ಕಲಬುರಗಿ ವಿಮಾನ ನಿಲ್ದಾಣದಿಂದ ಮತ್ತೊಂದು ವಿಮಾನ ಸೇವೆ ಆರಂಭ

0
197

ಕಲಬುರಗಿ: ಕಳೆದ ನವೆಂಬರ್ 22 ರಂದು ಲೋಕಾರ್ಪಣೆಗೊಂಡು ಸ್ಟಾರ್ ಏರ್ ಸಂಸ್ಥೆ ಮೂಲಕ ನಾಗರಿಕ ವಿಮಾನಯಾನ ಸಂಚಾರ ಅರಂಭಿಸಿದ ಕಲಬುರಗಿ ವಿಮಾನ ನಿಲ್ದಾಣದಿಂದ ತಿಂಗಳು ಮುಗಿಯುತ್ತಿದಂತೆ ಅಲಾಯನ್ಸ್ ಏರ್ ಸಂಸ್ಥೆಯು ಸಹ ಶುಕ್ರವಾರದಿಂದ ತನ್ನ ನಾಗರಿಕ ವಿಮಾನ ಸೇವೆ ಅಧಿಕೃತವಾಗಿ ಅರಂಭಿಸಿದೆ.

ಶುಕ್ರವಾರ ಬೆಳಿಗ್ಗೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 10-54 ಗಂಟೆಗೆ ಹೊರಟ ಂಖಿಖ ಮಾದರಿಯ 72 ಸೀಟರ್‍ವುಳ್ಳ 91509 ಸಂಖ್ಯೆಯ ವಿಮಾನವು ಮಧ್ಯಾಹ್ನ 12-50ಕ್ಕೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಭೂಸ್ಪರ್ಶ ಮಾಡಿತು. ಅಲಾಯನ್ಸ್ ಏರ್ ಸಂಸ್ಥೆಯ ವಿಮಾನ ಮೊದಲ ಬಾರಿಗೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರಿಂದ ವಿಮಾನಕ್ಕೆ ನೀರು ಚಿಮ್ಮುವ ಮೂಲಕ ವಾಟರ್ ಸಲ್ಯೂಟ್ ನೀಡಲಾಯಿತು.

Contact Your\'s Advertisement; 9902492681

ಅಲಾಯನ್ಸ್ ಏರ್ ಸಂಸ್ಥೆಯ ಬೆಂಗಳೂರು ಮೂಲದ ಮುಖ್ಯ ಪೈಲಟ್ ಎ.ಮಾಕನ್, ದೆಹಲಿ ಮೂಲದ ಮಹಿಳಾ ಕೋ-ಪೈಲಟ್ ಶಾಲು ಅವರು ಸುರಕ್ಷತೆಯಿಂದ ವಿಮಾನವನ್ನು ಲ್ಯಾಂಡ್ ಮಾಡಿದರು. ಇಂಜಿನೀಯರ್ ಕ್ರಾಂತಿಕುಮಾರ ಅವರ ತಂಡ ಜೊತೆಯಲ್ಲಿತ್ತು. ಬೆಂಗಳೂರಿನಿಂದ ಶಾಸಕ ಬಸವರಾಜ ಮತ್ತಿಮೂಡ, ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ ಸೇರಿದಂತೆ ವಿಮಾನದಲ್ಲಿ 56 ಪ್ರಯಾಣಿಕರು ಆಗಮಿಸಿದ್ದರು. ಅಷ್ಟೆ ಸಂಖ್ಯೆ ಪ್ರಯಾಣಿಕರು ಇಲ್ಲಿಂದ ಬೆಂಗಳೂರಿಗೆ ಗಗನ ಹಾರಾಟ ಆರಂಭಿಸಿದರು.

