ಕಲಬುರಗಿ : ಕನ್ನಡ ಸಾಹಿತ್ಯ ಪರಿಷತ್ತು ಆರು ಕೋಟಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ. ನಮ್ಮೆಲ್ಲರ ತೆರಿಗೆ ಹಣದಿಂದ ಸರ್ಕಾರ ಆಡಳಿತ ನಡೆಸುತ್ತದೆ. ಪರಿಷತ್ ಸರ್ಕಾರದ ಅಡಿಯಾಳಾಗಿ ಕಾರ್ಯ ನಿರ್ವಹಿಸಬಾರದು ಎಂದು ಪ್ರಗತಿಪರ ಚಿಂತಕಿ ಕೆ.ನೀಲಾ ಅಭಿಪ್ರಾಯಪಟ್ಟರು.
ಇಲ್ಲಿನ ವಿವಿಯ ಶ್ರೀವಿಜಯ ಪ್ರಧಾನ ವೇದಿಕೆಯಲ್ಲಿ ನಡೆದ ಮೊದಲ ದಿನದ ಸಮಾರಂಭದಲ್ಲಿ ಮಾತನಾಡಿದ ಅವರು, ಆಳುವ ವರ್ಗದ ಅಡಿಯಾಳಿನಂತೆ ವರ್ತಿಸಿ ಪರಿಷತ್ತಿನ ಸ್ವಾಯತ್ತತೆಗೆ ಧಕ್ಕೆ ಉಂಟು ಮಾಡಿರುವ ಅಧ್ಯಕ್ಷ ಮನು ಬಳಿಗಾರ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಕಲ್ಯಾಣ ಕರ್ನಾಟಕ ಅಂದು ಇಂದು ಮುಂದು ಎಂಬ ಗೋಷ್ಠಿಯಲ್ಲಿ ಪ್ರಬಂಧ ಮಂಡಿಸಿದ ಅವರು, ಪರಿಷತ್ತಿನ ಅಧ್ಯಕ್ಷರು ಶೃಂಗೇರಿ ಸಮ್ಮೇಳನಕ್ಕೆ ತೆರಿಗೆ ಹಣವನ್ನು ನೀಡಲಿಲ್ಲ. ಸಮ್ಮೇಳನದ ಅಧ್ಯಕ್ಷರನ್ನು ಆಯ್ಕೆ ಮಾಡಿದ ಚುನಾಯಿತ ಜಿಲ್ಲಾ ಘಟಕದ ಆಯ್ಕೆಯ ಪರವಾಗಿ ನಿಲ್ಲಲಿಲ್ಲ. ಹಾಗೆಯೇ ಆಳುವ ವರ್ಗದ ಪರವಾಗಿ ನಿಂತು ಸಮಜಾಯಿಷಿ ನೀಡಬೇಕಿರಲಿಲ್ಲ ಎಂದು ಬಿಜೆಪಿ ಸರ್ಕಾರವನ್ನು ಟೀಕಿಸಿದರು.
ಆಳುವ ವರ್ಗ ಅಧಿಕಾರ ನಡೆಸಬೇಕೇ ಹೊರತು ಪರಿಷತ್ತಿನ ಆಯ್ಕೆಯಲ್ಲಿ ಹಸ್ತಕ್ಷೇಪ ಮಾಡಬಾರದು. ಸರ್ವಾಧಿಕಾರಿಯಂತೆ ವರ್ತಿಸುವುದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಹೇಳಿದರು.
ಪೆಟ್ರೋಲ್ ಬಾಂಬ್ ಹಾಕುತ್ತೇವೆ ಎಂದು ಬೆದರಿಸುವವರನ್ನು ಬಂಧಿಸಿ ಕ್ರಮ ತೆಗೆದುಕೊಳ್ಳಬೇಕಿತ್ತು. ಈ ಫ್ಯಾಸಿಸ್ಟ್ ಧೋರಣೆಯನ್ನು ಖಂಡಿಸುವುದಾಗಿ ತಿಳಿಸಿದರು. ವೇದಿಕೆಯಲ್ಲಿ ಸರ್ಕಾರದ ಪ್ರತಿನಿಧಿಗಳು ಕೂತಿರುವಂತೆ, ನೀಲಾ ಅವರು ಕವಿತೆ ವಾಚಿಸಿದ್ದಕ್ಕಾಗಿ ಕವಿಯ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದು ಸರಿಯಲ್ಲ. ಹಾರುವ ಹಕ್ಕಿಗೆ ಬಂಧನ ಹಾಕುವ ಹಾಗಿಲ್ಲ. ಕೂಡಲೇ ಸರ್ಕಾರವು ಪ್ರಕರಣವನ್ನು ಹಿಂತೆಗೆದುಕೊಳ್ಳಬೇಕು ಒತ್ತಾಯಿಸಿದರು.
ಈ ಹಿಂದೆ ಎಚ್ಕೆ ಆರ್ ಡಿಬಿ ವತಿಯಿಂದ ಈ ಭಾಗದ ಲೇಖಕರನ್ನು ಪ್ರೋತ್ಸಾಹಿಸಲು ಪುಸ್ತಕ ಖರೀದಿ ಮಾಡಿತ್ತು. ಆದರೆ ಈ ಬಾರಿ ಅದರಿಂದ ಏನು ಪ್ರಯೋಜನ ಎಂದು ಖರೀದಿ ನಿಲ್ಲಿಸಿದ್ದಾರೆ. ಅಭಿವೃದ್ಧಿ ಅಂದರೆ ಬರೀ ರಸ್ತೆ ಸುಧಾರಣೆ ಅಲ್ಲ. ಸಬಲೀಕರಣಕ್ಕೆ ಆರ್ಥಿಕ ವ್ಯವಸ್ಥೆ ಒದಗಿಸುವುದು ಸರ್ಕಾರದ ಕರ್ತವ್ಯ ಎಂದು ಅವರು ತಿಳಿಸಿದರು.