ಓದುಗರ ವೇದಿಕೆ: ಬದುಕೇ ನಿನ್ನ ಬಗ್ಗೆ ನನಗೇನೂ ತಕರಾರಿಲ್ಲ….!!

0
86

ಬದುಕು ಅಂದ್ರೇ ಏನು ಅಂತ ಅರ್ಥವಾಗುವಷ್ಟರಲ್ಲಿ ತುಂಬಾ ಕಾಲ ಉರುಳಿತು. ನಿಜವಾದ ಜೀವನದ ಒಳಮರ್ಮ ಅರಿತುಕೊಂಡು ಜೀವಿಸುತ್ತಿರುವ ಭಾವಜೀವಿ ‌ನಾನು. ಹುಟ್ಟಿದ್ದು ಬಡ ಕುಟುಂಬದಲ್ಲಿ, ನೋವುಗಳು ನೂರೆಂಟು, ಎಲ್ಲಾ ಅವಮಾನಗಳ ಮಧ್ಯ ಹೂವಿನಂತೆ ಮೃದುವಾಗಿ ಬೆಳೆದ ಹುಡುಗ. ಒಬ್ಬ ತಾಯಿ ತನ್ನ ಮಗುವಿಗೆ ನೀಡುವ ಎಲ್ಲಾ ಪ್ರೀತಿ, ವಾತ್ಸಲ್ಯವನ್ನು ನನ್ನಮ್ಮ ಕೂಡ ನನಗೆ ಹರಿಸಿದ್ದಾಳೆ. ಮಗನಿಗೆ ಮುದ್ದಾಗಿ ಬೆಳೆಸಿದ ನನ್ನ ಹೆತ್ತವರು ‘ಲೈಫ್ ಎಂಜಾಯ್’ ಮಾಡುವ ಎಲ್ಲಾ ಅಧಿಕಾರ ಕಲ್ಪಿಸಿದ್ದಾರೆ.

ದೊಡ್ಡವನಾಗಿ ಬೆಳೆದಂತೆ ಯಾರ್ಯಾರಿಗೋ ಏನೆನೋ ಹುಚ್ಚತನದ ಚಟಗಳು ತಂತಾನೆ ಆವರಿಸಿಕೊಳ್ಳುತ್ತವೆ. ಆದರೆ‌ ನನಗೆ ಮಾತ್ರ ‌ಓದು ಬರವಣಿಗೆಯ ಹುಚ್ಚುತನ ನನ್ನನ್ನು ಅತಿಯಾಗಿ ಕಾಡಲಾರಂಭಿಸಿತ್ತು. ಪುಸ್ತಕ‌ ಓದುವ ಚಟ ಹೆಚ್ಚಾದಂತೆ ದಿನಾಲು ಹೊಸ ಹೊಸ ಪುಟಗಳು ತಿರುಗಿಸುವ ಹಂಬಲ, ಏನು ಓದುಬೇಕು, ಏನೆಲ್ಲಾ‌‌ ಅರಿತುಕೊಳ್ಳಬೇಕೆಂಬ ಯಾವುದೇ ‌ಪರಿಜ್ಞಾನ ಇಲ್ಲದಿದ್ದರೂ ಬಿಡದ ಓದಿನ‌‌ ಚಟ ಹಾಗೇ ಓದುವ ಹಟತನಕ್ಕೆ ಜೋತುಬಿದ್ದಿತ್ತು.