ಈ ಸಂದರ್ಭದಲ್ಲಿ ಶಾಸಕ ದತ್ತಾತ್ರೇಯ ಪಾಟೀಲ ಸಿ. ರೇವೂರ, ವಿಧಾನ ಪರಿಷತ್ತಿನ ಶಾಸಕ ಬಿ.ಜಿ.ಪಾಟೀಲ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ, ಕಲಬುರಗಿ ವಿಮಾನ ನಿಲ್ದಾಣದ ಎಎಏ ನಿರ್ದೇಶಕ ಜ್ಣಾನೇಶ್ವರ ರಾವ್, ಡಿಸಿಪಿ ಕಿಶೋರ ಬಾಬು, ಅಲಾಯನ್ಸ್ ಏರ್ ಸಂಸ್ಥೆಯ ವಾಣಿಜ್ಯ ವಿಭಾಗದ ಮುಖ್ಯಸ್ಥ ಮನು ಆನಂದ, ವಾಣಿಜ್ಯ ವಿಭಾಗದ ಮ್ಯಾನೇಜರ್ ಶಿವಾನಿ ವಿಜಾನಿ, ಕಲಬುರಗಿ ವಿಮಾನ ನಿಲ್ದಾಣದ ಮ್ಯಾನೇಜರ್ ಉಪೇಂದ್ರ ಸಿಂಗ್ ಶೇಖಾವತ್, ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ನೂತನ ವಿಮಾನದ ಪೈಲಟ್ ಮತ್ತು ಯಾತ್ರಿಕರನ್ನು ಸ್ವಾಗತಿಸಿದರು.

ಪ್ರಸ್ತುತ ಸ್ಟಾರ್ ಏರ್ ಸಂಸ್ಥೆಯು ಕಳೆದ ನವೆಂಬರ್ 22 ರಿಂದ ಸೋಮವಾರ, ಶುಕ್ರವಾರ ಮತ್ತು ಶನಿವಾರ ಹೀಗೆ ವಾರದಲ್ಲಿ ಮೂರು ದಿನ ಕಲಬುರಗಿ-ಬೆಂಗಳೂರು ಮಧ್ಯೆ ವಿಮಾನ ಸೇವೆ ನೀಡುತ್ತಿದೆ. ಇದೀಗ ಅಲಾಯನ್ಸ್ ಎರ್ ಸಂಸ್ಥೆಯು ಕಲಬುರಗಿ-ಬೆಂಗಳೂರು-ಮೈಸೂರು ಮಧ್ಯೆ ಸಂಚಾರ ಆರಂಭಿಸಿದ್ದು, ಇದು ಎರಡನೇ ವಿಮಾನವಾಗಿದಲ್ಲದೆ ವಿಮಾನದಲ್ಲಿ ಸಂಚರಿಸುವರಲ್ಲಿ ಸಂತಸ ಮೂಡಿಸಿದೆ.

ಅಲಾಯನ್ಸ್ ಏರ್ ವಿಮಾನದ ಸಮಯ: ವಾರದ ಏಳು ದಿನ ಸಂಚರಿಸುವ ಅಲಾಯನ್ಸ್ ಏರ್ ಸಂಸ್ಥೆಯ ಈ ವಿಮಾನವು ಮಂಗಳವಾರ ಹೊರತುಪಡಿಸಿ ಉಳಿದ ಆರು ದಿನ 91897 ಸಂಖ್ಯೆಯ ವಿಮಾನ ಮೈಸೂರಿನಿಂದ ಬೆಳಿಗ್ಗೆ 8.30ಕ್ಕೆ ಹೊರಟು 9.10 ಗಂಟೆಗೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದೆ. ಇದೇ ವಿಮಾನ 91509 ಸಂಖ್ಯೆಯಿಂದ ಬೆಂಗಳೂರಿನಿಂದ 9-50ಕ್ಕೆ ಹೊರಟು ಕಲಬುರಗಿಗೆ 11.25 ಗಂಟೆಗೆ ತಲುಪಲಿದೆ.

ಅದೇ ರೀತಿ 91510 ಸಂಖ್ಯೆಯ ವಿಮಾನ ಕಲಬುರಗಿಯಿಂದ ಬೆಳಿಗ್ಗೆ 11.50ಕ್ಕೆ ಹೊರಟು ಮಧ್ಯಾಹ್ನ 1.30 ಗಂಟೆಗೆ ಬೆಂಗಳೂರು ತಲುಪಲಿದೆ. ಇದೇ ವಿಮಾನ 91898 ಸಂಖ್ಯೆಯಿಂದ ಬೆಂಗಳೂರಿನಿಂದ ಮಧ್ಯಾಹ್ನ 2 ಗಂಟೆಗೆ ಹೊರಟು ಮೈಸೂರಿಗೆ 2.50 ಗಂಟೆಗೆ ತಲುಪಲಿದೆ.

