣರ ಹಾದಿಯಲ್ಲಿಯೇ ನಡೆದು ಅವರ ವಚನದಲ್ಲಿ ಅಲ್ಲಮಪ್ರಭು, ಚನ್ನಬಸವಣ್ಣ ಮುಂತಾದವರ ಪ್ರಭಾವ ಇದ್ದು, ಅವರ ವಚನಾಂಕಿತವು ಬಸವಣ್ಣ ಇದ್ದದ್ದು ಗಮನಾರ್ಹವಾಗಿದೆ. ಓಂ ಏಕಲಾಖ್ ಐಂಶೀಹಜಾರ್, ಪಾಂಚೋ ಪೀರ್ ಪೈಗಂಬರ್ ಮೌನದೀನ್ ಮತ್ತು ಜಿತಾಪೀರ್ ಪೈಗಂಬರ್ ಮೈನೂದ್ದೀನ್, ಕಾಶೀಪತಿ ಗಂಗಾಧರ್ ಹರಹರಮಹಾದೇವ್ ಎಂಬ ಉದ್ಘೋಷಣೆಯು ಹೆಚ್ಚು ಪ್ರಾಮುಖ್ಯತೆ ಪಡೆದಿದೆ ಎಂದು ಅವರು ಹೇಳಿದರು.
ಶಿವಶರಣರು ಮತ್ತೆ ಹುಟ್ಟಿ ಬರುವರೆಂದು ಮೌನೇಶ್ವರರ ಕಾಲಜ್ಞಾನದ ವಚನಗಳು ಉಪಯುಕ್ತವಾಗಿದೆ. ಆದಾಗ್ಯೂ, ಪ್ರಸ್ತುತ ಪರಿಸ್ಥಿತಿಯಲ್ಲಿ ಅವರ ವಿಚಾರಧಾರೆಗಳನ್ನು ಬದಿಗೊತ್ತಿ ಕೇವಲ ಒಂದು ಕೋಮಿಗೆ ಸೀಮಿತಗೊಳಿಸಲಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಲಿಂಗಾಯತ ಚಳುವಳಿಗಾರರು, ಶರಣ ಸಾಹಿತಿಗಳು ಈ ವಿಷಯ ಕುರಿತು ಆಸಕ್ತಿ ವಹಿಸಿ ಅವರ ವಿಚಾರಗಳನ್ನು ಜನಸಾಮಾನ್ಯರಿಗೆ ಮುಟ್ಟಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಅವರು ಕರೆ ನೀಡಿದರು.
ಶ್ರೀ ಮೌನೇಶ್ವರರು ಐಕ್ಯವಾದ ತಿಂಥಣಿಯು ನಮ್ಮ ಭಾಗದ ಪ್ರಸಿದ್ಧ ತೀರ್ಥ ಕ್ಷೇತ್ರವಾಗಿದ್ದು, ಎಲ್ಲ ಜಾತಿ, ಮತ, ಪಂಥ, ಧರ್ಮದವರು ಒಟ್ಟುಗೂಡಿಸುವಂತಹ ಭಾವೈಕ್ಯತೆಯ ಸ್ಥಳವಾಗಿದ್ದು, ಅವರ ಅಮೂಲ್ಯ ವಚನಗಳ ಕುರಿತು ಅಧ್ಯಯನ, ಸಂಶೋಧನೆ ಆಗಬೇಕು ಎಂದು ತಿಳಿಸಿದರು.

ಮೌನೇಶ್ವರರ ದೇವಸ್ಥಾನವು ಈಗಲೂ ಹಿಂದೂ, ಮುಸ್ಲಿಂರ ಭಾವೈಕ್ಯತೆಯ ಸಂಕೇತವಾಗಿದೆ. ಗರ್ಭಗುಡಿಯಲ್ಲಿ ಕೆಳಗೆ ಮುಸ್ಲಿಂರ ಪವಿತ್ರ ಹಸಿರು ಹೊದಿಕೆ ಇದ್ದು, ಮೇಲೆ ಮೌನೇಶ್ವರರ ಪ್ರತಿಮೆ ಇದ್ದು, ಮೌನೇಶ್ವರರ ಹಣೆಯ ಮೇಲೆ ವಿಭೂತಿ, ಕೊರಳಲ್ಲಿ ಲಿಂಗ, ಮೈಮೇಲೆ ಹಸಿರು ಹೊದಿದೆ ಇರುವುದು ಭಾವೈಕ್ಯತೆಯ ಸಂಕೇತವಾಗಿದೆ. ಮೌನೇಶ್ವರರು ವಿಶ್ವಕರ್ಮ ಸಮಾಜದ ಪಂಚಾಳ ಸಮುದಾಯದಲ್ಲಿ ಜನಿಸಿದರೂ ಲಿಂಗಾಯತ ವಿಚಾರಧಾರೆ ಮೈಗೂಡಿಸಿಕೊಂಡರು ಎಂದು ಅವರು ಹೇಳಿದರು.

ರಾಜ್ಯ ಸರ್ಕಾರವು ಈಗಾಗಲೇ ತಿಂಥಣಿ ಮೌನೇಶ್ವರರ ದೇವಸ್ಥಾನವನ್ನು ಅಭಿವೃದ್ಧಿಪಡಿಸಿದ್ದು, ಇನ್ನೂ ಯಾತ್ರಾರ್ಥಿಗಳಿಗೆ ಸೌಲಭ್ಯಗಳನ್ನು ಕಲ್ಪಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಅವರು ಸಲಹೆ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here