Contact Your\'s Advertisement; 9902492681

ದಿನಕಳೆದಂತೆ ಮಾನವ – ಸಮಾಜ – ಸಿದ್ಧಾಂತ – ಸಂಸ್ಕಾರ – ಸಮಸ್ಯೆ- ಸವಾಲು – ಪರಿಹಾರ ….ಹೀಗೆ ಎಲ್ಲಾ ವಿಷಯಗಳ ಬಗ್ಗೆ ಆಳವಾಗಿ ಅರಿತುಕೊಳ್ಳುವ ಉತ್ಕಾಟ. ಕೊನೆಗೆ ಒಂದು ಹಂತ ತಲುಪುವ ಗುರಿ ನನ್ನೊಳಗೆ ಕಾಡತೊಡಗಿತ್ತು . “ಒಬ್ಬ ಆತ್ಮೀಯ ಗೆಳೆಯ ನೀಡುವ ಪ್ರೀತಿ, ಧೈರ್ಯ, ನೆಮ್ಮದ್ದಿ ಒಂದು ಪುಸ್ತಕ ನೀಡುತ್ತದೆ” ಎನ್ನುವ ಭರವಸೆ ನನ್ನೊಳಗೆ ಭವಿಷ್ಯದ ಜೀವನೋತ್ಸವಕ್ಕೆ ಸ್ಫೂರ್ತಿ ನೀಡುವ ಮೂಲಕ ನನ್ನ ಉತ್ಕಟ ನಿಲುವು ‌ಇಮ್ಮಡಿಗೊಳಿಸಿತ್ತು. ಹಲವಾರು ಪುಸ್ತಕಗಳೇ ನನ್ನ ಮೊದಲ ಬೆಸ್ಟ್ ಫ್ರೇಂಡ್ ಆಗುವ ಮೂಲಕ ನನ್ನೊಳಗೆ ಜೀವನ ಚೈತನ್ಯ ತುಂಬಿದವು.

ಹಾಗೆ ಓದು ನನ್ನ ಹವ್ಯಾಸವಾಗಿ ಮುಂದು‌ವರೆಯಿತು. ಸಾಹಿತ್ಯದ ವಿವಿಧ‌ ಪ್ರಕಾರದ ಪುಸ್ತಕಗಳ ಓದುವಿಕೆ ನನಗೆ ಇನ್ನಿಲ್ಲದಂತೆ ಅಕ್ಷರ ಜ್ಞಾನ ಹೆಚ್ಚಿಸತೊಡಗಿತು. ಶಿಕ್ಷಣ, ಸಾಹಿತ್ಯ , ವೈಚಾರಿಕ ಲೇಖನಗಳ ಕುರಿತಾದ ಹಲವಾರು ಪುಸ್ತಕಗಳು ಓದಿದ ಅನುಭವ. ಅಲ್ಪಜ್ಞಾನ ಅರಗಿಸಿಕೊಂಡ ಪರಿಣಾಮ ಕವಿತೆಗಳು ಗೀಚುವ ಉತ್ಕಟತೆ ಉಂಟಾಯಿತು. ಕವಿತೆ ಬರೆಯಲು ಒಳಮನಸ್ಸು ಹಟಬಿಡದೇ ಬರೆಸಲು ಹಚ್ಚಿತ್ತು. ನಾನು ಓದಲು ಆಯ್ಕೆ ಮಾಡಿಕೊಂಡಿದ್ದು B.sc ಆದರೆ ಕನ್ನಡದ ಮೇಲಿನ ನನ್ನ ಭಾಷಾ‌ಪ್ರೀತಿ‌ ಮಾತ್ರ ಎಳ್ಳಷ್ಟೂ ಕಮ್ಮಿಯಾಗಲಿಲ್ಲ. ಪದವಿಯಲ್ಲಿಯೂ ಕೂಡ ಕನ್ನಡ ನನ್ನ ಫೇವರೇಟ್ ವಿಷಯಗಳಲ್ಲಿ ಮೊದಲ ಸ್ಥಾನದಲ್ಲಿ ‌ಉಳಿಸಿಕೊಂಡು‌ ಉಸಿರಾಗಿಸಿಕೊಂಡೆ.