ಮಂಗಳವಾರ ಮಾತ್ರ ಸಮಯದಲ್ಲಿ ಬದಲಾವಣೆ: ಮೈಸೂರಿನಿಂದ ಬೆಳಿಗ್ಗೆ 10.25ಕ್ಕೆ ಹೊರಟು 11.05 ಗಂಟೆಗೆ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ 11-40ಕ್ಕೆ ಹೊರಟು ಕಲಬುರಗಿಗೆ ಮಧ್ಯಾಹ್ನ 1.20ಕ್ಕೆ ಆಗಮಿಸಲಿದೆ. ಅದೇ ರೀತಿ ಕಲಬುರಗಿಯಿಂದ ಮಧ್ಯಾಹ್ನ 01-45ಕ್ಕೆ ಹೊರಟು 3.25 ಗಂಟೆಗೆ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ ಮಧ್ಯಾಹ್ನ 3.45ಕ್ಕೆ ಹೊರಟು ಮೈಸೂರಿಗೆ ಸಾಯಂಕಾಲ 4.40 ಗಂಟೆಗೆ ತಲುಪಲಿದೆ.

ಕೋಮಲ್ ಪಾಟೀಲಗೆ ಹೂಗುಚ್ಛ: ಅಲಾಯನ್ಸ್ ಏರ್ ಸಂಸ್ಥೆಯ ಕಲಬುರಗಿ-ಬೆಂಗಳೂರು ಮಧ್ಯದ ಆರಂಭಿಕ ಹಾರಾಟದಲ್ಲಿ ಪ್ರಯಾಣಿಸಲು ಪ್ರಥಮವಾಗಿ ಟಿಕೇಟ್ ಬುಕ್ ಮಾಡಿದ ಕೋಮಲ ಪಾಟೀಲ ಅವರಿಗೆ ಗಣ್ಯರು ಬೋಡಿಂಗ್ ಪಾಸ್ ಮತ್ತು ಹೂಗುಚ್ಛ ನೀಡಿ ಪ್ರಯಾಣಕ್ಕೆ ಶುಭ ಕೋರಿದರು.

ಮಾರ್ಚ್ ನಂತರ ದೆಹಲಿ, ತಿರುಪತಿಗೆ ವಿಮಾನ ಸೇವೆ: ಕಲಬುರಗಿ ವಿಮಾನ ನಿಲ್ದಾಣದ ಎಎಏ ನಿರ್ದೇಶಕ ಜ್ಣಾನೇಶ್ವರ ರಾವ್ ಅವರು ಮಾತನಾಡಿ ಕಲಬುರಗಿ ವಿಮಾನ ನಿಲ್ದಾಣ ಲೋಕಾರ್ಪಣೆಗೊಂಡು ಒಂದು ತಿಂಗಳು ಮಾತ್ರ ಕಳೆದಿದ್ದು, ವಾಯು ಸಂಚಾರಕ್ಕೆ ಇಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮುಂದಿನ ದಿನದಲ್ಲಿ ಇನ್ನಷ್ಟು ಸಂಸ್ಥೆಗಳು ಇಲ್ಲಿಂದ ವಾಣಿಜ್ಯ ಸಂಚಾರ ಆರಂಭಿಸಬೇಕಿದೆ ಎಂದರು.

ಸ್ಟಾರ್ ಏರ್ ಸಂಸ್ಥೆಯು ಕಲಬುರಗಿ-ಬೆಂಗಳೂರು, ಕಲಬುರಗಿ-ಹಿಂಡನ್ (ನವದೆಹಲಿ) ಹಾಗೂ ಕಲಬುರಗಿ-ತಿರುಪತಿ ನಡುವೆ ನಾಗರಿಕ ವಿಮಾನ ಹಾರಾಟಕ್ಕೆ ಈಗಾಗಲೆ ಡಿಜಿಸಿಎ ಅನುಮೋದನೆ ನೀಡಿದ್ದು, ಸದರಿ ಸಂಸ್ಥೆಯು ಪ್ರಸ್ತುತ ಕಲಬುರಗಿ-ಬೆಂಗಳೂರು ಮಧ್ಯೆ ಸೇವೆ ನೀಡುತ್ತಿದೆ. ಮುಂದಿನ ಮಾರ್ಚ್ ನಂತರ ಕಲಬುರಗಿ-ಹಿಂಡನ್ (ನವದೆಹಲಿ) ಹಾಗೂ ಕಲಬುರಗಿ-ತಿರುಪತಿ ನಡುವೆ ವಿಮಾನ ಸಂಚಾರ ಆರಂಭಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here