ಆಳಂದ: ತಾಲೂಕಿನ ಗಡಿಗ್ರಾಮ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಸರ್ಕಾರಿ ಶಾಲೆಗಳ ಮೂಲಭೂತ ಸೌಕರ್ಯಕ್ಕೆ ತಮ್ಮ ಅಧಿಕಾರ ಅವಧಿಯಲ್ಲಿ ಎಲ್ಲಾ ರೀತಿಯ ವ್ಯವಸ್ಥೆ ಮಾಡುವುದಕ್ಕೆ ಶ್ರಮಿಸುವುದಾಗಿ ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ್ ಹೇಳಿದರು.
ಆಳಂದ ತಾಲೂಕಿನ ಗಡಿಗ್ರಾಮ ಶಿರೂರ್ ಜಿ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅನುದಾನದ ೧೦ ಲಕ್ಷ ರೂಪಾಯಿ ವೆಚ್ಚದ ಶಾಲಾ ಕೋಣೆಯ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಗಡಿ ಗ್ರಾಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಸರ್ಕಾರಿ ಶಾಲೆಗೆ ಬಂದು ವಿದ್ಯಾಭ್ಯಾಸ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಸರಕಾರವು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ ಇದರ ಲಾಭವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ತಾವು ಶಕ್ತಿಮೀರಿ ಶ್ರಮಿಸುವುದಾಗಿ ಹೇಳಿದರು.
ರಾಜ್ಯದಲ್ಲಿ ನಮ್ಮದೇ ಪಕ್ಷದ ಸರ್ಕಾರ ಅಸ್ತಿತ್ವದಲ್ಲಿರುವುದರಿಂದ ಕ್ಷೇತ್ರಕ್ಕೆ ಅನುದಾನ ತರುವುದಕ್ಕೆ ಸಾಧ್ಯವಾಗುತ್ತಿದೆ ಈ ಅಧಿಕಾರ ಅವಧಿಯಲ್ಲಿ ತಾಲೂಕಿನ ಎಲ್ಲ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಪ್ರಯತ್ನ ಮಾಡುತ್ತಿದ್ದೇನೆ ಈ ನಿಟ್ಟಿನಲ್ಲಿ ಜನಗಳ ಮತ್ತು ಅಧಿಕಾರಿ ವರ್ಗಗಳ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯ ಹರ್ಷಾನಂದ ಗುತ್ತೇದಾರ, ಡಿಸಿಸಿ ಬ್ಯಾಂಕ್ ನಿರ್ದೇಶಕ ಅಶೋಕ ಸಾವಳೇಶ್ವರ, ತಾ.ಪಂ ಉಪಾಧ್ಯಕ್ಷ ಗುರುನಾಥ ಪಾಟೀಲ, ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗೂಳೆ, ವಿಎಸ್‌ಎಸ್‌ಎನ್ ಅಧ್ಯಕ್ಷ ಉದಯಕುಮಾರ ಕಂದಗೂಳೆ, ಹಿರಿಯ ಮುಖಂಡ ರಾಜಶೇಖರ ಮಲಶೆಟ್ಟಿ, ಅಧಿಕಾರಿಗಳಾದ ಈರಣ್ಣ, ಕರಬಸಪ್ಪ, ಅರುಣಕುಮಾರ ಇದ್ದರು.