ನಾನು ಬರೆದ ಕವಿತೆಗಳು ನಾನೇ ಮೊದಲು ಓದಿಕೊಂಡು ಸಂತೋಷಪಡುತ್ತಿದ್ದೆ. ಮತ್ತಷ್ಟು ಬರೆಯುವ ಸಾಹಸಕ್ಕೆ ಕೈಹಾಕಿ ನೂರಾರು ಬರೆದು ಡೈರಿ ತುಂಬಿದೆ . ಬಿ.ಎಸ್.ಸಿ ಪದವಿ ಓದುವ ಹೊತ್ತಲ್ಲಿ ಒಂದು ಪುಸ್ತಕ ಮಾಡಬೇಕೆಂಬ ನನ್ನಾಸೆಗೆ ಸ್ನೇಹಿತರು – ಮನೆಯವರು ಕೈಜೋಡಿಸಿ ಪ್ರೋತ್ಸಾಹಿಸಿದರು. ಆಯ್ದ ಕವನಗಳನ್ನು‌‌ ಸೇರಿಸಿ ಒಂದು ಪುಸ್ತಕವೂ ಪ್ರಕಟಿಸಿ 2012 ರಲ್ಲಿ ಬಿಡುಗಡೆ ಕೂಡ ‌ಮಾಡಿದ್ದೆ. ಆದರೆ ‌ಸಾಹಿತ್ಯದ ಗಂಧ, ಗಾಳಿ ಗೊತ್ತಿರದ ನನಗೆ ಕವಿ ಎನಿಸಿಕೊಳ್ಳಲು ಮನ‌ಸ್ಸು ಒಪ್ಪಲಿಲ್ಲ . ಒಬ್ಬ ಉತ್ತಮ ಕವಿಯಾಗಲು ಬೇಕಾಗಿರುವ ಸಾಮಾಜಿಕ ಕಳಕಳಿ, ಜವಾಬ್ದಾರಿ ‌ಹಾಗೂ ಅಗತ್ಯವಾದ ಜ್ಞಾನವೂ ‌ಕೂಡ ನನ್ನೊಳಗೆ ಬೆಳೆಯಲಿಲ್ಲ. ಆದರೂ ಮನಸ್ಸಿನ ತುಡಿತ, ಮನದ ಖುಷಿಗಾಗಿ ಅಕ್ಷರ ಗೀಚುವ ತುಡಿತ ಬಲುವಾಗಿ ಕಾಡತೊಡಗಿತ್ತು .

ಓದು – ಬರವಣಿಗೆಯಲ್ಲಿ ದೊರಕಿದ ಆನಂದ, ಸಮಾಧಾನ,‌ಧೈರ್ಯ ಹಾಗೂ ಬದ್ಧತೆ‌ ಭವಿಷ್ಯದ ಭರವಸೆಯ ಬೆಳಕು ಕಣ್ಮಂದೆ ಸುಳಿದಾಡುವಂತೆ ಮಾಡಿದ್ದು ಸುಳಲ್ಲ . ಈ‌ ಸಮಾಜದಲ್ಲಿ ಜರುಗುವ ಜೀವ ವಿರೋಧಿ ಘಟನೆಗಳು, ಅವೈಜ್ಞಾನಿಕ ಆಚರಣೆಗಳು, ಅವೈಚಾರಿಕತೆಯ ತತ್ವಗಳು ಸಿದ್ಧಾಂತಗಳಿಂದ ಉಸಿರಾಡುವ‌ ಈ ಅವ್ಯವಸ್ಥೆ‌‌ ಸಮಾಜದ ವಿರುದ್ಧ ಪ್ರತಿರೋಧ ‌ಒಡ್ಡುವ ಸಾಹಸಕ್ಕೆ ‌ನಾನು‌ ಸಿದ್ದವಾದೆ. ಇದಕ್ಕೆ ನನ್ನ ಲೇಖನಿ ಅಸ್ತ್ರವಾಗಿಸಿಕೊಳ್ಳಲು ನಿರ್ಧರಿಸಿದ್ದೆ. ಈ “ಪೆನ್ ಗಿರುವ ತಾಕತ್ತು ಗನ್ ಗೆ ಇಲ್ಲ” ಎಂಬ ಸತ್ಯ ಅಂದೇ ಮನವರಿಕೆ ಮಾಡಿಕೊಂಡು ನನ್ನ ಲೇಖನಿ ಪಳಗಿಸಿ ಮೌನ ಹೋರಾಟ ‌ಮುಂದುವರೆಸಿದ್ದೆ.

