ಸುರಪುರ: ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದಿಂದ ನಗರದ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಂಡಿರುವ ಕನ್ನಡ ಜಾಗೃತಿ ಹಾಗು ಸಾಧಕರಿಗೆ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕನ್ನಡ ಭುವನೇಶ್ವರಿ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.
ಮದ್ಹ್ಯಾನ ೧ ಗಂಟೆಯ ಸುಮಾರಿಗೆ ಡಾ: ಬಾಬಾ ಸಾಹೇಬ ಅಂಬೇಡ್ಕರ ವೃತ್ತದಲ್ಲಿ ಸೇರಿದ ಕರವೇ ನೂರಾರು ಸಂಖ್ಯೆಯ ಕಾರ್ಯಕರ್ತರು ಕನ್ನಡ ಧ್ವಜ ಹಿಡಿದು ಶಾಲು ಧರಿಸಿ ಕನ್ನಡ ಜಯಘೋಷ ಮೊಳಗಿಸಿದರು.ಶಾಸಕ ನರಸಿಂಹ ನಾಯಕ (ರಾಜುಗೌಡ) ಆಗಮಿಸಿ ಭುವನೇಶ್ವರಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.ನಂತರ ಮಹಾತ್ಮ ಗಾಂಧಿ ವೃತ್ತದ ಮೂಲಕ ದರಬಾರ ಮಾರ್ಗವಾಗಿ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನ ಆವರಣದ ವೇದಿಕೆ ಸ್ಥಳಕ್ಕೆ ತಲುಪಿತು.
ಕರವೇ ಎಲ್ಲಾ ಕಾರ್ಯಕರ್ತರು ಕನ್ನಡ ಧ್ವಜ ಹಿಡಿದು ಮೊಳಗಿಸಿದ ಕನ್ನಡ ಜಯಘೋಷ ಮುಗಿಲು ಮುಟ್ಟಿತ್ತು,ಇದರ ಮದ್ಯೆ ಅಪ್ಪಾಜಿ ಗ್ರಾಮೀಣಾಭಿವೃಧ್ಧಿ ಸಂಸ್ಥೆ ಹಾಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನೀಡಲಾಗಿದ್ದ ಕನ್ನಡ ಕಲಾ ತಂಡಗಳ ಡೊಳ್ಳು ಕುಣಿತ,ವೀರಗಾಸೆ ಮತ್ತು ಬಿಲ್ವಿದ್ಯೆ ಪ್ರದರ್ಶಕರು ಮೆರವಣಗೆಯ ಕೇಂದ್ರ ಬಿಂದುವೆನಿಸಿ ನೋಡುಗರ ಮನಸೆಳೆದರು.ಕನ್ನಡ ಅಭಿಮಾಣದ ಗೀತೆಗಳಿಗೆ ಕುಣಿದು ಕುಪ್ಪಳಿಸಿದ ಕನ್ನಡಾಭಿಮಾನಿಗಳ ಸದ್ದು ನಗರದಲ್ಲಿ ಜೋರಾಗಿ ಕಂಡುಬಂತು.
ಮೆರವಣಿಗೆಯಲ್ಲಿ ಪ್ರಮುಖರಾದ ಕರವೇ ರಾಜ್ಯ ಪ್ರಧಾನ ಸಂಚಾಲಕ ಬಸವರಾಜ ಪಡಕೋಟೆ,ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮರಡಿ,ಜಿಲ್ಲಾ ಸಂಘಟನಾ ಕಾರ್ಯದರ್ಶಿ ಭೀಮು ನಾಯಕ ಮಲ್ಲಿಬಾವಿ,ತಾಲೂಕು ಗೌರವಾಧ್ಯಕ್ಷ ವೆಂಕಟೇಶ ಪ್ಯಾಪ್ಲಿ,ಶಿವಮೋನಯ್ಯ ನಾಯಕ ದೇವರಗೋನಾಲ,ಹಣಮಗೌಡ ಶಖಾಪುರ,ಅಂಬ್ಲಯ್ಯ ಬೇಟೆಗಾರ ಸೇರಿದಂತೆ ನೂರಾರು ಜನರಿದ್ದರು.