ಎರೆಯಂತೆ ಕರಕರಗಿ ಮಳಲಂತೆ ಜರಿಜರಿದು
ಕನಸಿನಲ್ಲಿ ಕಳವಳಿಸಿ ಆನು ಬೆರಗಾದೆ
ಆವಿಗೆಯ ಕಿಚ್ಚಿನಂತೆ ಸುಳಿಸುಳಿದು ಬೆಂದೆ
ಆಪತ್ತಿಗೆ ಅಖಿಯರನಾರನೂ ಕಾಣೆ. ಅರಸಿ
ಕಾಣದ ತನುವ ಬೆರಸಿ ಕೂಡದ ಸುಖವ
ಎನಗೆ ನೀ ಕರುಣಿಸಾ ಚನ್ನಮಲ್ಲಿಕಾರ್ಜುನ
-ಅಕ್ಕಮಹಾದೇವಿ
ಸ್ತ್ರೀ ಕೋಗಿಲೆ, ಸ್ತ್ರೀಕುಲ ತಿಲಕ, ಬೆಳ್ಳಂಬೆಳಗಿನ ನಿರ್ಮಲ ಜ್ಞಾನ ಎಂದು ಗುರುತಿಸಲಾಗುವ ಮಹಾದೇವಿ ಬಾಲ್ಯದಲ್ಲಿಯೇ ಕಟ್ಟಿಗೆಯಲ್ಲಿನ ಕಿಚ್ಚಿನ ಶಕ್ತಿಯಂತಿದ್ದಳು. ಸಂಸಾರದಲ್ಲಿದ್ದರೂ ಕಾಮ, ಕ್ರೋದ, ಮೋಹ, ಲೋಭ, ಮದ ಮತ್ಸರಗಳೆಂಬ ಅರಿಷಡ್ವರ್ಗಗಳನ್ನು ತನ್ನ ಮೈ-ಮನಕ್ಕೆ ಅಂಟಿಸಿಕೊಳ್ಳಲಿಲ್ಲ. ಹಿಂದೆ ಗುರು, ಮುಂದೆ ಗುರಿ ಹಾಗೂ ಧೈರ್ಯ ಹೊಂದಿದ್ದ ಆಕೆ ಇಡೀ ಮನುಕುಲಕ್ಕೆ ಸತ್ಯ ದರ್ಶನದ ಚೇತನವಾಗಿದ್ದಳು. ಇಚ್ಛೆ, ಕ್ರಿಯೆ, ಜ್ಞಾನಶಕ್ತಿಗಳ ಅಪೂರ್ವ ಸಂಗಮವಾಗಿದ್ದ ಆಕೆಗೆ ತನ್ನ ಬದುಕಿನ ದಾರಿ ಸುಸ್ಪಷ್ಟವಾಗಿತ್ತು. ಅಂತೆಯೇ ಸದಾ ಪ್ರಜ್ವಲಿಸುವ ಜ್ಯೋತಿಯಂತಿದ್ದಳು.ಹೀಗಿರುವಾಗ ಒಮ್ಮೆ ಅವಳ ಬದುಕಿನಲ್ಲೂ ಮದುವೆ ಎಂಬ ಮಹತ್ವದ ತಿರುವು ಬಂದೊದಗುತ್ತದೆ.
ಆಕೆಯದು ಉಂಡುಟ್ಟು ಹೋಗಲು ಬಂದ ಜೀವನವಲ್ಲ, ಹುಟ್ಟು ಗುಣಗಳಲ್ಲಿ ಬದುಕುವ ಬದುಕು ಕೂಡ ಅವಳದಾಗಿರಲಿಲ್ಲ. ಗಾಳಿಯ ಜೊತೆ ಸೆಣಸಾಡುವ ಶಕ್ತಿ, ತಾಕತ್ತು, ವಿಶೇಷ ಧ್ವನಿ ಇದ್ದವರಿಗೆ ಕುಕ್ಕುವವರೆ ಹೆಚ್ಚು ಎನ್ನುವಂತೆ ಅವಳ ಈ ವಿಭಿನ್ನ, ವಿಶೇಷ ನಡವಳಿಕೆಗಳು ಇತರರಿಗೆ ಅಪಾರ್ಥವಾಗಿ ಕಾಣಿಸಿದವು. ಜನರು ಅನೇಕ ರೀತಿಯಲ್ಲಿ ದೂಷಿಸತೊಡಗಿದರು. ಆದರೆ ಮಹಾದೇವಿ ಪರರ ನಿಂದೆಯನ್ನು ಪರಿಗಣಿಸಲೇ ಇಲ್ಲ. ಗುರುಗಳು ಲಿಂಗದೀಕ್ಷೆ ವೇಳೆಯಲ್ಲಿ ಹೇಳಿದ “ಶರಣ ಸತಿ ಲಿಂಗ ಪತಿ” ಎಂಬ ಮಾತು ಅವಳ ಮನಸ್ಸಿಗೆ ಅಚ್ಚೊತ್ತಿತ್ತು. ತನ್ನ ತನು, ಮನವನ್ನು ಲಿಂಗಯ್ಯನಿಗೆ ಮಾತ್ರ ಮೀಸಲಿಟ್ಟಳು.