ಮುಂದೆ ಊರಿನ ಅನೇಕ ಹಿರಿಯ ಅನುಭಾವಿಗಳಿದ್ದರೂ ನನ್ನೂರಿನ ಹಿರಿಯರು ಅದೇಕೋ ನನ್ನಂತಹ ಯುವಕನಿಗೆ ಊರಿನ ಹಿರಿತನ ಕೊಡಲು ನಿರ್ಧರಿಸಿ ಕೊನೆಗೆ ಗ್ರಾಮ ಪಂಚಾಯತ್ ಸದಸ್ಯನಾಗಿ ಆಯ್ಕೆಮಾಡುವ ಮುಖಾಂತರ ನನ್ನೂರಿನ ಜವಾಬ್ದಾರಿ ನನ್ನ ಹೆಗಲಿಗೆ ಹೇರಿದರು. ವಯ‌ಸ್ಸಿನಲ್ಲಿ ಬಚ್ಚಾ ಆಗಿರುವ ನನಗೆ ರಾಜಕೀಯದಲ್ಲಿರುವ ಸಚ್ಚಾ ವ್ಯವಸ್ಥೆ ಬಗ್ಗೆ ಏನೂ ಗೊತ್ತಿರಲಿಲ್ಲ. ಬಯಸದೇ ಬಂದ ಭಾಗ್ಯ ಎಂದು ನನ್ನೂರಿನ ಪ್ರಜ್ಞಾವಂತರ ಮನುಸ್ಸುಗಳಿಗೆ ನಾನು ತಲೆಬಾಗಲೇಬೇಕಾಯಿತು. ಸಣ್ಣ ವಯಸ್ಸಿನಲ್ಲಿ ಒಂದೆಡೆ ಖಾಸಗಿ ಶಾಲೆಯ ಮುಖ್ಯಗುರು ಜವಾಬ್ದಾರಿ ಮತ್ತೊಂದೆಡೆ ಊರಿನ ಸೇವೆ ಮಾಡುವ ಸದಾವಕಾಶ . ಈ ಎರಡು ಸಾಮಾಜಿಕವಾದ ಪ್ರಮುಖ ಜವಾಬ್ದಾರಿಗಳು ನನ್ನ ಎರಡು ಕಣ್ಣುಗಳಂತೆ ತುಂಬಾ ಸೂಕ್ಷ್ಮವಾಗಿ ‌ಕಾಪಾಡಿಕೊಳ್ಳಲು ನಾನು ಹರಸಾಹಸ ‌ಪಡಬೇಕಾಯಿತು. ನನ್ನೆರಡು ಕೈಗಳಲ್ಲಿ ಇನ್ನಷ್ಟು ಬಲ ಹೆಚ್ಚಿಸಿಕೊಂಡು ಮುಂದೆ ಸಾಗಲು ಪಣತೊಟ್ಟೆ.

ವಯೋಮಾನದಲ್ಲಿ ಇಂದಿನ ಬಹುತೇಕ ಯುವಸಮೂಹ ಸಾಮನ್ಯವಾಗಿ ಮಾಡುತ್ತಿರುವ ಆಧುನಿಕ ಜೀವನ ಶೈಲಿ, ಮೋಜು ಮಸ್ತಿ ಮಾಡಲು ನನ್ನ ಮನಸ್ಸು ಒಪ್ಪದೇ ಅದರಿಂದ ತಂತಾನೆ ದೂರ ಉಳಿಯುವಂತೆ ಮಾಡಿದ್ದು ನನ್ನ ಗ್ರೇಟ್‌ ಲಕ್ ಅಂತ ಭಾವಿಸದೇ ಇರಲಾರೆ. ಬದುಕಿನ ಎಲ್ಲಾ ಜಂಜಾಟಗಳು ಬಿಟ್ಟು ಸಾಮಾಜಿಕ ಜವಾಬ್ದಾರಿ ನನ್ನ ಹೆಗಲೇರಿಸಿಕೊಂಡು ಶಿಕ್ಷಣ – ಸಾಹಿತ್ಯ – ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಬದುಕಲು ನಿರ್ಧರಿಸಿದ್ದೆ . ಪ್ರೀತಿ ಮಾಡುವುದು ತಪ್ಪಲ್ಲ, ಪ್ರೀತಿ ಉಳಿಸಿಕೊಳ್ಳದೇ ತ್ಯಾಗ ಮಾಡುವುದು ಜೀವನದ ಬಹುದೊಡ್ಡ ತಪ್ಪು ಎಂಬುವ ಕೆಲವೊಂದು ವಿಚಾರಗಳು ನನ್ನ ತರ್ಕಕ್ಕೆ ನಿಲುಕದೇ ಹಾಗೇ ಪ್ರಶ್ನೆಯಾಗಿ ಉಳಿದಿವೆ.

