ಕಲಬುರಗಿ: ಉಪಚುನಾವಣೆಯ ಫಲಿತಾಂಶ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಆಡಳಿತಕ್ಕೆ ಸಿಕ್ಕ ಜನಮನ್ನಣೆಯಾಗಿದೆ ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಬಣ್ಣಿಸಿದ್ದಾರೆ.
೧೫ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಜನತೆ ೧೨ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಬೆಂಬಲಿಸುವುದರ ಮೂಲಕ ಸೂಕ್ತ ತೀರ್ಮಾನ ಕೈಗೊಂಡಿದ್ದಾರೆ. ಇದರಿಂದ ಕರ್ನಾಟಕ ರಾಜ್ಯದಲ್ಲಿ ಅಭಿವೃದ್ಧಿ ಮತ್ತಷ್ಟೂ ವೇಗ ಪಡೆದುಕೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಅಭಿವೃದ್ಧಿಯ ಕಾರ್ಯಗಳಿಗೆ ಜನ ಬೆಂಬಲ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಹಿಂದೆಯೂ ರಾಜ್ಯದಲ್ಲಿ ಜನಮತ ಬಿಜೆಪಿಯ ಪರವಾಗಿಯೇ ಇತ್ತು ಆದರೆ ಅಧಿಕಾರದ ಆಸೆಯಿಂದ ಕಾಂಗ್ರೇಸ್ ಮತ್ತು ಜೆಡಿಎಸ್ ಪಕ್ಷಗಳು ಒಂದಾಗಿದ್ದವು. ಈಗ ಸಂಪೂರ್ಣ ಜನಾದೇಶ ಸಿಕ್ಕಿರುವುದರಿಂದ ಮುಂದಿನ ಮೂರುವರೆ ವರ್ಷಗಳ ಕಾಲ ಮುಖ್ಯಮಂತ್ರಿಗಳಾಗಿ ಬಿ ಎಸ್ ಯಡಿಯೂರಪ್ಪನವರೇ ಆಡಳಿತ ನಡೆಸಲಿದ್ದಾರೆ ಎಂದು ಹೇಳಿದ್ದಾರೆ.