ಜನರ ದೂಷಣೆ, ಮಗಳ ವರ್ತನೆ ಕಂಡ ಮಹಾದೇವಿಯ ತಾಯಿ ಲಿಂಗಮ್ಮನಿಗೆ ಎದೆ ಹೊಡೆದು ಹೋಗುತ್ತದೆ. “ನೀನು ಹುಟ್ಟದಿದ್ದಾಗ ಒಂದು ಚಿಂತೆ, ಹುಟ್ಟಿದಾಗ ಒಂದು ಚಿಂತೆ” ಎಂದು ನೊಂದು ನುಡಿಯುತ್ತಾಳೆ. ಹೆಣ್ಣಿಗೆ ಮದುವೆಯಿಲ್ಲದೆ ಬಾಳಿಲ್ಲ, ಬದುಕಿಲ್ಲ. ಎಲ್ಲರ ಬಾಳಿನಲ್ಲಿ ಮದುವೆ ಮಹತ್ವದ ತಿರುವು ನೀಡುತ್ತದೆ. ಹೀಗಾಗಿ ನೀನು ಮದುವೆಗೆ ಒಪ್ಪಿಗೆ ಕೊಡು ಎಂದು ಮಹಾದೇವಿಯನ್ನು ಕೇಳಿಕೊಳ್ಳುತ್ತಾಳೆ. ಸಾವಿಲ್ಲದ ರೂಹಿಲ್ಲದ ಚೆಲುವಂಗೆ ನಾನೊಲಿದೆನವ್ವ. ಎನ್ನ ಮನವ ಮುದಗೊಂಡಾತ ವಿಪರಿತ ಚರಿತನಾಗಿದ್ದಾನೆ. ಚೆನ್ನಮಲ್ಲಿಕಾರ್ಜುನನೆ ನನ್ನ ಗಂಡ. ಈ ಪರಗಂಡರನ್ನು ನಾನೊಲ್ಲೆ. ಇವರನ್ನು ಹೊಯ್ದು ಒಲೆಯೊಳಗಿಕ್ಕವ್ವ ಎಂದು ಹೇಳುತ್ತಾಳೆ.
ಉಜ್ವಲ ಜೀವನ ನಿರ್ಮಾಣವಾಗಬೇಕಾದರೆ ಅಪರಿಮಿತ ಹಂಬಲದ ಅಗತ್ಯವಿದ್ದು, ರೂಪ ಹೊಂದಿರುವುದು ಒಂದಲ್ಲ ಒಂದು ದಿನ ವಿರೂಪವಾಗುತ್ತದೆ. ಸಿಕ್ಕಿರುವುದು ಒಂದಲ್ಲ ಒಂದು ದಿನ ಕಳೆಯುತ್ತದೆ. ಆಯುಷ್ಯ ಕೂಡ ಸರಿಯುತ್ತದೆ. ಹೀಗಾಗಿ ಈ ಹುಟ್ಟು ಸಾವುಗಳ ಜಂಜಡವಿಲ್ಲದ ನಿಸ್ಸೀಮ ಚಲುವಂಗೆ ನಾನು ಒಲಿದಿದ್ದೇನೆ. ಸಾಯಲ್ಕೆ ಮುನ್ನ ಪೂಜಿಸು. ಉಸಿರು ಇರುವವರೆಗೆ ನಮ್ಮ ಕಿಮ್ಮತ್ತು. ಈ ಉಸಿರಿಗೆ ಅರ್ಥ ಬರಬೇಕಾದರೆ ಜನನ ಮರಣಗಳಿಲ್ಲದ ಪರಮಾತ್ಮನನ್ನೇ ಉಸಿರಾಗಿಸಿಕೊಳ್ಳಬೇಕು. ರೋಗಕ್ಕೆ ಮದ್ದು ಕೊಡಬಹುದು. ಮರಣಕ್ಕೆ ಮದ್ದಿಲ್ಲ. ಸಾಯುವುದು ದೇಹ; ಜೀವಕ್ಕೆ ಸಾವಿಲ್ಲ. ಅಂತಹ ಅದ್ವಿತೀಯನಿಗೆ ನಾನು ವರಿಸಿದ್ದೇನೆ ಎಂದು ತಾಯಿಗೆ ತಿಳಿಸಿ ಹೇಳುತ್ತಾಳೆ.
ಸಾಯುವುದು, ಹುಟ್ಟುವುದು ದೇವರಲ್ಲ. ಹುಟ್ಟು- ಸಾವುಗಳ ವಿಪರೀತ ದೇವ. ದೇವರಿಗೆ ಸ್ಪರ್ಧಿಯೇ ಇಲ್ಲ. ಆತ ಅದ್ವಿತೀಯ. ದೇವರಿಗೆ ಭಯವಿಲ್ಲ. ಭವವಿಲ್ಲ. ದೇವರಿಗೆ ಕುರುಹಿಲ್ಲ. ದೇವರು ಹೆಣ್ಣಲ್ಲ. ಗಂಡಲ್ಲ. ಆತ ವಿಶೇಷಲಿಂಗಿಯೂ ಅಲ್ಲ. ಹುಟ್ಟಿ ಬರುವವ ದೇವರು ಅಲ್ಲ. ಆತ ನಿರಾಕಾರ. ಆತ ಪರಮ ಚೈತನ್ಯ, ಆತ ಪರಮ ಸ್ವರೂಪಿ, ಜಂಗಮ ಸ್ವರೂಪಿ (ಸದಾ ಚಲನಶೀಲವಾಗಿರುವಾತ) ಎಂದು ಮಹಾದೇವಿ ತನ್ನ ಪತಿಯ ಕುರುಹು, ಚೆಲುವನ್ನು ಕುರಿತು ಲಿಂಗಮ್ಮನಿಗೆ ಸಮಜಾಯಿಷಿ ನೀಡುತ್ತಾಳೆ.
(ಸ್ಥಳ: ಎಚ್.ಸಿ.ಜಿ. ಆಸ್ಪತ್ರೆ ಎದುರು, ಖೂಬಾ ಪ್ಲಾಟ್, ಕಲಬುರಗಿ)