ಜೀವನದಲ್ಲಿ ಏನೆನೋ ಸಾಧಿಸುವ ಕನಸಿನ ಗುಂಗು ತಲೆಯಲ್ಲಿ ‌ತುಂಬಿಕೊಂಡು‌ ಬೆಳೆಯುತ್ತಿರುವ ಛಲಗಾರ ನಾನು . ಮನೆಯಲ್ಲಿ ಸಿರಿವಂತ ಇಲ್ಲದಿದ್ದರೂ ಸಾಮನ್ಯರಲ್ಲಿ ಅಸಾಮನ್ಯನಾಗಿ ಗುರುತಿಸಿಕೊಂಡು ಬದುಕಬೇಕೆಂಬ ಹ್ರದಯವಂತಿಕೆಯ ಬಡಜೀವ ನನ್ನದು. ಬಡತನ ಎಂಬ ಭಾವ ನನ್ನೊಳಗೆ ಮೂಡಲಿಲ್ಲ, ಜಾತಿ ‌ಎಂಬ ಭ್ರಮೆಯ‌ ವಾಸನೆ ನಾನು ತೆಗೆದುಕೊಳ್ಳಲಿಲ್ಲ. ಅಮೂಲ್ಯವಾದ ಜ್ಞಾನ ರತ್ನ ಸಂಪಾದಿಸುವನು ಹ್ರದಯಶ್ರೀಮಂತನೇ ಹೊರತು ಬಡವನಲ್ಲ ಎಂಬ ಸತ್ಯ ನಾನು ಬಲ್ಲೆ . ಇಷ್ಟ ಆಗಿದ್ದು ಕಷ್ಟವಾದರೂ ಚಿಂತೆಯಿಲ್ಲ, ನಷ್ಟವಾಗದಂತೆ ಪ್ರೀತಿಯಿಂದ ಪಡೆದುಕೊಳ್ಳುವ ಹಠವಾದಿ ಮನಸ್ಸು ನನ್ನದು. ಆದರೆ ಕೆಲವೊಂದು ಅದೆಷ್ಟು ಹಠ ಸಾಧಿಸಿದರೂ ದಕ್ಕಿಸಿಕೊಳ್ಳಲು ಸಾಧ್ಯವಾಗದೇ ಅಸಹಾಯಕರಾಗಿ ಮೌನವಾಗಿರಲು ಪ್ರಯತ್ನಿಸಿದ್ದೇನೆ. ಇದು ನನ್ನ ಆತ್ಮವಿಶ್ವಾಸ ಹಾಗೂ ‌ತಾಳ್ಮೆಗೆ ಸಾಕ್ಷಿ ಎಂದುಕೊಳ್ಳುತ್ತೇನೆ.

ನಾನು ಕೆಲವರಿಗೆ ಕಾರಣವಿಲ್ಲದೇ ತುಂಬಾ ಇಷ್ಟವಾದರೆ ಇನ್ನೂ ಕೆಲವರಿಗೆ ಇಷ್ಟವಾಗದೇ ನನ್ನ ಬರಹ, ಮಾತುಗಳು ಒರಟಾಗಿ, ಕಠೋರವಾಗಿ ಎದೆಗೆ ನಾಟಿದಂತೆ‌‌ ಆಗುತ್ತದೆ. ಅವರ ವಿವೇಚನೆ ಕೂಡ ನಿಜ ಇರಬಹುದೇನೊ? ಆದರೆ ಒರಟುತನ ಅನ್ನುವುದು ನನ್ನ ಮಾತಿನ ಸ್ವಭಾವವೇ ಹೊರತು ಸ್ವಾರ್ಥ, ನಂಜು ಅಂತೂ ಖಂಡಿತ ಅಲ್ಲ. ಆ‌ ರೀತಿ ಬರೆಯುವ , ಮಾತನಾಡುವ Nonsence ಖಂಡಿತ ಅಲ್ಲ. ವೈರಿಗಳಿಗೂ ಪ್ರೀತಿಸುವ ಹ್ರದಯವಂತಿಕೆ , ಮಾನವೀಯತೆ ಮೆರೆದು ಸಹನೆ , ಪ್ರೀತಿ , ಅನುಕಂಪ ತೋರುವ ಸಂವೇದನೆ ನನ್ನೊಳಗಿದೆ.
ಒಮ್ಮೊಮ್ಮೆ ಅತಿಯಾದ ನೋವಿಗೆ ಕಣ್ಣು ಒದ್ದೆಯಾಗುತ್ತವೆ, ಒಂದಿಷ್ಟು ಖುಷಿಯ ಕ್ಷಣಗಳಿಗೆ ಭರವಸೆಯ ಆನಂದಭಾಷ್ಪ ಚೆಲ್ಲುತ್ತೇನೆ.

