ಕಲಬುರಗಿ: ರೈತರ, ಕಾರ್ಮಿಕರ, ಶೋಷಿತರ, ಬಡವರ, ನಗರ್ತಿಕರ ಪರವಾಗಿ ಕಾರ್ಯನಿರ್ವಹಿಸದ ಮಾಧ್ಯಮಗಳು ಬಹುಬೇಗ ಬಾಗಿಲು ಹಾಕಿಕೊಳ್ಳುವುದು ನಿಶ್ಚಿತವೆಂದು ಹಿರಿಯ ಪತ್ರಕರ್ತ ರವೀಂದ್ರ ಭಟ್ಟ ಅಭಿಪ್ರಾಯಿಸಿದ್ದಾರೆ.
ಸವಾಲುಗಳು ಕುರಿತ ಗೋಷ್ಟಿಯಲ್ಲಿ ಮಾತನಾಡಿದ ಅವರು, ಜನರ ದನಿಗೆ ವೇದಿಕೆ ಕಲ್ಪಿಸುವುದು ಮಾಧ್ಯಮಗಳ ಜವಾಬ್ದಾರಿ. ಇದನ್ನು ಪಾಲಿಸದ್ದರೆ ಪತ್ರಿಕೆ, ಟಿವಿ ಮಾಧ್ಯಮಗಳನ್ನು ಬಿಟ್ಟು, ಸಾಮಾಜಿಕ ಜಾಲತಾಣಗಳತ್ತ ಮುಖ ಮಾಡುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಕನ್ನಡ ಮಾಧ್ಯಮಗಳ ಬಗ್ಗೆ ಮಾತ್ರ ಮಾತನಾಡುವುದಾದರೆ ಕನ್ನಡ ಭಾಷೆಗೂ ಮಾಧ್ಯಮಕ್ಕೂ ಬಿಡಿಸಲಾರದ ನಂಟಿದೆ. ಕನ್ನಡ ಉಳಿದರೆ ಮಾತ್ರ ಕನ್ನಡ ಪತ್ರಿಕೆ, ಮಾಧ್ಯಮಗಳು ಉಳಿಯಲು ಸಾಧ್ಯ. ಹೀಗಾಗಿ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಜೊತೆಯಾಗಿ ಸಾಗಬೇಕಾಗಿದೆ ಎಂದು ಅವರು ಹೇಳಿದರು.
ಇವತ್ತಿನ ಆಧುನಿಕ ಯುಗದಲ್ಲಿ ಮೊಬೈಲ್‍ಗಳೆ ಎಲ್ಲವೂ ಆಗಿದೆ. ಇಂತಹ ಹೊತ್ತಿನಲ್ಲಿ ಮಾಧ್ಯಮಗಳು ವಿಶ್ವಾಸರ್ಹತೆಯ ಕಡೆಗೆ ಹೆಚ್ಚು ಒತ್ತು ಕೊಡಬೇಕು. ಒಂದು ಅಧ್ಯಯನದ ಪ್ರಕಾರ ಟಿವಿ ಚಾನೆಲ್‍ಗಳು ಬಂದ ಮೇಲೆ ಪತ್ರಿಕೆಗಳನ್ನು ಓದುವವರ ಸಂಖ್ಯೆ ಹೆಚ್ಚಾಗಿವೆ ಎನ್ನಲಾಗುತ್ತಿದೆ. ಒಂದು ವೇಳೆ ಪತ್ರಿಕೆಗಳು ವಿಶ್ವಾಸರ್ಹತೆಯನ್ನು ಕಂಡರೆ ಅದರಿಂದಲೂ ದೂರ ಸರಿಯಲು ಹೆಚ್ಚು ಕಾಲ ಉಳಿಯಲ್ಲವೆಂದು ಅವರು ಎಚ್ಚರಿಕೆ ನೀಡಿದರು.
ಹಿರಿಯ ಪತ್ರಕರ್ತ ಕೆ.ಎನ್.ಚನ್ನೇಗೌಡ ಮಾತನಾಡಿ, ಪತ್ರಿಕೆ ಮಾಧ್ಯಮಕ್ಕಿರುವ ಬಹುದೊಡ್ಡ ಸವಾಲು ಟಿವಿ ಮಾಧ್ಯಮವಲ್ಲ. ಬದಲಿಗೆ, ಸಾಮಾಜಿಕ ಜಾಲತಾಣಗಳಾಗಿವೆ. ಎಲ್ಲರ ಕೈಯಲ್ಲಿ ಮೊಬೈಲ್ ಇರುವುದರಿಂದ ಫೇಸ್‍ಬುಕ್, ವಾಟ್ಸಾಪ್‍ಗೆ ಚಟಕ್ಕೆ ಬೀಳುತ್ತಿದ್ದಾರೆ. ಇವರನ್ನು ಪುನಃ ಪತ್ರಿಕೆಗಳತ್ತ ಮುಖ ಮಾಡುವಂತೆ ಮಾಡಬೇಕಾದದ್ದು ನಮ್ಮೆಲ್ಲರಿಗಿರುವ ದೊಡ್ಡ ಜವಾಬ್ದಾರಿಯೆಂದು ತಿಳಿಸಿದರು.
ಪತ್ರಿಕಾಲಯಗಳಲ್ಲಿ ನಿಪುಣ ಕೆಲಸಗಾರರ ಕೊರತೆ, ಸೇವಾ ಭದ್ರತೆ ಇಲ್ಲದಿರುವುದು ಹಾಗೂ ಪತ್ರಿಕಾ ವಿತರಕರ ಕೊರತೆಯೂ ಕೂಡ ಪತ್ರಿಕಾ ಕ್ಷೇತ್ರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದೆಲ್ಲವನ್ನು ನಿಭಾಯಿಸುವ ನಿಟ್ಟಿನಲ್ಲಿ ನಾವೆಲ್ಲರು ಒಟ್ಟಾಗಿ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.
ಈ ವೇಳೆ ಪತ್ರಕರ್ತರಾದ ರಮಾಕಾಂತ್, ಕೋಡಿಬೆಟ್ಟು ರಾಜಲಕ್ಷ್ಮಿ, ಸುಭಾಷ್ ಹೂಗಾರ್, ಹರಿಪ್ರಕಾಶ್ ಕೋಣೆಮನೆ ಮತ್ತಿತರರಿದ್ದರು.