ನನ್ನ ಅಪಾರ ಬಂಧು ಬಳಗ, ಸ್ನೇಹಿತರ ಪ್ರೀತಿ, ಧೈರ್ಯ, ಮಾರ್ಗದರ್ಶನ ನನಗೆ ಬಲುಗಟ್ಟಿಯಾಗಿ ಮೆಟ್ಟಿನಿಲ್ಲುವಂತೆ ಮಾಡಿದೆ. ಈ ಪ್ರೀತಿಯ ನೆರಳಲ್ಲಿ ಬದುಕಿದ ಅಮೂಲ್ಯ ಕ್ಷಣಗಳು ನೆನೆದರೆ ಮತ್ತೊಮ್ಮೆ Thrill ಆಗುತ್ತದೆ. ದೇವರ ಮೇಲೆ ಅಪಾರವಾಗಿ ನಂಬಿಕೆಯಿಟ್ಟು ಗುಡಿ – ಗುಂಡಾರ ಸುತ್ತಾಡಿಕೊಂಡು ಅಪ್ಪಟ ದೈವಭಕ್ತ ಎನ್ನಿಸಿಕೊಂಡ ನನಗೆ ದೇವರ ಮೇಲಿರುವ ಭಯ, ಭಕ್ತಿ, ನಂಬಿಕೆ ಇನ್ನಿಲ್ಲದಂತೆ ಮಾಯಾವಾಗಿದ್ದು ವಿಸ್ಮಯವೇ ಸರಿ.
ನನ್ನೊಳಗಿನ ಮೌಢ್ಯತೆ, ಅವೈಚಾರಿಕತೆ, ಅಸಮಾನತೆ , ಹಾಗೂ ಅವೈಜ್ಞಾನಿಕತೆಯ ಜಾಡು ಬಿಡಿಸಿ ಸ್ವತಂತ್ರ‌ವಾಗಿ ಆಲೋಚಿಸಲು, ಒಬ್ಬ ಪ್ರಜ್ಞಾವಂತನಾಗಿ ಸಾಮಾಜಿಕ ಚಿಂತನೆಗೆ ಹಚ್ಚಲು ಬಸವಾದಿ ಶರಣರ ವಚನಸಾಹಿತ್ಯದ ಪ್ರಭಾವೇ ಮೂಲ ಎಂದು ಹೆಮ್ಮೆಯಿಂದ ಹೇಳುತ್ತೇನೆ.

ಕಾಣಬಾರದ ಕನಸುಗಳು ಹೊತ್ತು ನನಸಾಗಿಸಿಕೊಳ್ಳಲು ಇನ್ನಿಲ್ಲದಂತೆ ಒದ್ದಾಡಿದ್ದೇನೆ. ಅದೆಷ್ಟೋ ಯೋಚನೆಗಳು ನಿದ್ದೆಯಿಲ್ಲದ ರಾತ್ರಿಗಳಾಗಿ ಕಾಡಿದವು. ಅದೆಷ್ಟೋ ನೋವುಗಳು ಮನಸ್ಸಿಗೆ ಬರ್ಬರವಾಗಿ ಚುಚ್ಚಿ ಅಘಾತವುಂಟುಮಾಡಿವೆ. ಈ ಸಮಾಜದಲ್ಲಿ ನಿರಂತರವಾಗಿ ನಡೆ(ದ)ಯುತ್ತಿರುವ ಅನೇಕ ದುರ್ಘಟನೆಗಳು ಕಂಡು ಕರುಳು ಕಿತ್ತುಬರುವಂತೆ ಮಾಡಿದ್ದು ಸುಳ್ಳಲ್ಲ. ಬಡತನ, ಜಾತಿ, ಮತ, ಮೇಲು, ಕೀಳು, ಅವಮಾನ, ಅಸ್ಪ್ರಶ್ಯತೆ ಎಂಬ ಸಾಮಾಜಿಕ ಪಿಡುಗುಗಳು ಈ ಸಮಾಜ ಇನ್ನೂ ಜೀವಂತವಾಗಿಟ್ಟುಕೊಂಡು ಪೋಷಿಸುತ್ತಿರುವುದು ಬಹುದೊಡ್ಡ ದುರಂತ‌ ಎನ್ನಬಹುದು.

ಜಾತಿ , ಧರ್ಮಗಳ‌ ಘನತೆಗಾಗಿ ಕೋಮು, ಗಲಬೆ, ಹತ್ಯೆ, ಹಿಂಸೆ, ಅತ್ಯಾಚಾರ, ದೌರ್ಜನ್ಯಗಳು ರಾಜಾರೋಷವಾಗಿ ಮತ್ತೆ ಮತ್ತೆ ಘಟಿಸುತ್ತಿವೆ. ಇಂತಹ ದುರಿತ‌ ಕಾಲಘಟ್ಟದ ಸಮಾಜ ಕಂಡು ತುಂಬಾ ವಿಷಾದ ಮೂಡುತ್ತದೆ. ಜಾತಿ – ಧರ್ಮಗಳ ಮೇಲಿರುವ ಮೋಹಕ್ಕೆ ನೀತಿ ಮರೆತು ಜೀವಹತ್ಯೆ ಕೌರ್ಯತೆ ಮೆರೆಯುವ ಮನುಷ್ಯನ ಬದುಕು ಜೀವವಿರೋಧಿ ಅಲ್ಲವೇ? ಘನತೆಯಿಂದ ಜೀವಿಸಲು ಬಿಡದ ಈ ಸಮಾಜದಲ್ಲಿ ಅದ್ಯಾವ ಮಾನವೀಯತೆಗೆ ಬೆಲೆಯಿದೆ?. ಪ್ರೀತಿ , ಸಹನೆ , ಅಂತಃಕರಣ, ಗೌರವ, ಸಮಾನತೆ ಮೈಗೂಡಿಸಿಕೊಂಡು ಬದುಕುತ್ತಿರುವ ಅದೆಷ್ಟು ಜನರು ನೆಮ್ಮದಿಯಾಗಿದ್ದಾರೆ? ಸುಳ್ಳು ಮಾತಿನ ಸರಮಾಲೆಯಿಂದ ಮಂಟಪ ಅಲಂಕರಿಸಿ ಯೋಗ್ಯನಲ್ಲದ ಅಯೋಗ್ಯನಿಗೆ ಸತ್ಯದ ಮೆರವಣಿಗೆ ಮಾಡಿಸುವ ಈ ಸಮಾಜ ನಿಜವಾದ ಸತ್ಯದ ನಿಲುವು ಮೂಲೆಗೆ ತಳ್ಳುತ್ತಿದೆ. ಕೇವಲ ನಾಟಕೀಯ ಪ್ರವೃತ್ತಿ ಮೈಗೂಡಿಸಿಕೊಂಡು ಬದುಕುವ ಬಹುತೇಕ ಜನಸಾಮನ್ಯರು ತಮ್ಮ ಸ್ವಾರ್ಥವೇ ತಮ್ಮ ಅಮೂಲ್ಯ ಬದುಕಿಗೆ ಬಂಡವಾಳವಾಗಿಸಿಕೊಂಡಿದ್ದಾರೆ.

ಹೀಗಾಗಿ ಈ ಸಮಾಜ ಮಾನವೀಯತೆ, ಪ್ರೀತಿ, ಸಹನೆ, ಮಮತೆ ಹಾಗೂ ಸತ್ಯದ ನಿಲುವಿನ ಸತ್ವ ಕಳೆದುಕೊಳ್ಳುತ್ತಿದೆ. ಈ ಎಲ್ಲಾ ಜಂಜಾಟಗಳಿಂದ ಕೂಡಿರುವ ಸಮಾಜದ ಕಂಡು ಬದುಕಲು ಇಚ್ಚಿಸದ ಅದೆಷ್ಟೋ ಜೀವಗಳು ಕಾರಣವಿಲ್ಲದೇ ಮಾಯಾವಾಗಿವೆ. ಇನ್ನೂ ಉಳಿದ ನನ್ನಂತಹವರು ಅವ್ಯವಸ್ಥೆ ಸಮಾಜ ವಿರುದ್ಧ ಮನದಾಳದ ಕೋಪ, ತಾಪ, ಅನ್ಯಾಯಗಳು ತಮ್ಮ ಲೇಖನಿ ಮೂಲಕ ಚಾಟಿ ಬೀಸಿ ಸರ್ವಸಮಾನತೆ ಸಮಾಜಕ್ಕಾಗಿ ಮಿಡಿಯುತ್ತಿದ್ದಾರೆ. ಬದಲಾವಣೆ ಎಂಬುದು ಪ್ರಕೃತಿಯ ನಿಯಮ ನಿಜ. ಆದರೆ ಕೆಲವೊಂದು ಬದಲಾವಣೆ ಆಗಿದೇ ಇನ್ನೂ ಪ್ರಸ್ತುತವಾಗಿ ಮುಂದುವರೆಯುತ್ತಿರುವುದು ನೋಡಿದರೆ ಮತ್ತೆ ಕೆಲ ಶತಮಾನಗಳ ಹಿಂದಕ್ಕೆ ಕರೆದುಕೊಂಡು ಹೋಗುತ್ತದೆ. ಬದುಕಿನಲ್ಲಿ ಬರುವ ಎಲ್ಲಾ ನೋವು, ಯಾತನೆ , ಸಂಕಟಗಳು ಪ್ರೀತಿಯಿಂದ ಸ್ವೀಕರಿಸಿ ನಾಳೆಯ ಖುಷಿಗಾಗಿ ಭರವಸೆಯೊಂದಿಗೆ ಬದುಕಲು ಪ್ರಯತ್ನ ನಮ್ಮದಾಗಬೇಕಿದೆ.

ಜೀವನ ಅಂದ್ರೇ ಏನೂ ಅಂತ ಅರ್ಥವಾಯಿತು. ಆದರೆ ಜೀವನದಲ್ಲಿ ‘ಇರುವುದೆಲ್ಲವ ಬಿಟ್ಟು’ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಬಯಸಿದೆಲ್ಲ ಸಿಗದಿದ್ದರೂ ಬಯಸಿದೆಲ್ಲ ದಕ್ಕಿಸಿಕೊಳ್ಳುವ ಸಾಹಸ ಮಾಡದೇ ಇರುವುದು ಮೂರ್ಖತನ. ಪ್ರಯತ್ನ‌ ಯಾರಿಗೂ ಕೈ ಬಿಟ್ಟಿಲ್ಲ, ಪ್ರಯತ್ನ ಎಂದಿಗೂ ಸೋತಿಲ್ಲ. ನೋವಿನಲ್ಲಿ ಒದ್ದಾಡುವ ಜೀವಗಳಿಗೆ ಒಂದಿಷ್ಟು ಧೈರ್ಯ ತುಂಬುವ ಮೊಂಡು ಧೈರ್ಯ ನಮ್ಮಲ್ಲಿರಬೇಕು. ತಾನೇ ಉರಿದು ಬೇರೆಯವರಿಗೆ ಬೆಳಕು ನೀಡುವ ನಂದಾದೀಪ‌ ನಾವಾಗಬೇಕು. ಹಾಗೇ ದೀಪದ ಕೆಳಗೆ ಎಂದಿಗೂ ಕತ್ತಲೇ ಆವರಿಸುತ್ತದೆ ಎಂದು ಮನಗಂಡು ಆ ಕತ್ತಲು ಕಳೆದು ಬೆಳಕು ಹರಿಸುವ ಆಕಾಶದೀಪವಾಗಿ, ವಿಶ್ವಮಾನವನಾಗಿ ಅಮೂಲ್ಯವಾದ ಉಜ್ವಲ ಬದುಕು ಸಾರ್ಥಕಪಡಿಸಿಕೊಳ್ಳಬೇಕು.

– ಬಾಲಾಜಿ ಕುಂಬಾರ, ಚಟ್ನಾಳ
Cell: 9739756216

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here